ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಸಹಕಾರ ಸಕ್ಕರೆ ಕಾರ್ಖಾನೆಯ ಆಧುನೀಕರಣ ಮತ್ತು ಪುನಶ್ಚೇತನಕ್ಕಾಗಿ 50ಕೋಟಿ ರು. ಬಿಡುಗಡೆ ಮಾಡುವಂತೆ ಈಶ್ವರ ಖಂಡ್ರೆ ಒತ್ತಾಯ
ಬೀದರ್(ಅ.18): ಹಳೆ ಮೈಸೂರು ಭಾಗದ ಮೈಷುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಬಜೆಟ್‌ನಲ್ಲಿ 50ಕೋಟಿ ರು. ಒದಗಿಸಿರುವ ರೀತಿಯಲ್ಲೇ ಬೀದರ್ ಜಿಲ್ಲೆ, ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಸಹಕಾರ ಸಕ್ಕರೆ ಕಾರ್ಖಾನೆಯ ಆಧುನೀಕರಣ ಮತ್ತು ಪುನಶ್ಚೇತನಕ್ಕಾಗಿ 50ಕೋಟಿ ರು. ಬಿಡುಗಡೆ ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
2018ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಸಚಿವ ಅಮಿತ್ ಶಾ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರುಗಳು ಈ ಕಾರ್ಖಾನೆ ಪುನಶ್ಚೇತನ ಮಾಡುವ ವಾಗ್ದಾನ ಮಾಡಿದ್ದರು, ಆದರೆ ಸರ್ಕಾರ ಕಳೆದ 3 ವರ್ಷದಿಂದ ಈ ಕಾರ್ಖಾನೆಯನ್ನು ಕಡೆಗಣಿಸಿದೆ. ಕಬ್ಬು ಪೂರೈಸಿ 10 ತಿಂಗಳಾದರೂ ಕಬ್ಬು ಬೆಳೆಗಾರರಿಗೆ ಬಾಕಿ ನೀಡಿರಲಿಲ್ಲ, ಈಗ ನಾಳೆ ಮುಖ್ಯಮಂತ್ರಿಯವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಅಪೆಕ್ಸ್ ಬ್ಯಾಂಕ್ ನಿಂದ 10 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
‘ಚರ್ಮಗಂಟು’ ತಡೆಗೆ 7 ಲಕ್ಷ ಲಸಿಕೆ ಪೂರೈಕೆ: ಸಚಿವ ಪ್ರಭು ಚವ್ಹಾಣ್
2021-22ನೇ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಬಾಕಿ ಪಾವತಿಸುವಂತೆ ತಾವು ಸದನದ ಒಳಗೆ ಮತ್ತು ಸದನದ ಹೊರಗೆ ಒತ್ತಾಯಿಸಿದ ತರುವಾಯ ಈಗ ಬಿಡುಗಡೆ ಮಾಡಲಾಗಿರುವ 10ಕೋಟಿ ರು. ಏನೇನೂ ಸಾಲದಾಗಿದೆ. ಸರ್ಕಾರಕ್ಕೆ ಕಾರ್ಖಾನೆಯ ಪುನಶ್ಚೇತನ ಮಾಡುವ ಬದ್ಧತೆ ಇದ್ದರೆ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚಿದೆ, ಮೈಷುಗರ್ ನಂತೆಯೇ 50ಕೋಟಿ ರೂ. ನೀಡಲಿ ಎಂದು ಆಗ್ರಹಿಸಿದ್ದಾರೆ.
ರೈತರ ಬದುಕಿಗೆ ಆಸರೆಯಾಗಿರುವ ಬೀದರ್ ಸಕ್ಕರೆ ಕಾರ್ಖಾನೆ ಉಳಿಯಬೇಕಾದರೆ ಆಧುನೀಕರಣ ಆಗಬೇಕು, ಕಾರ್ಮಿಕರ ವೇತನ ಬಾಕಿ ನೀಡಬೇಕು ಈ ನಿಟ್ಟಿನಲ್ಲಿ 50ಕೋಟಿ ರು. ನೀಡುವ ಮೂಲಕ ಅತ್ಯಂತ ಹಿಂದುಳಿದ ಬೀದರ್ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೂ ಶ್ರಮಿಸಬೇಕು ಎಂದು ಒತ್ತಾಯಿಸಿದ್ದಾರೆ.