ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ರೂ. ಹಣದ ಮೂಲ ಪತ್ತೆ..!

Published : Feb 20, 2023, 09:49 AM IST
ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ರೂ. ಹಣದ ಮೂಲ ಪತ್ತೆ..!

ಸಾರಾಂಶ

ಚೆಕ್‌ಬೌನ್ಸ್‌ ಕೇಸ್‌ನಲ್ಲಿ ಸಿಲುಕಿದ್ದ ಸಹಾಯಕ ಎಂಜಿನಿಯರ್‌, ಇದರಿಂದ ಪಾರಾಗಲು ಸಹೋದ್ಯೋಗಿ, ಸ್ನೇಹಿತರಿಂದ ಸಾಲ ಮಾಡಿದ್ದರು. ಈ ಹಣವನ್ನು ಸಾಲಗಾರರಿಗೆ ಕೊಡಲು ಅವರಿಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ವಿಧಾನಸೌಧಕ್ಕೆ ಬಂದಾಗ ಎಂಜಿನಿಯರ್ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. 

ಬೆಂಗಳೂರು (ಫೆಬ್ರವರಿ 20, 2023): ಇತ್ತೀಚೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಲೋಕೋಪಯೋಗಿ ಸಹಾಯಕ ಎಂಜಿನಿಯರ್‌ ಜಗದೀಶ್‌ ಬಳಿ ಪತ್ತೆಯಾಗಿದ್ದ .10 ಲಕ್ಷ ಮೂಲ ಪತ್ತೆಯಾಗಿದೆ. ಜಗದೀಶ್‌ ಅವರು ಮೂವರು ವ್ಯಕ್ತಿಗಳಿಂದ ಈ ಹಣವನ್ನು ಸಾಲವಾಗಿ ಪಡೆದಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಚೆಕ್‌ಬೌನ್ಸ್‌ ಪ್ರಕರಣವೊಂದರಲ್ಲಿ ಸಿಲುಕಿದ್ದ ಜಗದೀಶ್‌ ಅವರು ಇದರಿಂದ ಹೊರಬರುವ ಸಲುವಾಗಿ ಗುತ್ತಿಗೆದಾರರಿಂದ 5 ಲಕ್ಷ ರೂ. ಅನ್ನು ತಮ್ಮ ಸಹೋದ್ಯೋಗಿಯಿಂದ, 3.50 ಲಕ್ಷ ರೂ. ಹಾಗೂ ಸ್ನೇಹಿತರಿಂದ 1.50 ಲಕ್ಷ ರೂ. ಸಾಲ ಪಡೆದಿದ್ದರು. ಅದನ್ನು ಸಾಲಗಾರರಿಗೆ ಕೊಡಲು ಹೋಗುವಾಗ ಮಾರ್ಗ ಮಧ್ಯೆ ಕಾರ್ಯ ನಿಮಿತ್ತ ವಿಧಾನಸೌಧಕ್ಕೆ ಬಂದಾಗ ಪೊಲೀಸರ ತಪಾಸಣೆಯ ವೇಳೆ ಹಣ ಪತ್ತೆಯಾಗಿತ್ತು.

ವಿಚಾರಣೆ ವೇಳೆ ಜಗದೀಶ್‌ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಚೆಕ್‌ ಬೌನ್ಸ್‌ ಹಾಗೂ ಬ್ಯಾಂಕ್‌ನ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಇದರ ಜತೆಗೆ ಜಗದೀಶ್‌ಗೆ ಸಾಲವಾಗಿ ಹಣ ನೀಡಿದವರ ಹೇಳಿಕೆ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಪ್ರಕರಣಕ್ಕೆ ಅಂತ್ಯ ಹಾಡಲಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಚೆಕ್‌ ಬೌನ್ಸ್‌ ಕೇಸು ಇತ್ಯರ್ಥಕ್ಕೆ 10 ಲಕ್ಷ ತಂದಿದ್ದೆ: ಪಿಡಬ್ಲ್ಯುಡಿ ಎಂಜಿನಿಯರ್‌ ಜಗದೀಶ್‌

ಏನಿದು ಪ್ರಕರಣ..?
ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಜಗದೀಶ್‌ ಜನವರಿ 4ರಂದು ಸಂಜೆ ವಿಧಾನಸೌಧದ ಪಶ್ಚಿಮ ದ್ವಾರದ ಮುಖಾಂತರ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಕಾರನ್ನು ತಪಾಸಣೆ ಮಾಡಿದಾಗ 10 ಲಕ್ಷ ರೂ. ನಗದು ಪತ್ತೆಯಾಗಿತ್ತು. ಈ ವೇಳೆ ಆ ಹಣವನ್ನು ಜಪ್ತಿ ಮಾಡಿದ್ದ ಪೊಲೀಸರು, ಹಣದ ಮೂಲದ ಕುರಿತಾಗಿ ಪ್ರಶ್ನಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ಜಗದೀಶ್‌ ನೀಡಿರಲಿಲ್ಲ. ಈ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ವಿಧಾನಸೌಧದ ಆವರಣದಲ್ಲಿ ಸಹಾಯಕ ಇಂಜಿನಿಯರ್‌ ಬಳಿ ಹಣ ಪತ್ತೆಯಾದ ಸುದ್ದಿ ಬಹಳ ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ: ವಿಧಾನಸೌಧದಲ್ಲಿ 10 ಲಕ್ಷ ಪತ್ತೆ: ತನಿಖೆಗೆ ಸಿದ್ದರಾಮಯ್ಯ ಆಗ್ರಹ

PREV
Read more Articles on
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!