ಗೃಹಲಕ್ಷ್ಮಿ ಗ್ಯಾರಂಟಿಯನ್ನು ಒಂದು ವರ್ಷ ನಿಲ್ಲಿಸಿ, ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ ಎಂಎಲ್‌ಸಿ ಆಗ್ರಹ

Published : Sep 24, 2026, 05:13 PM IST
Congress MLC Tippanappa Kamaknoor

ಸಾರಾಂಶ

ರಾಜ್ಯದಲ್ಲಿ ಬರಗಾಲ ಎದುರಿಸಲು ಗೃಹಲಕ್ಷ್ಮಿ ಯೋಜನೆಯನ್ನು ಒಂದು ವರ್ಷ ತಡೆಹಿಡಿದು, ಆ ಹಣವನ್ನು ನೀರಾವರಿ ಯೋಜನೆಗಳಿಗೆ ಬಳಸುವಂತೆ ಕಾಂಗ್ರೆಸ್ ಎಂಎಲ್‌ಸಿ ತಿಪ್ಪಣ್ಣ ಕಮಕನೂರ್ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ವಿಧಾನ ಪರಿಷತ್ತಿನಲ್ಲಿ ಉಪಸಭಾಪತಿ ಉಮಾಶ್ರೀ ಹಾಗೂ ಕಮಕನೂರ್ ನಡುವೆ ತೀವ್ರ ವಾಗ್ವಾದ ನಡೆದಿದೆ.

ಬೆಂಗಳೂರು (ಸೆ.24): ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರೇ ಬಹಿರಂಗವಾಗಿ ತಿರುಗಿಬಿದ್ದಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವನ್ನು ಎದುರಿಸಲು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಅತ್ಯಗತ್ಯ. ಹೀಗಾಗಿ, ಗೃಹಿಣಿಯರಿಗೆ ತಿಂಗಳಿಗೆ 2,000 ರೂ. ನೀಡುವ 'ಗೃಹಲಕ್ಷ್ಮಿ' ಯೋಜನೆಯನ್ನು ಒಂದು ವರ್ಷಗಳ ಕಾಲ ತಡೆಹಿಡಿದು, ಆ ಹಣವನ್ನು ಪ್ರಮುಖ ನೀರಾವರಿ ಯೋಜನೆಗಳಿಗೆ ಬಳಸಬೇಕು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ (MLC) ತಿಪ್ಪಣ್ಣ ಕಮಕನೂರ್ ಆಗ್ರಹಿಸಿದ್ದಾರೆ. ವಿಧಾನ ಪರಿಷತ್ತಿನ ಕಲಾಪದಲ್ಲಿ ಬುಧವಾರ ನಡೆದ ಚರ್ಚೆಯ ವೇಳೆ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಮಕನೂರ್, ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ಅಗತ್ಯ ಎಂದಿದ್ದಾರೆ.

ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿ

ಕಲಾಪದಲ್ಲಿ ಮಾತನಾಡಿದ ಕಮಕನೂರ್, ರಾಜ್ಯದಲ್ಲಿ ಬರಗಾಲವನ್ನು ಸಮರ್ಥವಾಗಿ ಎದುರಿಸಬೇಕಾದರೆ ಮೇಕೆದಾಟು ಸಮತೋಲನ ಜಲಾಶಯ, ಮೇಲ್ದಂಡೆ ಕೃಷ್ಣ ಯೋಜನೆ ಹಂತ-3, ಕಳಸಾ-ಬಂಡೂರಿ ನಾಲಾ ಯೋಜನೆ, ಮೇಲ್ದಂಡೆ ಭದ್ರಾ ಯೋಜನೆ, ನವಲಿ ಸಮತೋಲನ ಜಲಾಶಯ ಹಾಗೂ ಎತ್ತಿನಹೊಳೆ ಯೋಜನೆಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು. ಇದಕ್ಕಾಗಿ ನೀರಾವರಿ ಕಾಮಗಾರಿಗಳಿಗೆ ಕನಿಷ್ಠ ಒಂದು ವರ್ಷಗಳ ಕಾಲ ಪ್ರಥಮ ಆದ್ಯತೆ ನೀಡಬೇಕಾಗಿದೆ ಎಂದರು.

ಮುಂದುವರಿದು, "ಒಂದು ವರ್ಷದ ಮಟ್ಟಿಗೆ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿ. ನಿಮಗೆ ನೀಡಲಾಗುತ್ತಿರುವ 2,000 ರೂಪಾಯಿಗಳನ್ನು ನಿಲ್ಲಿಸಬೇಕು" ಎಂದು ಆ ಪೀಠದಲ್ಲಿದ್ದ ನಟಿ, ರಾಜಕಾರಣಿ ಹಾಗೂ ಉಪಸಭಾಪತಿಯಾಗಿದ್ದ ಉಮಾಶ್ರೀ ಅವರನ್ನು ಉದ್ದೇಶಿಸಿ ಹೇಳಿದರು.

ಉಮಾಶ್ರೀ - ಕಮಕನೂರ್ ನಡುವೆ ಬಿಸಿಬಿಸಿ ವಾಗ್ವಾದ

ಕಮಕನೂರ್ ಅವರ ಈ ಹೇಳಿಕೆಯಿಂದ ತೀವ್ರ ಅಸಮಾಧಾನಗೊಂಡ ಉಪಸಭಾಪತಿ ಉಮಾಶ್ರೀ, "ನಿಮಗೆ ನೀಡಲಾಗುತ್ತಿರುವ ಯೋಜನೆ ಎಂದರೆ ನಿಮ್ಮ ಅರ್ಥವೇನು?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ಅದಕ್ಕೆ ಸ್ಪಷ್ಟನೆ ನೀಡಿದ ಕಮಕನೂರ್, ತಾವು 'ಗೃಹಲಕ್ಷ್ಮಿ' ಯೋಜನೆಯ ಬಗ್ಗೆ ಮಾತನಾಡುತ್ತಿರುವುದಾಗಿ ಹೇಳಿದರು.

'ಯೋಜನೆಯನ್ನು ನಿಲ್ಲಿಸಬೇಕು ಎಂದು ನೀವು ಹೇಳುತ್ತಿದ್ದೀರಾ?' ಎಂದು ಉಮಾಶ್ರೀ ಮರುಪ್ರಶ್ನಿಸಿದಾಗ, "ಮತ್ತೇನು ಮಾಡುವುದು? ಈ ಎಲ್ಲಾ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲೇಬೇಕಾಗಿದೆ" ಎಂದು ಕಮಕನೂರ್ ತಿರುಗೇಟು ನೀಡಿದರು.

ಇದು ಸರ್ಕಾರಕ್ಕೆ ನಿಮ್ಮ ಸಲಹೆಯೇ ಎಂದು ಉಪಸಭಾಪತಿಯವರು ಕೇಳಿದಾಗ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಮಕನೂರ್, "ಈಗಾಗಲೇ ಸತ್ತುಹೋದ ಜನರ ಹೆಸರಲ್ಲೂ ಗೃಹಲಕ್ಷ್ಮಿ ಯೋಜನೆಯ ಅರ್ಧದಷ್ಟು ಹಣ ತಲುಪುತ್ತಿದೆ. ಅಂತಹ ಸತ್ತವರ ಹೆಸರಿಗೆ ಹೋಗುತ್ತಿರುವ ಹಣ ಉಳಿತಾಯವಾಗುತ್ತಿದ್ದು, ಆ ಹಣವನ್ನಾದರೂ ಈ ನೀರಾವರಿ ಯೋಜನೆಗಳಿಗೆ ಬಳಸಿಕೊಳ್ಳಿ ಎಂಬುದೇ ನನ್ನ ಉದ್ದೇಶ," ಎಂದು ಹೊಸ ಬಾಂಬ್ ಸಿಡಿಸಿದರು.

ಶಾಸಕರ ಗೈರುಹಾಜರಿಗೆ ಜೆಡಿಎಸ್ ಎಂಎಲ್‌ಸಿ ಭೋಜೇಗೌಡ ಆಕ್ರೋಶ

ಇದೇ ವೇಳೆ, ಶಾಸಕರ ಗೈರುಹಾಜರಿಯ ಕುರಿತು ಜೆಡಿಎಸ್ ಎಂಎಲ್‌ಸಿ ಎಸ್‌ಎಲ್ ಭೋಜೇಗೌಡ ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಸಾಕಷ್ಟು ಗಂಭೀರ ವಿಷಯಗಳ ಚರ್ಚೆಗೆಂದು ಕರೆಯಲಾದ ಈ ವಿಶೇಷ ಅಧಿವೇಶನವನ್ನು ಮತ್ತೆ ಒಂದು ದಿನ ವಿಸ್ತರಿಸಿದ್ದರ ಉದ್ದೇಶವೇ ಅರ್ಥವಾಗುತ್ತಿಲ್ಲ. ಕಲಾಪದಲ್ಲಿ ಶಾಸಕರ ಸಂಖ್ಯೆಯೇ ಇಲ್ಲ. ನನ್ನ ಪಕ್ಷ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರ ಕುರ್ಚಿಗಳು ಖಾಲಿಯಾಗಿ ಬಿದ್ದಿವೆ," ಎಂದು ಬೇಸರ ವ್ಯಕ್ತಪಡಿಸಿದರು.

ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಯುವಾಗ ಜನಪ್ರತಿನಿಧಿಗಳ ಭಾಗವಹಿಸುವಿಕೆ ಹೀಗೆ ಉದಾಸೀನವಾಗಿದ್ದರೆ, ಸರ್ಕಾರಿ ಅಧಿಕಾರಿಗಳು ಖಂಡಿತವಾಗಿಯೂ ಇದರ ದುರುಪಯೋಗ ಪಡೆದುಕೊಳ್ಳುತ್ತಾರೆ. ಕಲಾಪ ನಡೆಯುತ್ತಿದ್ದರೂ ಅನೇಕ ಕಂದಾಯ ಇಲಾಖೆಯ ಅಧಿಕಾರಿಗಳು ಸದನದಲ್ಲಿ ಉಪಸ್ಥಿತರಿಲ್ಲ ಎಂದು ಭೋಜೇಗೌಡ ಕಿಡಿಕಾರಿದರು.

PREV
Read more Articles on
click me!

Recommended Stories

ದಸರಾ ರಜೆ ಕಳೆಯಲು ಮಸ್ತಾಗಿರುವ ಐದು ಸ್ಥಳಗಳು, ಬೇರೆ ಎಲ್ಲೂ ಬೇಡ ಕರ್ನಾಟಕದಲ್ಲೇ ಸೌಂದರ್ಯ ತಾಣಗಳು
CJP: ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ, ಇಲ್ಲದಿದ್ದರೆ ದೇಶಾದ್ಯಂತ ಹೋರಾಟ: CJP ಯಿಂದ 3 ಪ್ರಮುಖ ಷರತ್ತು, 48 ಗಂಟೆಗಳ ಗಡುವು!