3ನೇ ಅಲೆ ದೊಡ್ಡ ಸವಾಲಾಗಿ ಬರ್ತಿದೆ, ಬಿಜೆಪಿಗೆ ಅದರ ಪರಿವೆಯೇ ಇಲ್ಲ: HK ಪಾಟೀಲ

By Kannadaprabha News  |  First Published Jun 11, 2021, 2:09 PM IST

* ಬಿಜೆಪಿಯವರು ತಮ್ಮ ಹಿತಾಸಕ್ತಿಗಾಗಿ ರಾಜ್ಯದ ಜನರ ಜೀವವನ್ನು ಬಲಿ ಕೊಡುತ್ತಿದ್ದಾರೆ
* ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದಿದ ಎಚ್‌.ಕೆ. ಪಾಟೀಲ 
* ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ನಿಜವಾಗಿಯೂ ದೊಡ್ಡ ಆತಂಕದ ವಿಷಯ
 


ಗದಗ(ಜೂ.11): ರಾಜ್ಯದಲ್ಲಿ ಕೋವಿಡ್‌ 3ನೇ ಅಲೆ ದೊಡ್ಡ ಸವಾಲಾಗಿ ಬರುತ್ತಿದೆ. ಆದರೆ, ಸರ್ಕಾರ ನಡೆಸುತ್ತಿರುವ ಬಿಜೆಪಿಯವರಿಗೆ ಮಾತ್ರ ಇದರ ಪರಿವೆಯೇ ಇಲ್ಲದೇ ಮುಖ್ಯಮಂತ್ರಿ ಬದಲಾವಣೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಶಾಸಕ ಡಾ. ಎಚ್‌.ಕೆ. ಪಾಟೀಲ ಆತಂಕ ವ್ಯಕ್ತಪಡಿಸಿದ್ದಾರೆ. 

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಅವರ ಆಂತರಿಕ ವಿಚಾರವಾದರೂ ಸಹ, ಇಂತಹ ಸಂದರ್ಭದಲ್ಲಿ ಎಲ್ಲವನ್ನೂ ಬದಿಗೊತ್ತಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇವಲ ತಮ್ಮ ಹಿತಾಸಕ್ತಿಗಾಗಿ ರಾಜ್ಯದ ಜನರ ಜೀವವನ್ನು ಬಲಿ ಕೊಡುತ್ತಿದ್ದಾರೆ. ಅವರ ಪಕ್ಷದಲ್ಲಿ ಕಿತ್ತಾಟ, ಆಂತರಿಕ ಬೇಗುದಿಗಳನ್ನು ಗಮನಿಸಿದಲ್ಲಿ, ಈ ಸರ್ಕಾರ ಮೇಲ್ನೋಟಕ್ಕೆ ನಿಸ್ತೇಜವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯದ ಜನರು ಕೋವಿಡ್‌ 2ನೇ ಅಲೆ ಸೃಷ್ಟಿಸಿದ್ದ ಸಾವು, ನೋವಿನಿಂದ ಹೊರಬಂದಿಲ್ಲ, ಲಾಕ್‌ಡೌನ್‌ನಿಂದಾಗಿ ಉಂಟಾದ ಆರ್ಥಿಕ ಸಂಕಷ್ಟವನ್ನು ಎದುರಿಸಲು ಆಗುತ್ತಿಲ್ಲ, ಈ ರೀತಿಯ ವಿಷಮ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುತ್ತಿರುವುದು ನಿಜವಾಗಿಯೂ ರಾಜ್ಯದ ಜನತೆಗೆ ಬಿಜೆಪಿ ಮಾಡುತ್ತಿರುವ ದ್ರೋಹ ಎಂದರೆ ತಪ್ಪಾಗಲಾರದು ಎಂದು ಹೇಳಿದ್ದಾರೆ. 

Tap to resize

Latest Videos

ಇದು ಸಾಲದೆಂಬಂತೆ ನಿತ್ಯವೂ ಪೆಟ್ರೋಲ್‌, ಡಿಸೇಲ್‌, ಗೊಬ್ಬರ, ಅಗತ್ಯ ವಸ್ತುಗಳ ದರಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ, ಮೊದಲೇ ದುಡಿಮೆ ಇಲ್ಲದೇ ಖಾಲಿ ಇರುವ ಬಡವರ ಹೊಟ್ಟೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡುತ್ತಿದ್ದಾರೆ. ಇದೊಂದು ಜನವಿರೋಧಿ ನೀತಿಯಾಗಿದೆ. ರಾಜ್ಯದ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ನೀಡುವುದನ್ನು ಬಿಟ್ಟು ಸಹಿ ಮಾಡಿಸಲು ಓಡಾಡುವುದು ಇವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.

ಕೋವಿಡ್‌ನಿಂದ ರಾಜ್ಯದಲ್ಲಿ 32 ಮಕ್ಕಳು ಅನಾಥ: ಸಚಿವೆ ಜೊಲ್ಲೆ

ಅಧಿ​ಕಾ​ರಿ​ಗಳ ಮೇಲೆ ಕ್ರಮ ಕೈಗೊ​ಳ್ಳಿ:

ಗದಗ ಜಿಲ್ಲಾಡಳಿತ 2 ನೇ ಅಲೆಯಲ್ಲಿ ಎಷ್ಟು ಮಕ್ಕಳಿಗೆ ಸೋಂಕು ತಗಲಿದೆ ಎನ್ನುವುದನ್ನು ಇದುವರೆಗೂ ಮುಚ್ಚಿಟ್ಟು ಘನಘೋರ ಅಪರಾಧ ಎಸಗಿದೆ. ಗುರುವಾರ ಇಲಾಖೆ ಸಚಿವರ ಮುಂದೆ ಒಮ್ಮೆಲೇ 1391 ಮಕ್ಕಳಿಗೆ ಸೋಂಕು ತಗಲಿತ್ತು, ಅವರಲ್ಲಿ 89 ಮಕ್ಕಳು ಮಾತ್ರ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದಿದ್ದಾರೆ. 

ಇನ್ನುಳಿದವರು ಗುಣಮುಖರಾಗಿದ್ದಾರೆ ಎಂದು ಹೇಳಿದ್ದು ತೀರಾ ಆಶ್ಚರ್ಯಕರ ಸಂಗತಿಯಾಗಿದ್ದು, ಈ ಅಂಕಿ ಅಂಶಗಳನ್ನು ಇದುವರೆಗೂ ಮಾಧ್ಯಮಗಳಿಗೆ, ಶಾಸಕರುಗಳಿಗೆ ನೀಡದೇ ಮುಚ್ಚಿಟ್ಟ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ನಾನು ಜಿಲ್ಲೆಯ ಅಧಿಕಾರಿಗಳು ಅಂಕಿ ಅಂಶಗಳ ವಿಷಯದಲ್ಲಿ ಮಾಡುತ್ತಿರುವ ದಿವ್ಯ ನಿರ್ಲಕ್ಷ್ಯತನ ಬಗ್ಗೆ ಈಗಾಗಲೇ ತಿಳಿಸಿದ್ದರೂ ಕ್ರಮ ತೆಗೆದುಕೊಳ್ಳದೇ ಇರುವುದಕ್ಕೆ ಹೀಗಾಗುತ್ತಿದೆ. ಮಕ್ಕಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ನಿಜವಾಗಿಯೂ ದೊಡ್ಡ ಆತಂಕದ ವಿಷಯವಾಗಿದ್ದು ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಎಚ್‌.ಕೆ. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ. 
 

click me!