ಕೇಂದ್ರ ವಿರುದ್ಧ ಕೈ ಕೆಂಡಾಮಂಡಲ| ಕೇಂದ್ರ ಸರ್ಕಾರದ ಕೃಷಿ ಕಾಯ್ದೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಟ್ರ್ಯಾಕ್ಟರ್ ರ‍್ಯಾಲಿ| ಜನರಿಗೆ ಅನ್ಯಾವಾದಾಗ ಜನರ ಧ್ವನಿಯಾಗಿ ನಿಲ್ಲುವುದು, ಪ್ರತಿಭಟನೆ ಮಾಡುವುದು ಕಾಂಗ್ರೆಸ್‌ನ ಕರ್ತವ್ಯ| ನಿರ್ಣಾಯಕ ಸಂದರ್ಭದಲ್ಲಿ ಎಲ್ಲಾ ಮತದಾರರು ಎಚ್ಚರಗೊಳ್ಳಬೇಕಿದೆ: ಎಸ್.ಆರ್. ಪಾಟೀಲ್|
ಕಲಾದಗಿ(ಮಾ.03): ಕೇಂದ್ರ ಸರ್ಕಾರದ ಕೃಷಿ ಕಾಯ್ದೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಬೃಹತ್ ಪ್ರತಿಭಟನೆ, ಟ್ರ್ಯಾಕ್ಟರ್ ರ‍್ಯಾಲಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಎತ್ತಿನ ಬಂಡಿಯಲ್ಲಿ ಪೆಟ್ರೋಲ್ ಖಾಲಿಯಾದ ಬೈಕ್ ಇರಿಸಿ, ಖಾಲಿ ಸಿಲಿಂಡರ್ ಟ್ಯಾಂಕ್ ಕಟ್ಟಿ, 75ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಬೆಳಗಾವಿ ರಾಯಚೂರು ಹೆದ್ದಾರಿ ರಸ್ತೆ ಬದಿ ಸರದಿ ಸಾಲಿನಲ್ಲಿ ನಿಂತು, ಹಿರೇಶೆಲ್ಲಿಕೇರಿ ಕ್ರಾಸ್‌ನಿಂದ ಟ್ರ್ಯಾಕ್ಟರ್ ರ‍್ಯಾಲಿ ಪ್ರಾರಂಭಗೊಂಡು ರಂಗಮಂದಿರಕ್ಕೆ ಬಂದು ವೇದಿಕೆ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ರ‍್ಯಾಲಿ ಮಾರ್ಗದುದ್ದಕ್ಕೂ ಬೇಕೇ ಬೇಕು ನ್ಯಾಯ ಬೇಕು ಎಂಬ ಘೋಷಣೆ ಕೂಗಿದರು. ನಂತರ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು ಉಪತಹಸೀಲ್ದಾರ್ ಪಿ.ಬಿ.ಸಿಂಗ್ರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪರಿಷತ್ ಸದಸ್ಯ, ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ, ಅಚ್ಚೇದಿನ್ ಬಗ್ಗೆ ಮಾತನಾಡುತ್ತಿದ್ದ ಮೋದಿ ತಮ್ಮ ಆಡಳಿತ ಕಾಲದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆಗಳನ್ನು ದುಪ್ಪಟ್ಟು ಮಾಡಿದ್ದಾರೆ. ಪ್ರಧಾನಿ ಮೋದಿ ಹೇಳಿದ ಅಚ್ಚೇದಿನ್ ಎಲ್ಲಿದೆ ಎಂದು ಹರಿಹಾಯ್ದರು.
ಬಾಗಲಕೋಟೆ; ಪತ್ನಿಗೆ ಅಕ್ರಮ ಸಂಬಂಧ ಇತ್ತಾ? ತಡೆಯಲು ಬಂದ ತಂದೆಯೇ ಮಗನಿಂದ ಹತ್ಯೆ
ಬಿಜೆಪಿ ಅವರ ಕಾಲದಲ್ಲಿ ಕೈಚೀಲ ತುಂಬ ಹಣ ತುಂಬಿಕೊಂಡು ಹೋಗಿ ಕಿಸೆ ತುಂಬ ದಿನ ಬಳಕೆ ವಸ್ತು ತರುವಷ್ಟು ಬೆಲೆ ದುಪ್ಪಟ್ಟು ಮಾಡಿ ಬಿಟ್ಟಿದ್ದಾರೆ. ವಿಮಾನ, ರೈಲು ನಿಲ್ದಾಣ, ಎಲ್.ಐ.ಸಿ, ಬಿ.ಎಸ್.ಎನ್.ಎಲ್ ಸರ್ಕಾರಿ ಸ್ವಾಮ್ಯದ ಸ್ವತ್ತುಗಳು, ಸಂಸ್ಥೆಗಳನ್ನು ಮಾರಾಟ, ಖಾಸಗೀಕರಣ ಮಾಡಿ ಮುಂದೊಂದು ದಿನ ಇಡೀ ದೇಶವನ್ನೇ ಮಾರಿ ಬಿಡುತ್ತಾರೆ. ದೇಶದ ರೈತರ, ಬಡ ಜನರ ಸಾಲ ಮನ್ನಾ ಮಾಡದೆ, ಕಾರ್ಪೋರೇಟರ್ ಕಂಪನಿಗಳ 6.50 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಎಪಿಎಂಸಿ ತಿದ್ದುಪಡೆ ಕಾಯ್ದೆಯಿಂದ 2 ಲಕ್ಷ ಕಾರ್ಮಿಕರು, 30 ಸಾವಿರ ಟ್ರೇಡರ್ಸ್ ಕುಟುಂಬಗಳು ಬೀದಿ ಪಾಲಾಗುವ ಕಾಯ್ದೆ ಬೇಕಾ?, ಭೂ ಸುಧಾರಣಾ ಕಾಯ್ದೆಯು ತಾಯಿಯನ್ನೇ ಮಾರುವ ಕಾನೂನು. ದೇಶದ ಫಲವತ್ತಾದ ಭೂಮಿಯ ಮೇಲೆ, ಕೃಷಿ ಉತ್ಪನ್ನಗಳ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಕಣ್ಣು ಬಿದ್ದಿದೆ. ಇದು ಇನ್ನೂ ಅಪಾಯವಾಗಿ ರೈತರಿಗೆ ಪರಿಣಮಿಸಲಿದೆ. ದೇಶ, ರೈತ, ಪ್ರಜಾಪ್ರಭುತ್ವನ್ನು ಉಳಿಸುವ ಸಲುವಾಗಿ ಮುಂದಿನ ದಿನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಗ್ರಾಮ ಗ್ರಾಮದಲ್ಲೂ ಪ್ರತಿಭಟನೆ ಹೋರಾಟ ಹಮ್ಮಿಕೊಳ್ಳುವುದು ಅವಶ್ಯವಾಗಿದೆ ಎಂದರು.
ಮಾಜಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಇವು ಅಷ್ಟೇ ಅಲ್ಲ, ಪ್ರತ್ಯಕ್ಷ, ಇಲ್ಲವೇ ಪರೋಕ್ಷವಾಗಿ ಜನಸಾಮಾನ್ಯರು ಬಳಸುವ ಪ್ರತಿಯೊಂದ ವಸ್ತುವಿನ ಬೆಲೆ ಏರಿಕೆಯಾಗುತ್ತದೆ ಇದನ್ನು ಅರಿಯಬೇಕಾಗಿದೆ ಎಂದರು.
ಜಿಲ್ಲಾಧ್ಯಕ್ಷ ಎಸ್.ಜ.ನಂಜಯ್ಯನಮಠ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡರ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ.ಸೌದಾಗರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಗಣ್ಣ ಮುಧೋಳ ಮಾತನಾಡಿದರು. ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸುರಾಜ ಸಂಶಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಬಿ.ಅರಕೇರಿ, ಜಿಪಂ ಸದಸ್ಯೆ ಶೋಭಾ ವೆಂಕಣ್ಣ ಬಿರಾದಾರ ಪಾಟೀಲ, ಬ್ಲಾಕ್ ಮಾಜಿ ಅಧ್ಯಕ್ಷ ಸಂಗಣ್ಣ ಮುಧೋಳ, ತಾಪಂ ಮಾಜಿ ಉಪಾಧ್ಯಕ್ಷ ಸಲೀಂ ಶೇಕ್, ವೆಂಕಣ್ಣ ಬಿರಾದಾರ ಪಾಟೀಲ, ಗ್ರಾಪಂ ಅಧ್ಯಕ್ಷ ಜಮೀರ್ ಜಮಾದಾರ್, ಕೆ.ಟಿ.ಪಾಟೀಲ, ನಿಂಗಪ್ಪ ಬೂದಿಹಾಳ, ಡಿ.ಡಿ.ದುರ್ವೆ ಇನ್ನಿತರರು ಇದ್ದರು.
ಜನರಿಗೆ ಅನ್ಯಾವಾದಾಗ ಜನರ ಧ್ವನಿಯಾಗಿ ನಿಲ್ಲುವುದು, ಪ್ರತಿಭಟನೆ ಮಾಡುವುದು ಕಾಂಗ್ರೆಸ್‌ನ ಕರ್ತವ್ಯ. ಈ ಬೆಲೆ ಏರಿಕೆ, ಕಾಯ್ದೆಗಳ ವಿರುದ್ಧ ಇನ್ನೂ ಸುಮ್ಮನೆ ಕುಳಿತರೆ ದೇಶ ಯಾರದೂ ಪಾಲಾದರೂ ಅಚ್ಚರಿ ಪಡಬೇಕಿಲ್ಲ. ನಿರ್ಣಾಯಕ ಸಂದರ್ಭದಲ್ಲಿ ಎಲ್ಲಾ ಮತದಾರರು ಎಚ್ಚರಗೊಳ್ಳಬೇಕಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜ.ನಂಜಯ್ಯನಮಠ ತಿಳಿಸಿದ್ದಾರೆ.