ಗಲಭೆ ಸೃಷ್ಟಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಿ, ಹಿಂಬಾಗಿಲಿನಿಂದ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಮೈಸೂರು(ಡಿ.21): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ಹೆಸರಲ್ಲಿ ರಾಜ್ಯಾದ್ಯಂತ ಗಲಭೆಯ ವಾತಾವರಣ ಸೃಷ್ಟಿಯಾಗಿದೆ. ಈ ನೆಪದಲ್ಲಿ ಗಲಭೆ ಸೃಷ್ಟಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಿ, ಹಿಂಬಾಗಿಲಿನಿಂದ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಮೈಸೂರಿನ ಜಲದರ್ಶಿನಿ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಒಳ್ಳೆಯ ಸರ್ಕಾರ ಕೊಡುತ್ತಿದೆ. ಚುನಾವಣೆಗೆ ಇನ್ನೂ ಮೂರುವರೆ ವರ್ಷ ಇರುವುದರಿಂದ ಹಿಂಬಾಗಿಲ ಮೂಲಕ ಹೇಗಾದರೂ ಅಧಿಕಾರಕ್ಕೆ ಬರುವ ಸಲುವಾಗಿ ಕಾಂಗ್ರೆಸ್, ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದ್ದಾರೆ.
ವ್ಯವಸ್ಥಿತ ಹುನ್ನಾರ:
ಮಂಗಳೂರಿನಲ್ಲಿ ಅಹಿತಕರ ಘಟನೆ ನಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು, ಮೈಸೂರಿನಲ್ಲೂ ನಿಷೇಧಾಜ್ಞೆ ಉಲ್ಲಂಘಿಸಿ ಸಾರ್ವಜನಿಕ ಆಸ್ತಿ ನಷ್ಟಮಾಡುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಮೈಸೂರಿನಲ್ಲಿ ಎಸ್‌ಡಿಪಿಐ ಗಲಭೆ ಸೃಷ್ಟಿಸುವ, ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಿ ಜನರಲ್ಲಿ ಭಯದ ವಾತಾವರಣ ಉಂಟು ಮಾಡುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನದ ಹಿಂದೆ ಕಾಂಗ್ರೆಸ್ ಸಹ ಇದೆ. ಮಾಜಿ ಸಚಿವ ಯು.ಟಿ. ಖಾದರ್ ಚಿತಾವಣೆಯಿಂದಾಗಿ ಮಂಗಳೂರಲ್ಲಿ ಇಬ್ಬರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಕಾಂಗ್ರೆಸ್‌ಗೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, ಖಾದರ್ ಹೇಳಿಕೆಯನ್ನು ಖಂಡಿಸಿ, ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು. ಅಲ್ಲದೆ, ಈ ಘಟನೆ ಬಗ್ಗೆ ಕಾಂಗ್ರೆಸ್ ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಬ್ಬಿಣದ ಪೈಪು ಹೇರಿ ಬರುತ್ತಿದ್ದ ಲಾರಿ ಅಡಿಯಲ್ಲಿ ಕಾರು, ಮೂವರು ಸ್ಥಳದಲ್ಲೇ ಸಾವು
ಕೇಂದ್ರ ಸರ್ಕಾರವು ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಷ್ಘಾನಿಸ್ಥಾನಗಳಲ್ಲಿ ತುಳಿತಕ್ಕೆ ಒಳಗಾಗಿರುವವರಿಗೆ ಆಶ್ರಯ ಕೊಡಲೇ ಹೊರತು, ಇಲ್ಲಿರುವವರನ್ನು ನೀವು ಭಾರತೀಯರೇ ಎಂದು ಸಾಬೀತು ಮಾಡಿ ಎಂದು ಕೇಂದ್ರ ಸರ್ಕಾರ ಕೇಳಲ್ಲ. ಅಲ್ಪಸಂಖ್ಯಾತ ಮುಸ್ಲಿಮರು ಇನ್ನಾದರೂ ಕಾಂಗ್ರೆಸ್‌ನವರ ಮಾತು ಕೇಳದೆ ಮುಖ್ಯವಾಹಿನಿಗೆ ಬನ್ನಿ, ಪೌರತ್ವ ತಿದ್ದುಪಡಿ ಕಾಯ್ದೆಗೂ ಭಾರತದ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಾಶ್ವತ ನೆಲೆಗೆ ಕಾಯ್ದೆ:
ಟಿಬೆಟಿಯನ್ನರು, ಯಹೂದಿಗಳಿಗೆಲ್ಲ ಭಾರತದಲ್ಲಿ ಆಶ್ರಯ ಕೊಟ್ಟಿದ್ದೇವೆ. ಬಾಂಗ್ಲಾ ದೇಶದಲ್ಲಿ ಶೇ.24 ಇದ್ದ ಹಿಂದೂಗಳ ಸಂಖ್ಯೆ ಈಗ ಶೇ.8.5ಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ಶೇ.15 ಇದ್ದ ಹಿಂದೂಗಳ ಸಂಖ್ಯೆ ಈಗ ಶೇ.1.6ಕ್ಕೆ ಇಳಿದಿದೆ. ಅಲ್ಲಿ ಅವರು ತೂಗುಗತ್ತಿಯ ಕೆಳಗೆ ಬದುಕುವುದು ಬೇಡ, ಶಾಶ್ವತ ನೆಲೆ ಕಲ್ಪಿಸಬೇಕೆಂದು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ ಎಂದರು.
ಆ ದೇಶಗಳಲ್ಲಿ ಲೂಟಿ, ಅತ್ಯಾಚಾರಕ್ಕೊಳಗಾದವರಿಗೆ ಭಾರತದಲ್ಲಿ ಆಶ್ರಯ ಕೊಡುವುದು ಬೇಡವಾ? ಕಾಂಗ್ರೆಸ್‌ನವರ ಬೇಡಿಕೆ ಏನು? 1947ರಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಮಾಡಿದ ಕಾಂಗ್ರೆಸ್ಸಿಗರು ಇಂದು ರಾಜಕೀಯವಾಗಿ ಅಸ್ತಿತ್ವ ಕಳೆದುಕೊಂಡಿದ್ದು, ಮತ್ತೆ ಧರ್ಮದ ಆಧಾರದ ಮೇಲೆ ದೇಶ ಒಡೆಯಲು ಹೊರಟಿದ್ದಾರೆ. ಅಂದು ಕಾಂಗ್ರೆಸ್ಸಿಗರು ಧರ್ಮದ ಆಧಾರದಲ್ಲಿ ದೇಶ ವಿಭಜನೆ ಮಾಡದಿದ್ದರೆ, ಇಂದು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಬೇಕಾದ ಅಗತ್ಯ ಇರಲಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹೇಮಂತಕುಮಾರ್ ಗೌಡ, ಮುಖಂಡರಾದ ಗಿರಿಧರ್, ಪುಟ್ಟಸ್ವಾಮಿ ಇದ್ದರು.
ಮಂಜೂರಾದ ಹಣ ಬಿಡುಗಡೆಗೆ ಒತ್ತಾಯ, ಮಂಗಳಮುಖಿಯರಿಂದ ಆತ್ಮಹತ್ಯೆ ಬೆದರಿಕೆ
ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಸದುದ್ದೇಶದಿಂದ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಹೀಗಾಗಿ, ಯಾರು ಕೂಡ ನಿಷೇಧಾಜ್ಞೆ ಉಲ್ಲಂಘಿಸಬೇಡಿ. ಎಸ್‌ಡಿಪಿಐ, ಬಿಜೆಪಿ ಸೇರಿದಂತೆ ಯಾರೇ ನಿಷೇಧಾಜ್ಞೆ ಉಲ್ಲಂಘಿಸಿದರೂ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.