ಮನುಷ್ಯನಿಗೂ ಹರಡಬಹುದು ಎಂಬ ವದಂತಿ ನಂಬಿದ ಜನ, ಚರ್ಮಗಂಟು ರೋಗ ಮನುಷ್ಯರಿಗೆ ಹರಡಲ್ಲ ಎನ್ನುವ ತಜ್ಞರು
ಜಗದೀಶ ವಿರಕ್ತಮಠ
ಬೆಳಗಾವಿ(ಅ.19): ಚರ್ಮಗಂಟು ರೋಗ ಇದ್ದ ಹಸುವಿನ ಹಾಲು ಸೇವಿಸಿದರೆ ಮನುಷ್ಯನಿಗೂ ಆ ರೋಗ ಹರಡಬಹುದು ಎಂಬ ವದಂತಿ ಹಾಗೂ ಆತಂಕದಿಂದ ಗ್ರಾಹಕರು ಹಾಲು ಹಾಗೂ ಹಾಲಿನ ಉತ್ಪನ್ನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಹೊಸ ತಲೆನೋವಾಗಿ ಪರಿಣಮಿಸಿದೆ.
undefined
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಬೆಂಬಿಡದೆ ಕಾಡತೊಡಗಿದ್ದು, ಈ ರೋಗದಿಂದ ಬಳಲುತ್ತಿರುವ ಆಕಳುಗಳ ಹಾಲು ಹಾಗೂ ಹಾಲಿನ ಇನ್ನಿತರ ಉತ್ಪನ್ನಗಳ ಸೇವನೆಯಿಂದ ಮನುಷ್ಯರಿಗೂ ಈ ರೋಗ ಅಂಟಿಕೊಳ್ಳುವ ಸಾಧ್ಯತೆ ಇದೆ ಎಂಬ ವದಂತಿ ಗ್ರಾಮೀಣ ಭಾಗಗಳಲ್ಲಿ ದಟ್ಟವಾಗಿ ಹರಡುತ್ತಿದೆ. ಇದನ್ನು ಪುಷ್ಟೀಕರಿಸುವಂತೆ ವಿಡಿಯೋ, ಸಂದೇಶದ ತುಣುಕುಗಳು ಫೇಸ್‌ಬುಕ್ ಮತ್ತು ವಾಟ್ಸಪ್ ಮತ್ತಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಜಾನುವಾರುಗಳಿಗೆ Lumpy skin disease; ಹೈನೋದ್ಯಮಕ್ಕೆ ಪೆಟ್ಟು
ಹೆಚ್ಚಿನ ದರಕ್ಕೆ ಹಾಲು ಖರೀದಿ: ವದಂತಿ ನಂಬಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಖರೀದಿಗೆ ಜನ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳಿಗೆ ಸಂಕಷ್ಟಎದುರಾಗಿದೆ. ವಾಸ್ತವವಾಗಿ ಚರ್ಮಗಂಟು ರೋಗದ ಹಸುವಿನ ಹಾಲು ಸುರಕ್ಷಿತ ಎಂದು ತಜ್ಞರು ಹೇಳುತ್ತಿದ್ದರೂ ಜನ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ.
ಚರ್ಮಗಂಟು ರೋಗ ಬಾಧಿತ ಹಸುವಿಗೆ ನೀಡುತ್ತಿರುವ ಆ್ಯಂಟಿಬಯೋಟಿಕ್ ಔಷಧದಿಂದಾಗಿ ಹಾಲಿನ ಮೇಲೆ ಏನಾದರೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆಯೇ ಎಂಬುದರ ಬಗ್ಗೆ ಪರೀಕ್ಷೆ ನಡೆಯುತ್ತಿದ್ದು, ಇದರ ಫಲಿತಾಂಶ ಸದ್ಯದಲ್ಲೇ ಲಭ್ಯವಾಗಲಿದೆ ಅಂತ ಬೆಳಗಾವಿ ಜಿಲ್ಲಾ ಅಂಕಿತ ಅಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.
ಚರ್ಮಗಂಟು ರೋಗ ಪ್ರಾಣಿಜನ್ಯ ರೋಗ. ಇದು ಮನುಷ್ಯರಿಗೆ ಹರಡುವುದಿಲ್ಲ. ರೋಗ ಬಾಧಿತ ಜಾನುವಾರುಗಳ ಹಾಲನ್ನು ಬಿಸಿ ಮಾಡಿ ಸೇವಿಸಿದರೆ ಯಾವ ತೊಂದರೆಯೂ ಇಲ್ಲ ಅಂತ ಬೆಳಗಾವಿ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಶಶಿಧರ ನಾಡಗೌಡ ಹೇಳಿದ್ದಾರೆ.