ರಾಯಚೂರು: ಆರ್‌ಟಿಪಿಎಸ್‌ ಚಿಮಣಿ ಏರಿ ಗುತ್ತಿಗೆ ನೌಕರ ಆತ್ಮಹತ್ಯೆ ಬೆದರಿಕೆ

By Kannadaprabha News  |  First Published Oct 18, 2022, 10:30 PM IST

ಕಾರ್ಮಿಕರ ವೇತನ ಹೆಚ್ಚಳ ಆಗ್ರಹ: ತಮ್ಮ ಇನ್‌ಸ್ಟಾಗ್ರಾಂನಲ್ಲಿ 9 ನಿಮಿಷದ ಲೈವ್‌ ವಿಡಿಯೋ ಮಾಡಿ ಆಕ್ರೋಶ


ರಾಯಚೂರು(ಅ.18):  ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಆರ್ಟಿಪಿಎಸ್‌)ದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ವೇತನ ಹೆಚ್ಚಳ ಸೇರಿ ನ್ಯಾಯಬದ್ಧವಾಗಿ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಗುತ್ತಿಗೆ ನೌಕರ ಸಣ್ಣ ಸೂಗಪ್ಪ (ಸುನೀಲ್‌) ಘಟಕದ ಚಿಮಣಿಯನ್ನು ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯ ಲೈವ್‌ ವಿಡಿಯೋ ಮಾಡಿದ ಘಟನೆ ಸೋಮವಾರ ನಡೆಯಿತು.

ಕೇಂದ್ರದ ಎಂಟನೇ ಘಟಕದ ಚಿಮಣಿಯನ್ನು ಹತ್ತಿದ ಗುತ್ತಿಗೆ ನೌಕರ ಸುನೀಲ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂಬತ್ತು ನಿಮಿಷದ ಲೈವ್‌ ವಿಡಿಯೋ ಮಾಡಿ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌) ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆ ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯದ ನೋವನ್ನು ಹೊರಹಾಕಿದ್ದಾರೆ. ಈ ವಿಡಿಯೋ ವೈರಲ್‌ಗೊಳ್ಳುತ್ತಿದ್ದಂತೆ ಚಿಮಣಿ ಕೆಳಗೆ ಜಮಾಯಿಸಿದ ಅಧಿಕಾರಿ, ಸಿಬ್ಬಂದಿ ಹಾಗೂ ಕಾರ್ಮಿಕರು ಮನವೊಲಿಸಲು ಪ್ರಯತ್ನಿಸಿದರು. ಇದೇ ವೇಳೆ ಕೇಂದ್ರದ ಆವರಣದಲ್ಲಿ ಗುತ್ತಿಗೆ ಕಾರ್ಮಿಕರು ಹಾಗೂ ಕೇಂದ್ರದ ಹೊರಭಾಗದಲ್ಲಿ ನೌಕರರ ಕುಟುಂಬಸ್ಥರು ಹಾಗೂ ಜನರು ಕೆಪಿಸಿಎಲ್‌, ಆರ್ಟಿಪಿಎಸ್‌ ಹಾಗೂ ಗುತ್ತಿಗೆ ಸಂಸ್ಥೆಯ ವಿರುದ್ಧ ಮಿಂಚಿನ ಮುಷ್ಕರ ನಡೆಸಿ ಟೈರ್‌ಗೆ ಬೆಂಕಿಯನ್ನು ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೇಂದ್ರದಲ್ಲಿ ಕೆಲಕಾಲ ಉದ್ವೀಘ್ನ ಸನ್ನಿವೇಶ ನಿರ್ಮಾಣಗೊಂಡಿತ್ತು.

Latest Videos

undefined

ದಲಿತರ ಮನೆಯಲ್ಲಿ ಜೋಳದ ರೊಟ್ಟಿ ಸವಿದ ಸಚಿವ ಅಶೋಕ್‌

ವಿಡಿಯೋದಲ್ಲಿ ನೋವು ಹಂಚಿಕೆ:

ಇಲ್ಲಿನ ನೆಲ-ಜಲವನ್ನು ನೀಡಿ ಆರ್ಟಿಪಿಎಸ್‌ ಸ್ಥಳೀಯರಿಗೆ ಉದ್ಯೋಗ ನೀಡದೇ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಸರಿಯಾದ ರೀತಿಯಲ್ಲಿ ವೇತನ ನೀಡುತ್ತಿಲ್ಲ ಕಳೆದ 11 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಸಮರ್ಪಕ ಸವಲತ್ತುಗಳನ್ನು ನೀಡುವಲ್ಲಿ ಕೆಪಿಸಿಎಲ್‌ ಸಂಪೂರ್ಣ ವಿಫಲವಾಗಿದ್ದು, ಈ ಕುರಿತು ಎಷ್ಟುಸಲ ಮನವಿ ಮಾಡಿದರೂ ಸಹ ಮೇಲಿನ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಯವರು ನೌಕರರ ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಿಲ್‌ ನಿರ್ವಹಣೆ ವಿಭಾಗದಲ್ಲಿ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ. ಆದರೆ, ಕೆಪಿಸಿಎಲ್‌ ಅಧಿಕಾರಿಗಳು ಈ ಕೆಲಸಗಳನ್ನು ಬೇರೆಯವರಿಗೆ ಗುತ್ತಿಗೆ ಕೊಟ್ಟು ತಿರುಗಿಯೂ ನೋಡುವುದಿಲ್ಲ. ಗುತ್ತಿಗೆದಾರ ಕಂಪೆನಿಗಳು ಸೌಲಭ್ಯ ಕೊಡದೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿವೆ ಎಂದು ವಿಡಿಯೋದಲ್ಲಿ ನೋವನ್ನು ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಸತೀಶ್‌, ವೆಂಕಟೇಶ, ಸೂಗೂರೇಶ ತಮ್ಮುಡು, ಮಲ್ಲಪ್ಪ ಧಣಿ, ಶಿವರಾಜ ವಡ್ಲೂರು, ಕಾರ್ಮಿಕರು, ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.

ಒಂದು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಸಣ್ಣ ಸೂಗಪ್ಪ ಅವರು ಚಿಮಣಿಯನ್ನು ಏರಿ ಪ್ರತಿಭಟಿಸಿದ್ದು ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಮಾತನಾಡಿ ವಾರದಲ್ಲಿ ವೇತನ ಹೆಚ್ಚಳ ಹಾಗೂ ನ್ಯಾಯಯುತ ಬೇಡಿಕೆಗಳ ಈಡೇರಿಸಲು ತಿಳಿಸಲಾಗಿದೆ. ಇದೇ ವಿಷಯವನ್ನು ಸುನೀಲ್‌ ಗಮನಕ್ಕೆ ತಂದು ಅವರನ್ನು ಮನವೊಲಿಸುವ ಪ್ರಯತ್ನ ಯಶಸ್ವಿಯಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾರೂ ಇಂತಹ ಕಾರ್ಯಗಳಿಗೆ ಮುಂದಾಗದಂತೆ ಮನವಿ ಮಾಡಲಾಗುವುದು ಅಂತ ರಾಯಚೂರು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್‌ ತಿಳಿಸಿದ್ದಾರೆ. 
 

click me!