ಮೈಸೂರು ಡೀಸಿ ರೋಹಿಣಿ ವಿರುದ್ಧ ಕೇಸ್‌

By Kannadaprabha NewsFirst Published Feb 19, 2021, 8:01 AM IST
Highlights

ಮೈಸೂರು ಜಿಲ್ಲಾಧಿಕಾರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ. ಜಿಲ್ಲಾಧಿಕಾರಿ  ರೋಹಿಣಿ ಸಿಂಧೂರಿ ವಿರುದ್ಧ ಕೇಸ್‌ಗೆ ನಿರ್ಧಾರ

ನಜರಾಬಾದ್‌ ತಹಶೀಲ್ದಾರ್‌ ಕೆ.ಆರ್‌. ರಕ್ಷಿತ್‌ ವಿರುದ್ಧವೂ ಎದುರಾದ ಆರೋಪ 

ಬೆಂಗಳೂರು (ಫೆ.19):  ನ್ಯಾಯಾಲಯದ ಆದೇಶದ ಹೊರತಾಗಿಯೂ ಐವರಿಗೆ ಜಮೀನಿನ ಖಾತೆ ಮಾಡಿಕೊಡದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ನಜರಾಬಾದ್‌ ತಹಶೀಲ್ದಾರ್‌ ಕೆ.ಆರ್‌. ರಕ್ಷಿತ್‌ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸಲು ಹೈಕೋರ್ಟ್‌ ನಿರ್ಧರಿಸಿದೆ.

ಮೈಸೂರಿನ ಎಚ್‌.ಬಿ. ಅಶೋಕ್‌ ಸೇರಿ ಐವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠವು ಮಾ.8ರಂದು ಆರೋಪ ನಿಗದಿಪಡಿಸುವುದಾಗಿ ತಿಳಿಸಿತು.

ಇದಕ್ಕೂ ಮುನ್ನ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ ರೋಹಿಣಿ ಸಿಂಧೂರಿ, ಜಮೀನು ಖಾತೆ ಮಾಡಿಕೊಡಲು ಹಲವು ಸಮಸ್ಯೆಗಳಿವೆ. ಭೂಮಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ವಿವಾದಿತ ಭೂಮಿಗೆ ಹಲವರು ಹಕ್ಕು ಪ್ರತಿಪಾದಿಸುತ್ತಿದ್ದಾರೆ. ಈ ಸಂಬಂಧ ದಾಖಲೆ ಸಲ್ಲಿಸಲು ಹಾಗೂ ನ್ಯಾಯಾಲಯದ ಆದೇಶ ಪಾಲಿಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕೆಂದು ಕೋರಿದರು.

ಕೊರೋನಾ ಲಸಿಕೆ ಪಡೆದುಕೊಂಡ ರೋಹಿಣಿ ಸಿಂಧೂರಿ 'ಅಡ್ಡ ಪರಿಣಾಮ ಇಲ್ಲ' ..

ಅದಕ್ಕೆ ನ್ಯಾಯಪೀಠ, ನೀವು ಈಗ ಏಕೆ ದಾಖಲೆ ಸಲ್ಲಿಸುತ್ತೀರಿ? ಈಗಾಗಲೇ ಪ್ರಕರಣದ ಸಂಬಂಧ ಹೈಕೋರ್ಟ್‌ ಏಕ ಸದಸ್ಯ ಪೀಠ ಆದೇಶ ಹೊರಡಿಸಿದೆ. ಈ ಹಂತದಲ್ಲಿ ದಾಖಲೆ ಪರಿಶೀಲಿಸುವುದು ಅಥವಾ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು ಜಿಲ್ಲಾಧಿಕಾರಿ ಹಾಗೂ ನಜರಾಬಾದ್‌ ತಹಶೀಲ್ದಾರ್‌ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರ ಅಶೋಕ್‌ ಸೇರಿ ಐವರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕುರುಬರಹಳ್ಳಿಯ ಬಿ-ಖರಾಬ್‌ ಜಮೀನಿನ ಖಾತೆ ಮಾಡಿಕೊಡುವಂತೆ ಹೈಕೋರ್ಟ್‌ ಏಕ ಸದಸ್ಯ ಪೀಠವು 2020ರ ಜೂ.19ರಂದು ಆದೇಶಿಸಿತ್ತು. ಆ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

click me!