ಮಹಾ ನಗರ ಪಾಲಿಕೆ 2023-24ನೇ ಸಾಲಿನಲ್ಲಿ 49063.60 ಲಕ್ಷ ರು. ಗಾತ್ರದ 53998.17 ಲಕ್ಷ ರು. ಪಾವತಿಯ 1791.08 ಲಕ್ಷ ರು.ಗಳ ಉಳಿತಾಯ ಬಜೆಟ್‌ನ್ನು ಪಾಲಿಕೆ ಆಡಳಿತ ಪಕ್ಷ ಬಿಜೆಪಿಯು ಕಿವಿಗೆ ದಾಸವಾಳದ ಹೂವುಗಳ ಇಟ್ಟುಕೊಂಡು ಬಂದಿದ್ದ ವಿಪಕ್ಷ ಸದಸ್ಯರ ತೀವ್ರ ವಿರೋಧದ ಮಧ್ಯೆಯೂ ಮಂಗಳವಾರ ಮಂಡಿಸಿದೆ.
ದಾವಣಗೆರೆ (ಫೆ.22) : ಮಹಾ ನಗರ ಪಾಲಿಕೆ 2023-24ನೇ ಸಾಲಿನಲ್ಲಿ 49063.60 ಲಕ್ಷ ರು. ಗಾತ್ರದ 53998.17 ಲಕ್ಷ ರು. ಪಾವತಿಯ 1791.08 ಲಕ್ಷ ರು.ಗಳ ಉಳಿತಾಯ ಬಜೆಟ್‌ನ್ನು ಪಾಲಿಕೆ ಆಡಳಿತ ಪಕ್ಷ ಬಿಜೆಪಿಯು ಕಿವಿಗೆ ದಾಸವಾಳದ ಹೂವುಗಳ ಇಟ್ಟುಕೊಂಡು ಬಂದಿದ್ದ ವಿಪಕ್ಷ ಸದಸ್ಯರ ತೀವ್ರ ವಿರೋಧದ ಮಧ್ಯೆಯೂ ಮಂಗಳವಾರ ಮಂಡಿಸಿದೆ.
ನಗರದ ಪಾಲಿಕೆ(Davanagere City Corporation) ಸಭಾಂಗಣದಲ್ಲಿ ಮೇಯರ್ ಆರ್.ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ಹಣಕಾಸು ಮತ್ತು ತೆರಿಗೆ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಕುಮಾರ ಸೋಗಿ ಪಾಲಿಕೆಯ 2023-24ನೇ ಸಾಲಿನ ಬಜೆಟ್ ಮಂಡಿಸಿದಾಗ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದರೆ, ವಿಪಕ್ಷ ಕಾಂಗ್ರೆಸ್ ಸದಸ್ಯರು ವಿರೋಧಿಸಿದರು. ಬಿಜೆಪಿ ಬಜೆಟ್ ವಿರೋಧಿಸಿ ಕೈಯಲ್ಲಿ ದಾಸವಾಳ ಹೂವುಗಳ ತಂದಿದ್ದ ವಿಪಕ್ಷ ಕಾಂಗ್ರೆಸ್ ಸದಸ್ಯರು ಹೂವನ್ನು ಕಿವಿಯಲ್ಲಿಟ್ಟು ಕುಳಿತಿದ್ದ ಘಟನೆಯೂ ನಡೆಯಿತು.
Davanagere News: ಮಾ.4ಕ್ಕೆ ಮೇಯರ್,ಉಪ ಮೇಯರ್ ಚುನಾವಣೆ
ಆರಂಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಕುಮಾರ ಸೋಗಿ ಬಜೆಟ್ ಮಂಡಿಸುತ್ತಾ, ರಾಜ್ಯದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ದಾವಣಗೆರೆ ನಾಲ್ಕೂ ದಿಕ್ಕಿನಲ್ಲೂ ಮೂಲ ಸೌಕರ್ಯ ಗುರಿಯೊಂದಿಗೆ ಬಜೆಟ್ ಮಂಡಿಸಲಾಗುತ್ತಿದೆ. ಬಜೆಟ್ ಆರಂಭಿಕ ಶಿಲ್ಕು 6725.65 ಲಕ್ಷ ರು. ಇದೆ. ರಾಜಸ್ವ ಸ್ವೀಕೃತಿಯಿಂದ 16401.85 ಲಕ್ಷ ರು., ಬಂಡವಾಳ ಸ್ವೀಕೃತಿಯಿಂದ 14716ಲಕ್ಷ ರು., ಅಸಾಮಾನ್ಯ ಸ್ವೀಕೃತಿಗಳಿಂದ 17945.75 ಲಕ್ಷ ರು. ಸೇರಿದಂತೆ ಒಟ್ಟು 49063.60 ಲಕ್ಷ ರು. ಸ್ವೀಕೃತಿಗಳಾಗಿದೆ. ಪಾವತಿಗಳ ಪೈಕಿ ರಾಜಸ್ವ ಪಾವತಿಗಳು 15063.65 ಲಕ್ಷ ರು., ಬಂಡವಾಳ ಪಾವತಿಗಳು 17870 ಲಕ್ಷ ರು., ಅಸಾಮಾನ್ಯ ಪಾವತಿಗಳು 21064.52 ಲಕ್ಷ ರು.ಗಳು ಸೇರಿದಂತೆ ಒಟ್ಟು 53998.17 ಲಕ್ಷ ರು.ಗಳಾಗಿದ್ದು, 1791.08 ಲಕ್ಷ ರು. ನಗದು ಉಳಿತಾಯ ಬಜೆಟ್ ಆಗಿದೆ ಎಂದರು.
ಅನುದಾನಗಳ ವಿವರ:
ಡಿಜಿಟಲ್ ಗ್ರಂಥಾಲಯಕ್ಕೆ 50 ಲಕ್ಷ ರು., ರಸ್ತೆ ಗುಂಡಿ ಮುಚ್ಚಲು 75 ಲಕ್ಷ, ಗರಡಿ ಮನೆಗಳ ನವೀಕರಣಕ್ಕೆ 50 ಲಕ್ಷ, ರೈಲ್ವೇ ನಿಲ್ದಾಣ, ಪಾಲಿಕೆ ಮುಂಭಾಗ ಸ್ಕೈವಾಕ್ ನಿರ್ಮಿ ಸಲು 80 ಲಕ್ಷ ರು., ಪೌರ ಕಾರ್ಮಿಕರಿಗೆ ಸ್ವಚ್ಛತಾ ಪರಿಕರಕ್ಕೆ 20 ಲಕ್ಷ ರು., ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣಕ್ಕೆ 50 ಲಕ್ಷ ರು., ಘನತ್ಯಾಜ್ಯ ನಿರ್ವಹಣೆಗೆ ಜೆಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳ ಖರೀದಿಗೆ 3.25 ಕೋಟಿ, ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ಸುಮಾರು 22 ಕೋಟಿ, ಪಿಪಿಪಿ ಮಾದರಿಯಲ್ಲಿ ಮಾಲ್ ನಿರ್ಮಾಣ, ಸ್ಮಶಾನಗಳ ಅಭಿವೃದ್ಧಿಗೆ 10 ಲಕ್ಷ, ಬೀದಿ ಬದಿ ವ್ಯಾಪಾರಸ್ಥರಿಗೆ ವೆಂಡಿಂಗ್ ಝೋನ್‌ಗೆ 20 ಲಕ್ಷ ರು. ಸೇರಿ ವಿವಿಧ ಯೋಜನೆಗಳಿಗೆ ಮೀಸಲಿಟ್ಟಅನುದಾನದ ಬಗ್ಗೆ ವಿವರಿಸಿದರು.
ಆಡಳಿತ-ವಿಪಕ್ಷ ನಡುವೆ ತೀವ್ರ ಮಾತಿನ ಚಕಮಕಿ:
ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ ಗಡಿಗುಡಾಳ್ ಮಾತನಾಡಿ, ಕಳೆದ ಬಜೆಟ್‌ನಲ್ಲಿ ಎಷ್ಟುಯೋಜನೆ ಘೋಷಣೆ ಮಾಡಿದ್ದಿರಿ, ಎಷ್ಟುಕಾಮಗಾರಿ ಆಗಿವೆಯೆಂದು ಪ್ರಶ್ನಿಸಿದರು. ಅದಕ್ಕೆ ವಿಪಕ್ಷ ಸದಸ್ಯ ಎ.ನಾಗರಾಜ ಸಹ ಧ್ವನಿಗೂಡಿಸುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯರಾದ ಕೆ.ಎಂ.ವೀರೇಶ, ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ ಇತರರು ಆಕ್ಷೇಪಿಸಿದ್ದರಿಂದ ಉಭಯ ಪಕ್ಷಗಳ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿತ್ತು. ಅದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ಸಿನ ಸದಸ್ಯರು ಬಜೆಟ್ ಕಾಟಾಚಾರಕ್ಕೆ ಮಂಡಿಸಬಾರದು. ಘೋಷಣೆ ಮಾಡಿದ್ದರಲ್ಲಿ ಎಷ್ಟುಅನುಷ್ಠಾನವಾಗಿದೆ ಹೇಳಿ ಎಂದು ಪಟ್ಟು ಹಿಡಿದರು. ಆಗ ಆಡಳಿತ ಪಕ್ಷ ಸದಸ್ಯರು ಈಗ ವಿವರ ಕೇಳುವವರು ನಿಮ್ಮ ಹಿಂದಿನ ಅವಧಿಯ 8 ವರ್ಷದ ಬಜೆಟ್ ಬಗ್ಗೆಯೂ ತಿಳಿಸಬೇಕಾಗುತ್ತದೆಂದು ಕಾಲೆಳೆದ ಬಿಜೆಪಿ ಸದಸ್ಯರು, ನಿಮ್ಮ ಅವಧಿಯಲ್ಲಿ ಅದೆಷ್ಟುಅಭಿವೃದ್ಧಿ ಕೆಲಸಗಳಾಗಿವೆಯೆಂಬುದಕ್ಕೆ ಜನರು ನಿಮ್ಮನ್ನು ಮನೆಗೆ ಕಳಿಸಿರುವುದೇ ಸಾಕ್ಷಿ ಎಂದು ವ್ಯಂಗ್ಯವಾಡಿದರು.
ಮೇಯರ್ ಜಯಮ್ಮ ಗೋಪಿನಾಯ್ಕ, ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷರು, ಆಡಳಿತ-ವಿಪಕ್ಷ ಸದಸ್ಯರು, ಪಾಲಿಕೆ ಅಧಿಕಾರಿ, ಸಿಬ್ಬಂದಿ ಇದ್ದರು.
ಆಶ್ರಯ ನಿವೇಶನಕ್ಕೆ 2 ಲಕ್ಷ ರು. ಲಂಚ; ತನಿಖೆಗೆ ಸಮ್ಮತಿ
ದಾವಣಗೆರೆಯಲ್ಲಿ ವಸತಿ ಹೀನರಿಗೆ ನೀಡುವ ಆಶ್ರಯ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಆಶ್ರಯ ನಿವೇಶನಗಳಿಗೆ ಸುಮಾರು 2 ಲಕ್ಷ ರು.ಗಳಷ್ಟುಲಂಚ ಪಡೆದು ಪಾಲಿಕೆ ಅಧಿಕಾರಿಗಳು ಸದಸ್ಯರ ಗಮನಕ್ಕೆ ಬಾರದಂತೆ ಗುಪ್ತವಾಗಿ ಹಕ್ಕುಪತ್ರಗಳ ಹಂಚಿಕೆ ಮಾಡಿದ್ದಾರೆ ಎಂಬುದಾಗಿ ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿದರು. ಆಗ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಕುಮಾರ ಸೋಗಿ, ಆಶ್ರಯ ನಿವೇಶನ ಹಂಚಿಕೆ ಭ್ರಷ್ಟಾಚಾರದ ತನಿಖೆಗೆ ಸಮಿತಿ ರಚಿಸುವಂತೆ ಒತ್ತಾಯಿಸಿದರು. ಅದಕ್ಕೆ ಮೇಯರ್, ಆಯುಕ್ತೆ ರೇಣುಕಾ ಆಶ್ರಯ ಹಂಚಿಕೆ ಭ್ರಷ್ಟಾಚಾರದ ತನಿಖೆಗೆ ಸಮಿತಿ ರಚಿಸಲು ಸಮ್ಮತಿ ಸೂಚಿಸಿದರು.
ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಬಂದ ಕಾಂಗ್ರೆಸ್ ಸದಸ್ಯರು
ಆಡಳಿತ ಪಕ್ಷ ಬಿಜೆಪಿ ಬಜೆಟ್ ವಿರೋಧಿಸಿ ದಾಸವಾಳ ಹೂವುಗಳ ಇಟ್ಟುಕೊಂಡು ಬಂದಿದ್ದ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ ಗಡಿಗುಡಾಳ್ ಸೇರಿ ಕಾಂಗ್ರೆಸ್ ಸದಸ್ಯರು ಸಭೆ ಮಧ್ಯೆಯೇ ತಮ್ಮ ಕಿವಿಗಳಿಗೆ ದಾಸವಾಳ ಹೂವುಗಳ ಇಟ್ಟುಕೊಂಡು ರಾಜ್ಯ ನಾಯಕರ ಹೆಜ್ಜೆಯಲ್ಲಿ ಸಾಗಿದರು. ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಕುಮಾರ ಸೋಗಿ ಬಜೆಟ್ ಮಂಡನೆ ಮಾಡುತ್ತಿದ್ದಂತೆಯೇ ಕಿವಿ ಮೇಲೆ ದಾಸವಾಳ ಹೂವುಗಳನ್ನು ಇಟ್ಟುಕೊಂಡ ಕಾಂಗ್ರೆಸ್ಸಿನ ಸದಸ್ಯರು ತಮ್ಮ ಆಕ್ಷೇಪ, ಅಸಮಾಧಾನ ಹೊರ ಹಾಕಿದರು. ಇದೇ ವೇಳೆ ಮಾತನಾಡಿದ ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಬಿಜೆಪಿಯವರು ಜನರ ಕಿವಿ ಮೇಲೆ ಹೂವು ಇಡುವವರು. ಅದಕ್ಕಾಗಿಯೇ ನಾವೂ ಅಣಕು ಪ್ರದರ್ಶನ ಮಾಡುತ್ತಿದ್ದೇವೆಂದು ವ್ಯಂಗ್ಯವಾಡಿದರು. ಅದಕ್ಕೆ ಬಜೆಟ್ ಮಂಡನೆ ಮಾಡುತ್ತಿದ್ದ ಶಾಂತಕುಮಾರ ಸೋಗಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರ ಕಿವಿಗೆ ನೀವು ಹೂವು ಇಡುವವರು ಎಂಬುದನ್ನು ಈಗಿನಿಂದಲೇ ಸೂಚ್ಯವಾಗಿ ತಿಳಿಸುವ ಕೆಲಸ ಮಾಡುತ್ತಿದ್ದೀರಷ್ಟೇ ಎಂದು ಲೇವಡಿ ಮಾಡಿದರು.
ಜನರಿಗೆ ಮಕ್ಮಲ್ ಟೋಪಿ ಹಾಕಿದ್ದೇ ಕಾಂಗ್ರೆಸ್
ವಿಪಕ್ಷದ ವಿರುದ್ಧ ಕೆ.ಪ್ರಸನ್ನ ವಾಗ್ದಾಳಿ
ಐದು ವರ್ಷ ಬಜೆಟ್ ಮಂಡಿಸಿ, ಜನರಿಗೆ ಮಕ್ಮಲ್ ಟೋಪಿ ಹಾಕಿದ ಕಾಂಗ್ರೆಸ್((Congress) ಏನು ಮಾಡಿದೆ? ಈಗ ತಾವು ಜನ ಪ್ರತಿನಿಧಿಗಳೆಂಬುದನ್ನೇ ಮರೆತು, ಕಿವಿಯಲ್ಲಿ ದಾಸವಾಳದ ಹೂವು(Hibiscus flower) ಇಟ್ಟುಕೊಂಡು, ಮತ್ತೆ ಜನರಿಗೆ ದಾರಿ ತಪ್ಪಿಸಲು ಹೊರಟಿದೆ ಎಂದು ಪಾಲಿಕೆ ಆಡಳಿತ ಪಕ್ಷದ ಸದಸ್ಯ ಕೆ.ಪ್ರಸನ್ನಕುಮಾರ ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಪಾಲಿಕೆಯಲ್ಲಿ 2015-16ರಿಂದ 2019ರವರೆಗೆ 5 ಬಜೆಟ್‌ನ ಘೋಷಣೆ ಏನಾದವು? ಸೈಕಲ್ ಪಾಥ್ ಎಲ್ಲಿದೆ? ಟೆರೆಸ್ ಗಾರ್ಡನ್ ಏನಾಯ್ತು? ಡಿಜಿಟಲ್ ಲೈಬ್ರರಿ ಏನು ಮಾಡಿದ್ರಿ? ಗರಡಿ ಮನೆ ಉನ್ನತೀಕರಣ ಮಾಡಿದ್ರಾ? ಸ್ಕೈವಾಕ್ ಎಲ್ಲಿದೇರಿ? ನೀವು ಐದು ವರ್ಷ ಬರೀ ಘೋಷಣೆ ಮಾಡಿ, ಜನರಿಗೆ ಮಕ್ಮಲ್ ಟೋಪಿ ಹಾಕಿದವರಲ್ಲವೇ ಎಂದು ವ್ಯಂಗ್ಯವಾಡಿದರು.
ಕಸ ಕರಗಿಸಲು 22 ಕೋಟಿ ರು. ಮೀಸಲು
ಮಹಾನಗರದಲ್ಲಿ ಉತ್ಪಾದನೆಯಾಗುವ ಕಸವನ್ನು ಕರಗಿಸಲು ಜನರು ತೆರಿಗೆ ಕಟ್ಟಿದ 22 ಕೋಟಿ ರು.ಗಳನ್ನು ಸುರಿಯಲು ಪಾಲಿಕೆ ಸಜ್ಜಾಗಿದೆ!
ಹೌದು, ಪಾಲಿಕೆಯ 2023-24ನೇ ಸಾಲಿನ ಬಜೆಟ್‌ನಲ್ಲಿ ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ 22 ಕೋಟಿ ಮೀಸಲಿಟ್ಟಬಗ್ಗೆ ಕಾಂಗ್ರೆಸ್ ಸದಸ್ಯ ಕೆ.ಚಮನ್ ಸಾಬ್ ಪ್ರಶ್ನಿಸಿದಾಗ ಆಯುಕ್ತೆ ರೇಣುಕಾ, ಸ್ವಚ್ಛ ಭಾರತ ಅಭಿಯಾನದಡಿ ನಗರದ ಘನತ್ಯಾಜ್ಯ ವಿಲೇವಾರಿ ಜಮೀನಿನಲ್ಲಿ ಸುಮಾರು ವರ್ಷದಿಂದ ಸಂಗ್ರಹವಾದ ಪಾರಂಪರಿಕ ತ್ಯಾಜ್ಯವನ್ನು ಬಯೋ ರೆಮಿಡಿಯೇಷನ್ ಮೂಲ ವಿಲೇ ಮಾಡಲು ಅಂದಾಜು 16 ಎಕರೆ ಜಾಗ ಮರು ಬಳಕೆಗೆ ಯೋಗ್ಯವಾಗಿಸಲುದ್ದೇಶಿಸಿದೆ. ಇದಕ್ಕಾಗಿ 22 ಕೋಟಿ ಕಾಯ್ದಿರಿಸಲಾಗಿದೆ ಎಂದರು.
Karnataka Budget 2023: ಮಧ್ಯ ಕರ್ನಾಟಕ ಜಿಲ್ಲೆ ಮನ ತಣಿಸದ ಬಜೆಟ್
ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಧೀಕರಣ) ಆದೇಶದಂತೆ ರಾಜ್ಯದ ಎಲ್ಲಾ 10 ಮಹಾನಗರ ಪಾಲಿಕೆಗಳಿಗೆ ಗಡುವು ನೀಡಿ, 2 ವರ್ಷದಲ್ಲಿ ಕಸ ಸಂಗ್ರಹಣೆಯ ಗೊಬ್ಬರವಾಗಿ ಮಾಡಲು ಸೂಚಿಸಿದೆ. ಬಂದ ಗೊಬ್ಬರವನ್ನು ರೈತರಿಗೆ ಮಾರಬೇಕು. ಅಲ್ಲಿ ಬರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ತಯಾರಿಸುವ ಕೈಗಾರಿಕೆಗಳಿಗೆ ಕಳಿಸಬೇಕು ಎಂಬುದಾಗಿ ಸ್ಪಷ್ಟನೆ ಸೂಚನೆ ಇದೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಕೇಂದ್ರದಿಂದ ಶೇ.40 ಅನುದಾನ, ಉಳಿದ ಶೇ.60 ಹಣ ಪಾಲಿಕೆ ತುಂಬಬೇಕು ಎಂದು ತಿಳಿಸಿದರು.