
ಬೆಂಗಳೂರು(ಜು.22): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಉದ್ರಿಕ್ತ ಪ್ರತಿಭಟನಾಕಾರರು ಗುಜರಿಯಿಂದ ಕಾರು ತಂದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾರ್ಯಕರ್ತರು ಶಾಂತಿ ನಗರದಲ್ಲಿ ಕಾರಿಗೆ ಬೆಂಕಿ ಹಚ್ಚಿದ್ದರು. ಶೇಷಾದ್ರಿಪುರದಲ್ಲಿ ಕಾರಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದರು.
ಶಾಂತಿನಗರದಲ್ಲಿ ಕಾರಿಗೆ ಬೆಂಕಿದ ಹಚ್ಚಿದ ಪ್ರಕರಣ ಸಂಬಂಧ 11 ಮಂದಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಈ ಪೈಕಿ ಐದು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಶೇಷಾದ್ರಿಪುರಂ ನೆಹರೂ ಜಂಕ್ಷನ್‌ನಲ್ಲಿ ಕಾರಿಗೆ ಬೆಂಕಿ ಹಚ್ಚಲು ಯತ್ನಿಸಿದ ಪ್ರಕರಣದಲ್ಲಿ ಮೂವರು ಭಾಗಿಯಾಗಿರುವುದು ಪತ್ತೆಯಾಗಿದೆ. ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ.
ಕಾಂಗ್ರೆಸ್ಸಿಗರು ಭಾರತ ಮಾತೆಯ ನಿಜವಾದ ವಾರಸುದಾರರು: ಸಾಸಲು ಸತೀಶ್
ಬೆಂಕಿ ಹಚ್ಚಿದ ಕಾರುಗಳು ಮಹಮ್ಮದ್ ಡೇನಿಯಲ್ ಮತ್ತು ಬಿ.ಆರ್.ಪ್ರಕಾಶ್ ಎಂಬುವರಿಗೆ ಸೇರಿದ್ದಾಗಿವೆ. ಎರಡೂ ಕಾರುಗಳು ಗುಜರಿ ಅಂಗಡಿಯಲ್ಲಿ ನಿಂತಿದ್ದವು. ಸುಮಾರು 20 ವರ್ಷ ಹಳೆಯ ಕಾರುಗಳನ್ನು ಆರೋಪಿಗಳು ಬುಧವಾರ ರಾತ್ರಿಯೇ ಶೇಷಾದ್ರಿಪುರ ಮತ್ತು ಶಾಂತಿ ನಗರಕ್ಕೆ ತಂದು ನಿಲ್ಲಿಸಿದ್ದರು. ಗುರುವಾರ ಬೆಳಗ್ಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪ್ರತಿಭಟನೆ ಆರಂಭವಾಗಿದೆ. ಮತ್ತೊಂದೆಡೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಎರಡೂ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಮತ್ತು ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಎರಡೂ ಕಾರುಗಳ ಮಾಲಿಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಶಾಂತಿನಗರದಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದೆ. ಶೇಷಾದ್ರಿಪುರದಲ್ಲಿ ಕಾರಿಗೆ ಬೆಂಕಿ ಹಾಕಲು ಯತ್ನಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಕೇಂದ್ರ ವಿಭಾಗದ ಡಿಸಿಪಿ ಆರ್.ಶ್ರೀನಿವಾಸ್‌ಗೌಡ ತಿಳಿಸಿದ್ದಾರೆ.