ಬಸವರಾಜ ಹಿರೇಮಠ
ಧಾರವಾಡ (ಅ.11) : ಮುಂಗಾರು ಹಂಗಾಮಿಗೆ ವಿಪರೀತವಾಗಿ ಕಾಡಿದ ಮಳೆರಾಯ ಇದೀಗ ಹಿಂಗಾರಿಗೂ ಬೆನ್ನು ಬಿದ್ದಿದ್ದಾನೆ. ದಿನ ಬಿಟ್ಟು ದಿನ ಮಳೆ, ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಹಿಂಗಾರಿ ಬಿತ್ತನೆಗೆ ಹಿನ್ನಡೆಯಾಗಿದೆ. ಸಾಮಾನ್ಯವಾಗಿ ಶೀಗೆ ಹುಣ್ಣಿಮೆಯ ಹೊತ್ತಿಗೆ ಹಿಂಗಾರಿ ಬೆಳೆಗಳು ಭೂಮಿಯಿಂದ ಮೇಲೆದ್ದು ಹೊಲಗಳು ಹಸುರಾಗಿ ಕಾಣುತ್ತಿದ್ದವು. ಈ ಬೆಳೆಗಳಿಗೆ ಹಬ್ಬದ ದಿನ ಚರಗಾ ಚೆಲ್ಲಿ ಭೂಮಿ ತಾಯಿಗೆ ಸಂತುಷ್ಟಪಡಿಸುವುದು ಸಂಪ್ರದಾಯ. ಆದರೆ, ಈ ಬಾರಿ ಬಿತ್ತನೆಯೇ ಆಗದೇ ಇದ್ದರೂ ಹಬ್ಬದ ಸಂಪ್ರದಾಯದಂತೆ ಭೂಮಿ ತಾಯಿಗೆ ಚರಗಾ ಚೆಲ್ಲಬೇಕಾಯಿತು. ಇನ್ನೂ ಹಿಂಗಾರಿ ಬಿತ್ತನೆ ಆಗದ ಹಿನ್ನೆಲೆಯಲ್ಲಿ ಈ ವರ್ಷ ಶೀಗೆ ಹುಣ್ಣಿಮೆ ಹಬ್ಬವೂ ಸಪ್ಪೆಯಾಗಿತ್ತು.
ಬೆಳೆನಷ್ಟಪರಿಹಾರ ಹೆಕ್ಟೇರ್ ಬದಲಾಗಿ ಎಕರೆಗೆ 24 ಸಾವಿರ ರು. ನೀಡಿ
ಇಷ್ಟೊತ್ತಿಗೆ ಕಡಲೆ ಕಾಳು ಮೊಳಕೆಯೊಡೆದು ಭೂಮಿಯಿಂದ ಹೊರ ಬರುತ್ತಿತ್ತು. ಆದರೆ, ಈ ವರ್ಷ ಮಳೆಯಿಂದಾಗಿ ಇನ್ನೂ ಕೆಲವು ರೈತರು ಮುಂಗಾರಿನ ಸೋಯಾ ಬೆಳೆಯೇ ತೆಗೆಯಲಾಗಿಲ್ಲ. ಇನ್ನೆಲ್ಲಿ ಹಿಂಗಾರಿ ಬಿತ್ತುವುದು ಎಂಬ ಪ್ರಶ್ನೆ ಉದ್ಭವವಾಗಿದೆ. ಮಳೆಯ ಹಿನ್ನೆಲೆಯಲ್ಲಿ ಹಂಗಾಮುಗಳು ಮುಂದಕ್ಕೆ ಹೊರಟಿವೆ. ಇದರಿಂದ ಬೆಳೆ ಪದ್ಧತಿಯೂ ಬದಲಾಗುತ್ತಿದ್ದು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಮುಂಗಾರಿನ ಸಮಯದಲ್ಲೂ ಇದೇ ರೀತಿ ಪರಿಸ್ಥಿತಿ ಉಂಟಾಗಿತ್ತು. ಇನ್ನೇನು ಕೈ ಬಂದ ತುತ್ತು ಬಾಯಿಗೆ ಬಂತು ಎನ್ನುವಷ್ಟರಲ್ಲಿ ನಿರಂತರ ಮಳೆಯಿಂದ ಸೋಯಾ, ಉದ್ದು, ಹೆಸರು, ಗೋವಿನ ಜೋಳ ಸೇರಿದಂತೆ ಮುಂಗಾರು ಬೆಳೆಗಳು ಮಳೆಗೆ ಸಿಕ್ಕು ರೈತರು ತುಂಬ ನಷ್ಟಕ್ಕೀಡಾಗಿದ್ದಾರೆ. ಇದೀಗ ಹಿಂಗಾರಿ ಬಿತ್ತನೆ ಮಾಡಲು ಉತ್ತಮ ವಾತಾವರಣವಿಲ್ಲ. ಈಗಾಗಲೇ 15 ದಿನಗಳ ಕಾಲ ಹಿಂಗಾರಿ ಬಿತ್ತನೆ ತಡವಾಗಿದೆ. ಭೂಮಿಯಲ್ಲಿ ಸಾಕಷ್ಟುತೇವಾಂಶವಿದೆ. ಸದ್ಯದ ವಾತಾವರಣ ಗಮನಿಸಿದರೆ ಇನ್ನೂ 10-12 ದಿನ ಬಿತ್ತನೆಗೆ ಅನುಕೂಲಕರ ವಾತಾವರಣವಿಲ್ಲ ಎಂದು ಯಾದವಾಡ ಗ್ರಾಮದ ರೈತ ವಿಠ್ಠಲ ದಿಂಡಲಕೊಪ್ಪ ಆತಂಕ ವ್ಯಕ್ತಪಡಿಸುತ್ತಾರೆ.
ಈ ಬಾರಿ ಕೃಷಿ ಇಲಾಖೆ ಸುಮಾರು 2.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ, ಜೋಳ, ಗೋದಿ ಅಂತಹ ಹಿಂಗಾರಿ ಬೆಳೆಗಳನ್ನು ಬೆಳೆಯಲು ಗುರಿ ಹೊಂದಿದೆ. ಇಲ್ಲಿಯ ವರೆಗೂ ಹಿಂಗಾರಿ ಬಿತ್ತನೆ ಶುರುವಾಗಿಲ್ಲ. ಮುಂಗಾರಿಗೆ ಬೇಕಾದಷ್ಟುಗೊಬ್ಬರ, ಬಿತ್ತನೆ ಬೀಜ ಹಿಂಗಾರಿಗೆ ಅಗತ್ಯವಿಲ್ಲ. ಜೊತೆಗೆ ಮಳೆಯ ಅಗತ್ಯತೆಯೂ ಈ ಬೆಳೆಗಿಲ್ಲ. ಬರೀ ಚಳಿಯ ಆಧಾರದ ಮೇಲೆ ಈ ಬೆಳೆಗಳು ಬರುತ್ತವೆ. ಆದರೆ, ಚಳಿ ಶುರುವಾಗದೇ ಮಳೆಯ ಆತಂಕದಲ್ಲಿಯೇ ರೈತರಿದ್ದಾರೆ. ಈ ಬಾರಿ ಸುಮಾರು ಒಂದು ತಿಂಗಳು ಕಾಲ ಹಿಂಗಾರಿ ಹಂಗಾಮು ಮುಂದಕ್ಕೆ ಹೋಗಲಿದೆ ಎಂದು ಕೃಷಿ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ.
ಒಂದಿಷ್ಟುವರ್ಷಗಳ ಕಾಲ ನಿರಂತರ ಬರಗಾಲ. ಇತ್ತೀಚಿನ ವರ್ಷಗಳ ಅತಿವೃಷ್ಟಿ. ಮಳೆಯಿಂದ ವರ್ಷದ ಎರಡೂ ಹಂಗಾಮುಗಳನ್ನು ರೈತರು ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ತಕ್ಕಮಟ್ಟಿಗೆ ಬೆಳೆ ಪರಿಹಾರ ನೀಡಿದರೂ ಪ್ರಯೋಜನವಾಗುತ್ತಿಲ್ಲ. ರೈತರು ಪ್ರತಿಕೂಲ ವಾತಾವರಣದಿಂದ ಕೃಷಿಯಿಂದ ವಿಮುಖರಾಗುವ ಸ್ಥಿತಿ ಬಂದೊದಗಿದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಕೃಷಿ ಮಾಡುವುದು ತುಂಬ ಕಷ್ಟವಾಗಿದ್ದು ಬಿಸಿಲು, ಮಳೆ, ಚಳಿ ತಡೆದು ಯಶಸ್ವಿ ಕೃಷಿ ಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು ಕಾರ‍್ಯ ಮಾಡಬೇಕಾದ ಅನಿವಾರ‍್ಯತೆ ಉಂಟಾಗಿದೆ.
ಮುಂಗಾರು ಬೆಳೆನಷ್ಟ, ಕೈ ಹಿಡಿಯುವುದೇ ಹಿಂಗಾರು..!
ಬಿತ್ತನೆಗೆ ಕಾಯುವುದು ಸೂಕ್ತ
ಹಿಂಗಾರಿ ಬಿತ್ತನೆಗೆ ಇನ್ನೂ ಸಮಯವಿದೆ. ಆದರೆ, ಸದ್ಯಕ್ಕೆ ಬಿತ್ತನೆ ಕಾರ‍್ಯವನ್ನು ಮುಂದೂಡುವುದು ಉತ್ತಮ. ಮಳೆ ನಿಂತ ನಂತರ ಮಣ್ಣಿನ ತೇವಾಂಶ ಪರಿಸ್ಥಿತಿ ಅರಿತು ಬಿತ್ತನೆ ಮಾಡಲು ಅವಕಾಶ ನೀಡುವ ವರೆಗೂ ರೈತರು ಕಾಯಬೇಕೆಂದು ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವಿ ಪಾಟೀಲ ಸಲಹೆ ನೀಡಿದ್ದಾರೆ. ಜೊತೆಗೆ ಮುಂದಿನ 3-4 ದಿನಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಲಘು ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಗುಡುಗು ಸಮೇತ ಮಳೆಯಾಗಬಹುದು. ವಿಶೇಷವಾಗಿ 24 ಗಂಟೆಗಳಲ್ಲಿ ಉತ್ತರ ಕರ್ನಾಟಕದ ಒಳನಾಡಿನ ಹಲವು ಭಾಗಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯನ್ನೂ ಡಾ. ಪಾಟೀಲ ವ್ಯಕ್ತಪಡಿಸಿದ್ದಾರೆ.