ಶಾಲ್ಮಲಾ ನದಿಯಲ್ಲಿ ಕಾಣೆಯಾಗುತ್ತಿದೆ ಸಹಸ್ರಲಿಂಗಗಳು...!

By Suvarna NewsFirst Published Jun 17, 2022, 11:00 AM IST
Highlights

* ಉತ್ತರಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರಗಳ ಪೈಕಿ ಶಿರಸಿಯ ಸಹಸ್ರಲಿಂಗ ಕ್ಷೇತ್ರ

* ಶಾಲ್ಮಲಾ ನದಿಯಲ್ಲಿ ಕಾಣೆಯಾಗುತ್ತಿದೆ ಸಹಸ್ರಲಿಂಗಗಳು

* ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದ ಶಿವಲಿಂಗಗಳೀಗ ಬೆರಳೆಣಿಕೆಗೆ ಸೀಮಿತ

* ಶಿವಲಿಂಗಗಳ ರಕ್ಷಣೆ ಮಾಡುವಂತೆ ಗ್ರಾಮಸ್ಥರ ಒತ್ತಾಯ 

ಭರತ್‌ರಾಜ್‌ ಕಲ್ಲಡ್ಕ, ಕಾರವಾರ

ಕಾರವಾರ(ಜೂ.17): ಉತ್ತರಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರಗಳ ಪೈಕಿ ಶಿರಸಿಯ ಸಹಸ್ರಲಿಂಗ ಕ್ಷೇತ್ರವೂ ಒಂದು.‌ ಶಾಲ್ಮಲಾ ನದಿಯಲ್ಲಿರುವ ಈ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ಸಾವಿರಾರು ಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದರು. ಆದರೆ, ಇತ್ತೀಚೆಗೆ ಸಹಸ್ರಲಿಂಗ ಕ್ಷೇತ್ರದಲ್ಲಿ ಲಿಂಗಗಳೇ ಕಣ್ಮರೆಯಾಗುತ್ತಿವೆ. ಸಾವಿರ ಸಂಖ್ಯೆಯಲ್ಲಿದ್ದ ಲಿಂಗಗಳು ಪ್ರಸ್ತುತ ಬೆರಳೆಣಿಕೆಯಷ್ಟು ಮಾತ್ರ ಇಲ್ಲಿ ಕಾಣತೊಡಗಿವೆ. ಅಷ್ಟಕ್ಕೂ ಈ ಪವಿತ್ರ ಕ್ಷೇತ್ರದಲ್ಲಿ ಲಿಂಗಗಳು ಕಾಣೆಯಾಗಲು ಕಾರಣವಾದ್ರೂ ಏನು ಅಂತೀರಾ

ಹೌದು, ಉತ್ತರಕನ್ನಡ ಜಿಲ್ಲೆಯ ಶಿರಸಿಯ ಭೈರುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಸಹಸ್ರಲಿಂಗ ಕ್ಷೇತ್ರ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದ ಈ ಕ್ಷೇತ್ರದಲ್ಲಿ ಶಾಲ್ಮಲಾ ನದಿಯ ಸುಮಾರು ಎಕರೆಗಟ್ಟಲೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದ್ದ ಕಲ್ಲುಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗಗಳಿದ್ದವು. ಇವುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದ ಕಾರಣ ಹೆಚ್ಚು ಆಕರ್ಷಕವಾಗಿತ್ತು‌. ಈ ಶಾಲ್ಮಲಾ ನದಿ ಒಟ್ಟು 290 ಕಿ.ಮೀ. ಹರಿಯುತ್ತಿದ್ದು, ಈ ನದಿಯ ಒಳಭಾಗದಲ್ಲೂ ಸಾಕಷ್ಟು ಲಿಂಗಗಳಿವೆ. ಆದರೆ, ಇತ್ತೀಚೆಗೆ ಈ ಕ್ಷೇತ್ರದಲ್ಲಿ ಕಾಣಸಿಗುತ್ತಿದ್ದ ಶಿವಲಿಂಗಗಳ ಸಂಖ್ಯೆ ವಿವಿಧ ಕಾರಣಗಳಿಂದ ಭಾರೀ ಕಡಿಮೆಯಾಗತೊಡಗಿವೆ. 

ಮಳೆಗಾಲದಲ್ಲಿ ರಭಸವಾಗಿ ಹರಿಯುವ ಶಾಲ್ಮಲಾ ನದಿ ಹಲವು ಬಂಡೆಕಲ್ಲುಗಳನ್ನು ಕೊಚ್ಚಿಕೊಂಡು ಸಾಗಿದ್ದರಿಂದ ಹಾಗೂ ನೀರಿನ ರಭಸಕ್ಕೆ ಸವೆದು ಹೋಗಿರೋದ್ರಿಂದ ಇಲ್ಲಿನ ಲಿಂಗಗಳು ಕಣ್ಮರೆಯಾಗಿರೋದು ಒಂದು ಕಾರಣವಾದ್ರೆ, ಇಲ್ಲಿಗೆ ಭೇಟಿ ನೀಡುವ ಕೆಲವು ಕಿಡಿಗೇಡಿ ಪ್ರವಾಸಿಗರು ಕೂಡಾ ದಾಂಧಲೆ ಎಬ್ಬಿಸಿ, ಮೋಜಿಗಾಗಿ ಕಲ್ಲುಗಳನ್ನು ಒಡೆದು ಹಾಕಿರುವ ದೂರುಗಳಿವೆ. ಇನ್ನು ಸಣ್ಣ ಸಣ್ಣ ಲಿಂಗಗಳನ್ನು ಕೆಲವರು ಕೊಂಡೊಯ್ದಿರುವುದಾಗಿಯೂ ಮಾಹಿತಿಗಳಿವೆ. ಈ ಹಿಂದೆ 2015–16ರ ವೇಳೆಗೆ ಸಮೀಕ್ಷೆ ನಡೆಸಿದ್ದಾಗ ಕೇವಲ ಬೆರಳೆಣಿಕೆಯ ಶಿವಲಿಂಗಗಳು ಉಳಿದುಕೊಂಡಿರುವುದು ದೃಢಪಟ್ಟಿತ್ತು. ಆದರೆ, ಪ್ರಸ್ತುತ, ಇವುಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿವೆ. ಹಿಂದಿನ ಸರ್ಕಾರ ಈ ಕ್ಷೇತ್ರಕ್ಕೆ ಅಭಿವೃದ್ದಿಗಾಗಿ ಒಂದಿಷ್ಟು ಹಣ ಮಿಸಲಿಟ್ಟಿದ್ದು, ಇಲ್ಲಿ ಪ್ರವಾಸಿಗರಿಗಾಗಿ ಒಂದಷ್ಟು ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ಆದರೆ, ಶಿವಲಿಂಗಗಳ ರಕ್ಷಣೆಗೆ ಮಾತ್ರ ಈವರೆಗೆ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ಈ ಕ್ಷೇತ್ರದ ಪ್ರಸಿದ್ಧಿಗೆ ಕಾರಣವಾಗಿದ್ದ ಶಿವಲಿಂಗಗಳು ಕಣ್ಮರೆಯಾಗುತ್ತಿವೆ. ಸ್ಥಳೀಯರು ಶಿವಲಿಂಗಗಳನ್ನು ರಕ್ಷಣೆ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಸಹಸ್ರಲಿಂಗಗಳ ರಕ್ಷಣೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಅಂದಹಾಗೆ, ಹದಿನೈದನೇ ಶತಮಾನದಲ್ಲಿ ಸೋದೆ ಅರಸರ ಕಾಲದಲ್ಲಿ ರಾಜ ಅರಸಪ್ಪ ನಾಯಕ ಅವರು ಸಂತಾನಕ್ಕಾಗಿ ಹರಕೆ ಕಟ್ಟಿಕೊಂಡಿದ್ದರು. ಶಿವಕೃಪ ಕಟಾಕ್ಷದಿಂದ ಅವರಿಗೆ ಸಂತಾನ ಪ್ರಾಪ್ತಿಯ ಬಳಿಕ ದೈವಾಜ್ಞೆಯಂತೆ ಈ ಸ್ಥಳದಲ್ಲಿ ಸಹಸ್ರಲಿಂಗಗಳನ್ನು ಕೆತ್ತಿಸಿದ್ದರು ಎಂಬ ಪ್ರತೀತಿಯಿದೆ. ಅಂದಿನಿಂದ ಇಂದಿನವರೆಗೂ ಈ ಸ್ಥಳಕ್ಕೆ ಪ್ರತೀ ವರ್ಷ ಬೇಸಿಗೆಗಾಲದ ಸಮಯದಲ್ಲಿ ಶಿವರಾತ್ರಿ ಹಾಗೂ ಸಂಕ್ರಾಂತಿಯಂದು ಹದಿನೈದರಿಂದ ಇಪ್ಪತ್ತು ಸಾವಿರ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡಿ ಲಿಂಗಗಳಿಗೆ ಪೂಜೆ ಸಲ್ಲಿಸುತ್ತಾರೆ. ಮಳೆಗಾಲದಲ್ಲಿ ಮಾತ್ರ ಈ ಸ್ಥಳ ಸಂಪೂರ್ಣವಾಗಿ ಶಾಲ್ಮಲಾ ನದಿಯಲ್ಲಿ ಮುಳುಗಿರುತ್ತದೆ. ಇಲ್ಲಿ ಮೇಲ್ಗಡೆ 8ಕಿ.ಮೀ. ಹಾಗೂ ಕೆಳಗಡೆ 8ಕಿ.ಮೀ.‌ ಸೇರಿ ಒಟ್ಟು 16 ಕಿ.ಮೀ.ಯಲ್ಲಿ ಸಹಸ್ರಲಿಂಗಗಳು ವ್ಯಾಪಿಸಿವೆ. ಮಕ್ಕಳಾಗದವರು ಈ ಕ್ಷೇತ್ರದಲ್ಲಿ ಹರಕೆ ಕಟ್ಟಿಕೊಂಡು ಬಳಿಕ ಸಂತಾನ ಪ್ರಾಪ್ತಿಯಾದ ಬಳಿಕ ಇಲ್ಲಿ ತೊಟ್ಟಿಲು ತಂದು ಪೂಜೆ ಮಾಡಿಕೊಂಡು ಹೋಗುತ್ತಾರೆ. ಇಲ್ಲಿ ದೊಡ್ಡ ನಂದಿ ವಿಗ್ರಹ ಇರೋದ್ರಿಂದ ಸಹಸ್ರಲಿಂಗವನ್ನು ಬಂಡೆಬಸಪ್ಪ ಹೊಳೆ ಅಂತಲೂ ಕರೆಯುತ್ತಾರೆ. ಆದರೆ, ಪ್ರಸ್ತುತ ದಿನಗಳಲ್ಲಿ ಲಿಂಗಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಇದರತ್ತ ಗಮನ ಹರಿಸಿ ಈ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರ ಒತ್ತಾಯ. 

ಒಟ್ಟಿನಲ್ಲಿ ಸಹಸ್ರಲಿಂಗ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿದ್ದ ಶಿವಲಿಂಗಳ ಪೈಕಿ ಸಾಕಷ್ಟು ಲಿಂಗಗಳು ಕಣ್ಮರೆಯಾಗಿದ್ದರೆ, ಉಳಿದವುಗಳು ಶಿಥಿಲಗೊಂಡಿವೆ. ಈ ಕಾರಣದಿಂದ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಸಹಸ್ರಲಿಂಗ ಕ್ಷೇತ್ರದಲ್ಲಿ ಲಿಂಗಗಳನ್ನು ಉಳಿಸುವುದು ಅತ್ಯಗತ್ಯವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನಹರಿಸಿ ಸಹಸ್ರಲಿಂಗ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕಿದೆ. 

click me!