ಮಲೆನಾಡಿನ ಮಟ್ಟಿಗೆ ಐತಿಹಾಸಿಕ ಕ್ಷಣಗಳಾಗಿ ದಾಖಲಾಗುವ ವಿಮಾನ ನಿಲ್ದಾಣದ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗಾಗಿ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರು ಫೆ. 27ರ ಬೆಳಗ್ಗೆ 11 ಗಂಟೆಗೆ ಆಗಮಿಸಲಿದ್ದು, ಸುಮಾರು 3 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗ (ಫೆ.22) : ಮಲೆನಾಡಿನ ಮಟ್ಟಿಗೆ ಐತಿಹಾಸಿಕ ಕ್ಷಣಗಳಾಗಿ ದಾಖಲಾಗುವ ವಿಮಾನ ನಿಲ್ದಾಣದ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗಾಗಿ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರು ಫೆ. 27ರ ಬೆಳಗ್ಗೆ 11 ಗಂಟೆಗೆ ಆಗಮಿಸಲಿದ್ದು, ಸುಮಾರು 3 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ(MP BY Raghavendra) ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಗಾನೆ ವಿಮಾನ ನಿಲ್ದಾಣಕ್ಕೆ(Sogane airport) ಪ್ರಧಾನಿ(PM Narendra Modi) ವಿಶೇಷ ವಿಮಾನದಲ್ಲಿ ಆಗಮಿಸಲಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಮಧ್ಯಾಹ್ನ 1 ಗಂಟೆಗೆ ಬೆಳಗಾವಿಗೆ ತೆರಳಲಿದ್ದಾರೆ. ಶಿವಮೊಗ್ಗದಲ್ಲಿ ಎರಡು ಗಂಟೆಗಳ ಕಾಲ ಇರಲಿದ್ದಾರೆ ಎಂದು ಹೇಳಿದರು.
Kuvempu Airport: ಶಿವಮೊಗ್ಗ ಏರ್‌ಪೋರ್ಟ್ ಗೆ ಕುವೆಂಪು ಹೆಸರು: ಸಂಪುಟ ಸಭೆ ನಿರ್ಧಾರ
ವಿಮಾನ ನಿಲ್ದಾಣ ಆವರಣದಲ್ಲಿಯೇ ಕಾರ್ಯಕ್ರಮ ನಡೆಯಲಿದ್ದು, ವಿಮಾನ ನಿಲ್ದಾಣದ ಉದ್ಘಾಟನೆಯ ಜೊತೆಗೆ ಸುಮಾರು 44 ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 3 ಲಕ್ಷ ಜನ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಸುಮಾರು 3 ಸಾವಿರ ಬಸ್ ವ್ಯವಸ್ಥೆಗೊಳಿಸಲಾಗಿದೆ. ಇದರ ಜೊತೆಗೆ ಖಾಸಗಿ ವಾಹನಗಳಲ್ಲಿಯೂ ಸಾಕಷ್ಟುಮಂದಿ ಆಗಮಸಲಿದ್ದಾರೆ. ಸಾರ್ವಜನಿಕರಿಗೆ ಉಪಹಾರ, ನೀರು, ಪಾನೀಯದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ಜಾಗಕ್ಕೂ ಪಾರ್ಕಿಂಗ್ ಜಾಗಕ್ಕೂ ಸ್ವಲ್ಪ ದೂರವೇ ಇದ್ದು, 15 ನಿಮಿಷದ ನಡಿಗೆ ದೂರ ಇರಲಿದೆ. ಸಾರ್ವಜನಿಕರು ಬೆಳಗ್ಗೆ 10 ಗಂಟೆ ಒಳಗಾಗಿ ಸೋಗಾನೆ ವಿಮಾನ ನಿಲ್ದಾಣದ ಆವರಣದೊಳಗೆ ಇರಬೇಕು. ಆ ನಂತರ ಬರುವವರಿಗೆ ಅವಕಾಶವಿಲ್ಲ. ವಿಮಾನ ನಿಲ್ದಾಣದ ಗೇಟ್ ಮುಚ್ಚಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಧಾನ ಮಂತ್ರಿಯವರ ಮೊದಲ ಲ್ಯಾಂಡಿಂಗ್ ಇದಾಗಲಿದ್ದು, ಹೀಗಾಗಿ ಮಂಗಳವಾರದಿಂದಲೇ ಈ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥವಾಗಿ ವಿಮಾನ ಹಾರಾಟ ಆರಂಭವಾಗಿದೆ. ವಿಮಾನ ಹಾರಾಟಕ್ಕೆ ಅಧಿಕೃತ ಲೈಸೆನ್ಸ್ ಕೂಡ ಸಿಕ್ಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ವಿಮಾನ ನಿಲ್ದಾಣ ಸ್ಥಾಪನೆಗೆ ಶ್ರಮವಹಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು ಸೇರಿ ಸಚಿವ ಸಂಪುಟದ ಸದಸ್ಯರು, ಕೇಂದ್ರ ವಿಮಾನಯಾನ ಸಚಿವರು, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮೊದಲಾದವರು ಆಗಮಿಸುವರು ಎಂದರು.
ವಿಮಾನ ನಿಲ್ದಾಣ ಸಂತ್ರಸ್ತರ ನಿವೇಶನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿ.ವೈ. ರಾಘವೇಂದ್ರ, ಈಗಾಗಲೇ ರಾಜ್ಯಸರ್ಕಾರ ಆ ನಿಟ್ಟಿನತ್ತ ಗಮನಹರಿಸಿದೆ. ಗೃಹ ಮಂಡಳಿಗೆ ಈಗಾಗಲೇ 35 ಕೋಟಿ ರು. ಪಾವತಿಸಿದೆ. ಜಿಲ್ಲಾಧಿಕಾರಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಕೊಟ್ಟಎಲ್ಲ ರೈತರಿಗೂ ನಿವೇಶನ ಸಿಗಲಿದೆ ಎಂದು ಸ್ಪಷ್ಟನೆ ನೀಡಿದರು. ಉದ್ಯೋಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ಆದರೆ ಮಾನವೀಯತೆಯ ದೃಷ್ಟಿಯಿಂದ ಅಲ್ಲಿ ಉಳಿದಿರುವ ಉದ್ಯೋಗಗಳನ್ನು ಕನ್ನಡಿಗರಿಗೆ ಮತ್ತು ಸ್ಥಳೀಯರಿಗೆ ನೀಡುವ ಬಗ್ಗೆ ಯೋಚಿಸಲಾಗುವುದು ಎಂದರು.
ಕುವೆಂಪು ಹೆಸರು:
ಈ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ(Kuvempu Airport) ಎಂದು ಹೆಸರು ಇಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದ್ದು, ಕೇಂದ್ರ ವಿಮಾನ ಯಾನ ಇಲಾಖೆ(Central Aviation Department)ಗೆ ಪ್ರಸ್ತಾವ ಸಲ್ಲಿಸಲಿದೆ. ಇದೇ ರೀತಿ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಕೆಳದಿ ಶಿವಪ್ಪನಾಯಕನ ಹೆಸರು ಇಡಲು ಕೂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ(BS Yadiyurappa) ಹೆಸರು ಇಡಬೇಕೆಂಬ ಚರ್ಚೆ ನಡೆದಿತ್ತು. ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಸ್ವತಃ ಯಡಿಯೂರಪ್ಪ ಅವರೇ ತಮ್ಮ ಹೆಸರನ್ನು ಇಡಲು ನಿರಾಕರಿಸಿ ಕುವೆಂಪು ಹೆಸರಿಡುವಂತೆ ಸಲಹೆ ನೀಡಿದ್ದರು. ಹೀಗಾಗಿ ಈ ಸಲಹೆಗೆ ರಾಜ್ಯ ಸಚಿವ ಸಂಪುಟ ಮನ್ನಣೆ ನೀಡಿದೆ ಎಂದರು.
ಶಿವಮೊಗ್ಗ ಏರ್‌ಪೋರ್ಟ್‌ಗೆ ರಾಷ್ಟ್ರಕವಿ ಕುವೆಂಪು ಹೆಸರು: ಯಡಿಯೂರಪ್ಪ ಸ್ಪಷ್ಟನೆ
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶಿವರಾಜ್, ಬಿ.ಕೆ. ಶ್ರೀನಾಥ್, ಜಗದೀಶ್, ಕೆ.ಪಿ. ಪುರುಷೋತ್ತಮ್. ಹೃಷಿಕೇಶ್ ಪೈ, ಕೆ.ವಿ. ಅಣ್ಣಪ್ಪ ಮೊದಲಾದವರಿದ್ದರು.
ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿಗೆ ಸಾಕಷ್ಟುಹಣ ತರಲಾಗಿದೆ. ಹಲವು ಯೋಜನೆ ಜಾರಿಯಾಗಿದೆ. ಇದೇ ವೇಳೆಗೆ ಶಿವಮೊಗ್ಗ, ಸಾಗರ ಹಾಗೂ ತಾಳಗುಪ್ಪ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಈ ಮೂರು ರೈಲ್ವೆ ನಿಲ್ದಾಣಗಳ ಆಧುನೀಕರಣ ಕಾರ್ಯ ಆರಂಭಗೊಳ್ಳಲಿದೆ.
-ಬಿ.ವೈ. ರಾಘವೇಂದ್ರ