Kodagu: ವಾಸನೆ ಸಹಿತ ಹಳದಿ ಬಣ್ಣ ಕೊಳಚೆ ನೀರೇ ಕಟ್ಟೆಹಾಡಿ ಜನರಿಗೆ ಜೀವಜಲ!

Published : Apr 17, 2025, 09:33 PM ISTUpdated : Apr 17, 2025, 09:47 PM IST
Kodagu: ವಾಸನೆ ಸಹಿತ ಹಳದಿ ಬಣ್ಣ ಕೊಳಚೆ ನೀರೇ ಕಟ್ಟೆಹಾಡಿ ಜನರಿಗೆ ಜೀವಜಲ!

ಸಾರಾಂಶ

ಜಿಲ್ಲೆಯಲ್ಲಿ 4 ನದಿಗಳು ಹುಟ್ಟಿ ಹರಿದರೂ ಆ ಒಂದು ಗ್ರಾಮಕ್ಕೆ ಮಾತ್ರ ಶುದ್ಧ ಕುಡಿಯುವ ನೀರಿಗೆ ಬರ ಬಂದಿದೆ. ಊರಿನಿಂದ ನೂರೇ ಮೀಟರ್ ದೂರದಲ್ಲಿ ಜಲಾಶಯವಿದ್ದರೂ ಇವರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಿಲ್ಲ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.17): ಜಿಲ್ಲೆಯಲ್ಲಿ 4 ನದಿಗಳು ಹುಟ್ಟಿ ಹರಿದರೂ ಆ ಒಂದು ಗ್ರಾಮಕ್ಕೆ ಮಾತ್ರ ಶುದ್ಧ ಕುಡಿಯುವ ನೀರಿಗೆ ಬರ ಬಂದಿದೆ. ಊರಿನಿಂದ ನೂರೇ ಮೀಟರ್ ದೂರದಲ್ಲಿ ಜಲಾಶಯವಿದ್ದರೂ ಇವರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಿಲ್ಲ. ಹೌದು ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಾಡಿ ಗಿರಿಜನ ಕಾಲೋನಿಯಲ್ಲಿ ಕನಿಷ್ಠ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ತಾವೇ ತೆಗೆದಿರುವ ಗುಂಡಿಯ ಕೊಳಚೆ ನೀರನ್ನೇ ಕುಡಿಯುತ್ತಿದ್ದಾರೆ. ಚಿಕ್ಲಿಹೊಳೆ ಜಲಾಶಯದ ಕೆಳಭಾಗದಲ್ಲೇ ಈ ಕಟ್ಟೆಹಾಡಿ ಗ್ರಾಮವಿದ್ದು, ಇಲ್ಲಿ 40 ಕುಟುಂಬಗಳಿವೆ. ಈ ಹಾಡಿಗೆ ಗ್ರಾಮದಲ್ಲೇ ಇರುವ ಕೊಳವೆ ಬಾವಿಯಿಂದ ಎರಡು ದಿನಗಳಿಗೆ ಒಮ್ಮೆ ನೀರು ಪೂರೈಸಲಾಗುತ್ತದೆ. 

ಆದರೆ ಕಳೆದ 15 ವರ್ಷಗಳ ಹಿಂದೆ ಕೊರೆಯಿಸಿರುವ ಕೊಳವೆ ಬಾವಿಯಲ್ಲಿ ಕಬ್ಬಿಣದ ಪೈಪುಗಳು ತುಕ್ಕು ಹಿಡಿದು ಈ ತುಕ್ಕಿನ ಅಂಶವೆಲ್ಲಾ ನೀರಿನಲ್ಲಿ ಬೆರೆತು ಹೋಗಿದೆ. ಹೀಗಾಗಿ ಕೊಳವೆ ಬಾವಿಯಿಂದ ಪೂರೈಸುತ್ತಿರುವ ನೀರು ವಾಸನೆಯಿಂದ ಕೂಡಿದ್ದು ಹಳದಿ ಬಣ್ಣ ಮಿಶ್ರಿತವಾಗಿ ಬರುತ್ತಿದೆ. ಕಳೆದ ಐದಾರು ವರ್ಷಗಳಿಂದಲೂ ಇದೇ ರೀತಿ ನೀರು ಪೂರೈಕೆಯಾಗುತ್ತಿದ್ದು ಜನರು ಈ ನೀರನ್ನು ಉಪಯೋಗಿಸಲೂ ಆಗದೆ, ಇತ್ತ ಸುಮ್ಮನಿರಲೂ ಆಗದೆ ಪಡಬಾರದ ಕಷ್ಟ ಪಡುವಂತೆ ಆಗಿದೆ. ನೀರಿನ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿಗೆ, ಶಾಸಕರಿಗೆ ತಿಳಿಸಿದರೂ ಯಾವುದೇ ಪ್ರಯೋಜನವೇ ಆಗದೆ ಜನರು ತಮ್ಮ ಹಾಡಿಯಲ್ಲಿಯೇ ಗುಂಡಿ ತೆಗೆದು ಅದರಿಂದ ಬರುವ ಒರತೆ ನೀರನ್ನು ಕುಡಿದು ಬದುಕು ದೂಡುತ್ತಿದ್ದಾರೆ. 

ಸಾವಿಗೆ ಶರಣಾಗುವ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್ ಸೋಮಯ್ಯ: ಹೃದಯ ಹಿಂಡಿದ ಭಾವನಾತ್ಮಕ ಪತ್ರ!

15 ವರ್ಷಗಳ ಹಿಂದೆ ಕೊರೆದಿರುವ ಕೊಳವೆ ಬಾವಿಯಲ್ಲಿ ಕಿಲುಬಿನ ವಾಸನೆ ಸಹಿತ ಹಳದಿ ಬಣ್ಣದ ನೀರು ಬರುತ್ತಿದ್ದು ಶುದ್ಧ ಕುಡಿಯುವ ನೀರನ್ನು ಪೂರೈಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾರೊಬ್ಬರೂ ಗಮನಹರಿಸುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೊಳವೆ ಬಾವಿಯನ್ನು ಕನಿಷ್ಠ ಸ್ವಚ್ಛ ಮಾಡಿ ನೀರು ಪೂರೈಸಿದ್ದರೆ ಇಷ್ಟು  ಕಲುಷಿತ ನೀರು ಪೂರೈಕೆ ಆಗುತ್ತಿರಲಿಲ್ಲವೇನೋ. ಅದನ್ನೂ ಮಾಡುತ್ತಿಲ್ಲ. ಆ ನೀರಿನಿಂದ ಅನ್ನ ಮಾಡಿದರೆ ಅದೂ ಕೂಡ ಹಳದಿಯಾಗುತ್ತದೆ. 

ಹೀಗಾಗಿ ಗ್ರಾಮದಲ್ಲಿ ಗುಂಡಿ ತೆಗೆದು ಅಲ್ಲಿ ಬರುತ್ತಿರುವ ಒರತೆಯ ನೀರನ್ನು ಉಪಯೋಗಿಸುತ್ತಿದ್ದೇವೆ. ಆದರೆ ಆ ನೀರು ಕೂಡ ಕೊಳಚೆಮಯವಾಗಿದ್ದು, ಆ ನೀರನ್ನು ಕುಡಿದು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಕೆಮ್ಮು, ಕಫ, ಶೀತ ಜ್ವರದಿಂದ ಬಳಲುತ್ತಿದ್ದೇವೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆಯೇ ಈ ಕೊಳವೆ ಬಾವಿ ನೀರು ಕುಡಿಯುವುದಕ್ಕೆ ಯೋಗ್ಯವಲ್ಲವೆಂದು ವರದಿ ಬಂದಿದೆ. ಆದರೂ ಪಂಚಾಯಿತಿಯಿಂದ ಅಥವಾ ಶಾಸಕರಿಂದ ಯಾವುದೇ ಸ್ಪಂದನೆ ಇಲ್ಲ. ಅನಿವಾರ್ಯವಾಗಿ ಕಲುಷಿತ ನೀರನ್ನು ಕುಡಿಯುತ್ತಿದ್ದೇವೆ. 

ಬಿಜೆಪಿ ವಿರುದ್ಧ ತಿರುಗಿಬಿದ್ದ ಕೊಡಗು ಕಾಂಗ್ರೆಸ್: ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕೃತಿ ದಹಿಸಿ ಆಕ್ರೋಶ

ಇನ್ನಾದರೂ ಶುದ್ಧ ನೀರು ಪೂರೈಕೆ ಮಾಡಿ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ. ಈ ಕುರಿತು ಮಾತನಾಡಿರುವ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಈ ವಾರ್ಡಿನ ಸದಸ್ಯರಾಗಿರುವ ಆರ್.ಕೆ. ಚಂದ್ರು ಅವರು ಈ ಗ್ರಾಮದ ವ್ಯಾಪ್ತಿಯಲ್ಲಿ ಅಂತರ್ಜಲವೇ ಕಲುಷಿತವಾಗಿದೆ. ಆದ್ದರಿಂದ ಬೇರೆಡೆ ಕೊಳವೆ ಬಾವಿ ಕೊರೆದು ನೀರು ಪೂರೈಸಬಹುದು. ಇಲ್ಲವೆ ಚಿಕ್ಲಿಹೊಳೆ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡಬಹುದು. ಪಕ್ಕದಲ್ಲೇ ಜಲಾಶಯವಿದ್ದರೂ ಯಾರೂ ಗಮನಹರಿಸುತ್ತಿಲ್ಲ ಎಂದು ಆರ್.ಕೆ. ಚಂದ್ರು ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

PREV
Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ