ರಾಜ್ಯದ ಪೊಲೀಸರಿಗೆ 5000 ಮನೆಗಳ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ₹1500 ಕೋಟಿ ಅನುದಾನ ನೀಡಲು ಕೋರಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಹೊಸಪೇಟೆ (ಆ.09): ರಾಜ್ಯದ ಪೊಲೀಸರಿಗೆ 5000 ಮನೆಗಳ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ₹1500 ಕೋಟಿ ಅನುದಾನ ನೀಡಲು ಕೋರಿದ್ದೇವೆ. ಇನ್ನು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಪೊಲೀಸರಿಗೆ ಮನೆಗಳ ನಿರ್ಮಾಣಕ್ಕಾಗಿ ಕೆಕೆಆರ್‌ಡಿಬಿ ಅನುದಾನ ಬಳಕೆಗೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಬುಧವಾರ ಡಿಎಆರ್ ಕಟ್ಟಡ, ಕವಾಯತು ಮೈದಾನ ಉದ್ಘಾಟನೆ ಮತ್ತು ಪೊಲೀಸ್ ವಸತಿ ಗೃಹಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿಜಯನಗರ ಐತಿಹಾಸಿಕ ಜಿಲ್ಲೆಯಾಗಿದೆ. ವಿಜಯನಗರ ಸಾಮ್ರಾಜ್ಯದ ಗತ ವೈಭವ ಮತ್ತೆ ಮರಳಿಸೋಣ, ಪೊಲೀಸರಿಗೂ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸೋಣ. ರಾಜ್ಯದ ಎಲ್ಲ ಪೊಲೀಸರಿಗೂ ವಸತಿ ವ್ಯವಸ್ಥೆ ಕಲ್ಪಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಕೇಂದ್ರ ಗೃಹ ಸಚಿವರನ್ನೂ ಭೇಟಿ ಮಾಡಿರುವೆ. ಒಂದು ವೇಳೆ ಅವರು ನೀಡದಿದ್ದರೆ, ನಮ್ಮ ಅನುದಾನದಲ್ಲೇ ನಿರ್ಮಾಣ ಮಾಡುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ ಕೆಕೆಆರ್‌ಡಿಬಿಯ ₹500 ಕೋಟಿ ಅನುದಾನದಲ್ಲಿ ಪೊಲೀಸರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು.
ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಉತ್ತಮವಾಗಿದೆ. ಈಗ ವಿರೋಧ ಪಕ್ಷದವರು ಯಾವುದೇ ಪ್ರಕರಣ ಇರಲಿ, ಸಿಬಿಐಗೆ ಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆಗ ಅವರಿಗೆ ಸಿಬಿಐ ಚೋರ್ ಬಚಾವೋ ಸಂಸ್ಥೆಯಾಗಿತ್ತು. ನಮ್ಮ ಸಿಒಡಿ ಪೊಲೀಸರು ಉತ್ತಮ ಪೊಲೀಸರು ಆಗಿದ್ದಾರೆ. ಆದರೆ ಇವರಿಗೆ ಈಗ ಸಿಒಡಿ ಮೇಲೂ ನಂಬಿಕೆ ಇಲ್ಲ. ವಿರೋಧ ಪಕ್ಷದವರು ಏನೇ ಹೇಳಲಿ, ಕರ್ನಾಟಕ ಪೊಲೀಸ್ ಉತ್ತಮ ಪೊಲೀಸರು ಆಗಿದ್ದಾರೆ ಎಂದರು. ಹೊಸಪೇಟೆಯಲ್ಲಿ ಮಹಿಳಾ ಠಾಣೆ, ಸೆನ್ ಠಾಣೆ ಮತ್ತು ಸಂಚಾರ ಠಾಣೆ ಮಂಜೂರು ಮಾಡುವೆ. ಸಿಬ್ಬಂದಿ ಕೊರತೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವೆ ಎಂದರು.
ಎಚ್.ಡಿ.ಕುಮಾರಸ್ವಾಮಿ, ಪ್ರೀತಂಗೌಡ ಇಬ್ಬರಿಗೂ ಸಮಾನ ಗೌರವ: ಸಿ.ಟಿ.ರವಿ
ಕಾರ್ಯಕ್ರಮದಲ್ಲಿ ಪೊಲೀಸರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಇದೊಂದು ಉತ್ತಮ ಕೆಲಸ. ನಾವು ಖಂಡಿತ, ಇಂತಹ ಕೆಲಸ ಮಾಡಬೇಕು. ಈ ಮಕ್ಕಳು ಮುಂದೆ ಡಾಕ್ಟರ್, ಎಂಜಿನಿಯರ್, ಐಎಎಸ್, ಕೆಎಎಸ್ ಅಧಿಕಾರಿಗಳಾಗಲಿದ್ದಾರೆ ಎಂದರು. ಶಾಸಕರಾದ ಎಚ್.ಆರ್. ಗವಿಯಪ್ಪ, ಪ್ರಸಾದ್ ಅಬ್ಬಯ್ಯ, ಎಂ.ಪಿ. ಲತಾ ಮಲ್ಲಿಕಾರ್ಜುನ, ಹುಡಾ ಅಧ್ಯಕ್ಷ ಎಚ್‌ಎನ್‌ಎಫ್ ಇಮಾಮ್, ಎಡಿಜಿಪಿ ಆರ್. ಹಿತೇಂದ್ರ, ಐಜಿಪಿ ಲೋಕೇಶಕುಮಾರ ಬಿ., ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಅಕ್ರಂ ಶಾ, ಎಸ್ಪಿ ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ ಮತ್ತಿತರರಿದ್ದರು.