
ಬೆಂಗಳೂರು (ಫೆಬ್ರವರಿ 20, 2023): ಬೇಸಿಗೆ ಆರಂಭಕ್ಕೂ ಮುನ್ನವೇ ತರಕಾರಿ ಬೆಲೆಗಳು ಏರಿಕೆಯಾಗುವ ಎಲ್ಲ ಲಕ್ಷಣ ಗೋಚರಿಸುತ್ತಿವೆ. ವಾರದಿಂದ ಈಚೆಗೆ ಟೊಮೆಟೋ ಸೇರಿದಂತೆ ಕೆಲ ತರಕಾರಿಗಳ ದರ ಹೆಚ್ಚಾಗುತ್ತಿದೆ. ಬೆಳೆ ಹೆಚ್ಚಾಗಿ ಬರುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗುತ್ತಿದೆ. ಈ ನಡುವೆ ಟೊಮೆಟೋ ಬೆಳೆಗೆ ಗುಗ್ಗೆ ರೋಗ ಬಂದಿದೆ. ಇನ್ನು ಬೀನ್ಸ್‌ಗೆ ಹೂವು ಮತ್ತು ಪೀಚು ನಿಲ್ಲದೆ ಕಾಯಿ ಕಚ್ಚುತ್ತಿಲ್ಲ. ಹೀಗಾಗಿ ಇಳುವರಿ ಕಡಿಮೆಯಾಗಿ ಬೆಲೆ ಹೆಚ್ಚಾಗುತ್ತದೆ. ಆದರೆ ಫಾರ್ಮ್‌ಹೌಸ್‌ನಲ್ಲಿ ಬೆಳೆ ಬೆಳೆದವರಿಗೆ ಹೆಚ್ಚು ಲಾಭವಾಗುತ್ತಿದೆ.
ಕೆ.ಆರ್. ಮಾರುಕಟ್ಟೆಯಲ್ಲಿ ಕಳೆದ ವಾರ ಕೆಜಿಗೆ 20 ರೂ. ಇದ್ದ ಟೊಮೆಟೋ ಈ ವಾರ 30-35 ರೂ. ದಾಟುವ ಸಾಧ್ಯತೆಯಿದೆ. ಸಗಟು ಮಾರುಕಟ್ಟೆಯಲ್ಲೂ 250 ರೂ. ಬಾಕ್ಸ್ ಇದ್ದ ಚಿಕ್ಕ ಗಾತ್ರದ ಟೊಮೆಟೋ ಈಗ 600 - 800 ರೂ. ರವರೆಗೆ ತಲುಪಿದೆ. ಅಲ್ಲದೆ, ಹಾಪ್‌ಕಾಮ್ಸ್ ಹಾಗೂ ರಿಲಯನ್ಸ್ ಫ್ರೆಶ್‌ನಲ್ಲಿಯೂ ಟೊಮೆಟೋ ಬೆಲೆ ಹೆಚ್ಚಾಗಿದೆ.
ಇದನ್ನು ಓದಿ: ರೈಲ್ವೆ ಹಳಿಯಲ್ಲೇ ತರಕಾರಿ ಮಾರ್ಕೆಟ್ : ವೈರಲ್ ವಿಡಿಯೋ
ಉಳಿದಂತೆ ಈರುಳ್ಳಿ ಕಳೆದ ವಾರ 100 ರೂ. ಗೆ 6 ಕೆ.ಜಿ. ಸಿಗುತ್ತಿದ್ದ ಈರುಳ್ಳಿ ಈಗ 5 ಕೆ.ಜಿ. ಸಿಗುತ್ತಿದೆ. 20 ರೂ.ಕ್ಯಾರೆಟ್ ಈಗ 40 ರೂ. ಆಸುಪಾಸಲ್ಲಿದೆ. 20 ರೂ. ಇದ್ದ ಬೀನ್ಸ್ 40 ರೂ. ನಿಂದ 60 ರೂ. ಗೆ ಹೆಚ್ಚಾಗಿದೆ. 10-15 ರೂ. ಇದ್ದ ಕ್ಯಾಪ್ಸಿಕಾಂ ಈಗ 30-40 ರೂ. ಗೆ ಏರಿಕೆಯಾಗಿದೆ. ಹುರುಳಿಕಾಯಿ ಎಂದಿನಂತೆ 30 ರೂ. ಇದೆ. ಉಳಿದಂತೆ ಹೂಕೋಸು, ಆಲೂಗಡ್ಡೆ ಬೆಲೆ ಸಾಮಾನ್ಯವಾಗಿದೆ. ಸೊಪ್ಪುಗಳ ಬೆಲೆಗಳಲ್ಲಿ ಬದಲಾವಣೆ ಆಗಿಲ್ಲ.
ಬೆಂಗಳೂರು ಗ್ರಾಮಾಂತರ ರೈತ ಮಧುಸೂದನ್ ಮಾತನಾಡಿ, ‘ಬೇಸಿಗೆ ಆರಂಭ ಆಗುತ್ತಿದೆ. ಇದರಿಂದ ತರಕಾರಿ ಬೆಲೆ ಹೆಚ್ಚಾಗಿದೆ. ಮೇ ಅಂತ್ಯದವರೆಗೂ ಮಾರುಕಟ್ಟೆಯಲ್ಲಿ ಇದೇ ಬೆಲೆ ಮುಂದುವರಿಯಲಿದೆ ಎಂದರು. ಕಳೆದ ವಾರದಿಂದ ಸಗಟು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಾಗಿದೆ. ಕೆಲ ತರಕಾರಿಗಳ ಬೆಲೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಕೆ.ಆರ್. ಮಾರುಕಟ್ಟೆ ವ್ಯಾಪಾರಿ ಮಣಿ ತಿಳಿಸಿದರು.
ಇದನ್ನೂ ಓದಿ: Organic Food: ಸಾವಯವ ಆಹಾರ ಖರೀದಿಸೋ ಮುನ್ನ ಈ ಎಚ್ಚರ!