ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಪತನವಾಗಲಿದ್ದು, ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಭವಿಷ್ಯ ನುಡಿಯಲಾಗಿದೆ.
ಬಾಗೇಪಲ್ಲಿ [ಸೆ.22]: ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಪತನವಾಗಲಿದ್ದು, ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ಭವಿಷ್ಯ ನುಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಅನರ್ಹಗೊಂಡಿದ್ದ ಶಾಸಕರ ಸ್ಥಾನಗಳಿಗೆ ಮುಂದಿನ ತಿಂಗಳಲ್ಲಿ ಉಪ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ 2 ಮತ್ತು ಜೆಡಿಎಸ್ ಶೂನ್ಯ ಸ್ಥಾನ ಗಳಸಲಿವೆ. ಹಾಗಾಗಿ ಮುಂದಿನ 2 ತಿಂಗಳಲ್ಲಿ ಬಿಜೆಪಿ ಸರ್ಕಾರ ಬೀಳುವುದು ಖಚಿತ. ಉಪ ಚುನಾವಣೆ ಸೇರಿದಂತೆ ತಾಪಂ, ಜಿಪಂ ಚುನಾವಣೆಗಳಿಗೆ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.
ಕಾಂಗ್ರೆಸ್‌ಗೆ ಮುಳುವಾದ ಮೈತ್ರಿ: ಬಿಜೆಪಿಯನ್ನು ಅಧಿಕಾರಕ್ಕೆ ತರಬಾರದು ಎಂಬ ಉದ್ದೇಶದಿಂದ ಪಕ್ಷದ ಹೈಕಮಾಂಡ್ ರಾಜ್ಯದಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆದರೆ ಈ ಮೈತ್ರಿಯೇ ಪಕ್ಷಕ್ಕೆ ಮುಳುವಾಯಿತು. ಹಾಗಾಗಿ ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅನುದಾನ ವಾಪಸ್: ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, ಮೈತ್ರಿ ಸರ್ಕಾರದ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದ್ದರು. ಆದರೆ ನಂತರ ಬಂದ ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಮಾರು 105 ಕೋಟಿ ಅನುದಾನ ವಾಪಸ್ ಪಡೆದಿದೆ. ಇದರಿಂದ ಕ್ಷೇತ್ರದ ಅಭಿವೃದ್ದಿಗೆ ತೊಂದರೆಯಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ನರಸಿಂಹಪ್ಪ,
ತಾಪಂ ಅಧ್ಯಕ್ಷ ನರೇಂದ್ರಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಮದ್ಯಪಾನ ಮಂಡಲಿ ನಿರ್ದೇಶಕ ತೊಳ್ಳಪಲ್ಲಿ ರವಿಚಂದ್ರರೆಡ್ಡಿ ಇದ್ದರು.