Chitradurga: ಇ.ಡಿ ದುರ್ಬಳಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಐವರು ಮುಖಂಡರ ಬಂಧನ

By Govindaraj SFirst Published Jun 17, 2022, 4:50 PM IST
Highlights

ದ್ವೇಷ ರಾಜಕಾರಣಕ್ಕೆ ಗಾಂಧಿ ಪರಿವಾರದ ಮೇಲೆ ಐಟಿ, ಇ.ಡಿ, ಸಿಬಿಐ‌ ಸಂಸ್ಥೆ‌ಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ಚಿತ್ರದುರ್ಗ (ಜೂ.17): ದ್ವೇಷ ರಾಜಕಾರಣಕ್ಕೆ ಗಾಂಧಿ ಪರಿವಾರದ ಮೇಲೆ ಐಟಿ, ಇ.ಡಿ, ಸಿಬಿಐ‌ ಸಂಸ್ಥೆ‌ಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಬ್ಯಾರಿಕೇಡ್ ಮುರಿದು ಡಿಸಿ ಕಚೇರಿ ಆವರಣಕ್ಕೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದರು‌. 

ಆಗ ಪೊಲೀಸರು ಧರಣಿ ನಿರತ ಐವರು ಕಾಂಗ್ರೆಸ್ ಮುಖಂಡರನ್ನು ಬಂಧಿಸಿದರು. ಬಂಧನದ ವೇಳೆ ನೆಲದ ಮೇಲೆ ಬಿದ್ದು ಹೊರಳಾಡಿದ ಮುಖಂಡರು, ಪೊಲೀಸರೊಂದಿಗೆ ವಾಗ್ವಾದ ನಡೆಸಿದರು‌. ಧರಣಿ ನಿರತ ಐವರು ಕಾಂಗ್ರೆಸ್ ಮುಖಂಡರ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಮುಖಂಡರನ್ನು ಬಿಡುಗಡೆಗೊಳಿಸಲು ಆಗ್ರಹಿಸಿ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು‌. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರೊಂದಿಗೆ ಠಾಣೆ ಎದುರೇ ಪ್ರತಿಭಟನಾಕಾರು ಮಾತಿನ ಚಕಮಕಿ, ವಾಗ್ವಾದ ನಡೆಸಿದರು‌. 

ಇಡಿ ವಿಚಾರಣೆಯ ನೋವು ಕಾಂಗ್ರೆಸ್‌ನವರಿಗೂ ಗೊತ್ತಾಗಲಿ: ಶ್ರೀರಾಮುಲು

ಪೊಲೀಸರು ಪ್ರತಿರೋಧ ವ್ಯಕ್ತಪಡಿಸಿದಾಗ ಬ್ಯಾರಿಕೇಡ್ ಮುರಿದು ಠಾಣೆಯೊಳಕ್ಕೆ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.  ಸರ್ಕಾರಗಳ ಜೊತೆ ಪೊಲೀಸರಿಗೂ ಧಿಕ್ಕಾರ ಕೂಗಿ  ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ MLC ರಘು ಆಚಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್ ಭಾಗಿಯಾಗಿದ್ದರು.

ಕಾಂಗ್ರೆಸ್ ಪ್ರತಿಭಟನೆ ಅವರ ಮೂರ್ಖತನದ ಪರಮಾವಧಿ: ರಾಹುಲ್ ಗಾಂಧಿ ಇ.ಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಆ ಪಕ್ಷದ ಮುಖಂಡರ ಮೂರ್ಖತನದ ಪರಮಾವಧಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಇಂದು ಮಾತನಾಡಿದ ಅವರು, ದೇಶದಲ್ಲಿ ಕಾನೂನಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಇ.ಡಿ ಕೇಸ್ ದಾಖಲಿಸಿದ್ದು ಸುಬ್ರಹ್ಮಣ್ಯ ಸ್ವಾಮಿ, ಬಿಜೆಪಿ ಅಲ್ಲ ಎಂದರು. ವಿಚಾರಣೆ ತಪ್ಪು ಅನ್ನೋದು ಕಾನೂನು, ಸಂವಿಧಾನ ವಿರೋಧಿ ನಿಲುವಾಗುತ್ತದೆ. 

ಚಡ್ಡಿ ಸುಡ್ತೀನಿ ಅಂದರೆ ಎಲೆಕ್ಷನ್‌ನಲ್ಲಿ ಜನ ವಾಸನೆ ತೋರಿಸ್ತಾರೆ: ಸಿದ್ದು ವಿರುದ್ಧ ರಿಷಿಕುಮಾರ ಶ್ರೀ ವಾಗ್ದಾಳಿ

ಆದರೂ ಕಾಂಗ್ರೆಸ್ಸಿಗರಿಗೆ ಯಾರು ಬುದ್ಧಿ ಹೇಳಬೇಕೋ ಎಂಬುದು ಅರ್ಥ ಆಗ್ತಿಲ್ಲ ಎಂದು ಕುಟುಕಿದ ಅವರು, ಕೊಲೆ, ದರೋಡೆ ಮಾಡಿದವರು ಗಲಾಟೆಕೋರರು. ಹೀಗೆ ವಿಚಾರಣೆ ಮಾಡಕೂಡದೆಂದರೆ ಕಾನೂನು ಸುವ್ಯವಸ್ಥೆ ಉಳಿಯುತ್ತದೆಯೇ? ಎಂದು ಪ್ರಶ್ನಿಸಿದರು‌. ತಪ್ಪು ಮಾಡಿಲ್ಲ ಎಂಬುದಾದರೆ ಅಂತವರಿಗೆ ರಕ್ಷಣೆ ಸಿಗುತ್ತದೆ. ಪ್ರತಿಭಟನೆ ಮೂಲಕ ಧಮ್ಕಿ ಹಾಕಿ ಬೆದರಿಕೆ ಒಡ್ಡುವುದು ಇವರ ಉದ್ಧಟತನ. ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆಯಿಂದ ಇಡೀ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ‌. ಜೈಲಿಗೆ ಹೋಗುವ ಕೆಲಸ ಮಾಡಿದ್ದರೆ ಜೈಲಿಗೆ ಹೋಗೇ ಹೋಗ್ತಾರೆ ಎಂದು ಬಿಸಿ ಪಾಟೀಲ್ ಕಿಡಿಕಾರಿದರು. 

click me!