* ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ತಾಂಡಾದಲ್ಲಿ ನಡೆದ ಘಟನೆ
* ಗ್ರಾಮಸ್ಥರಿಗೆ ಕೋವಿಡ್ ಪರೀಕ್ಷೆ ಮಾಡಿಕೊಳ್ಳಿ ಎಂದು ತಿಳಿಸಿಲು ಮನೆ ಮನೆಗೆ ಸರ್ವೇ ಕಾರ್ಯ
* ಹೊಲಗಳಿಗೆ ತೆರಳಿ ಗ್ರಾಮಸ್ಥರ ಮನವೊಲಿಸಲು ಮುಂದಾದ ಅಧಿಕಾರಿಗಳು
ಬ್ಯಾಡಗಿ(ಜೂ.11): ಕೋವಿಡ್ ಪರೀಕ್ಷೆಗೆ ಹೆದರಿ ಮನೆಗಳಿಗೆ ಬೀಗ ಹಾಕಿಕೊಂಡು ಗ್ರಾಮಸ್ಥರು ಹೊಲಗಳಿಗೆ ತರೆಳಿದ ಘಟನೆಗೆ ತಾಲೂಕಿನ ಚಿಕ್ಕಣಜಿ ತಾಂಡಾ ಸಾಕ್ಷಿಯಾಗಿದೆ.
ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೋವಿಡ್ ತಡೆಗಟ್ಟುವ ಹಿನ್ನಲೆಯಲ್ಲಿ ಬ್ಯಾಡಗಿ ತಾಲೂಕಿನ ಹಿರೇಅಣಜಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಚಿಕ್ಕಣಜಿ ತಾಂಡಾದಲ್ಲಿ ಗುರುವಾರ ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರಿಗೆ ಕೋವಿಡ್ ಪರೀಕ್ಷೆ ಮಾಡಿಕೊಳ್ಳಿ ಎಂದು ತಿಳಿಸಿಲು ಮನೆ ಮನೆಗೆ ಸರ್ವೇ ಕಾರ್ಯ ನಡೆಸಲು ಮುಂದಾಗಿದ್ದಾರೆ.
'ಕೋವಿಡ್ ಟೆಸ್ಟ್‌ಗೆ ಸಹಕರಿಸದ ಗ್ರಾಮ ಕಂಪ್ಲೀಟ್ ಲಾಕ್‌ಡೌನ್'
ಗ್ರಾಮವೇ ಖಾಲಿ:
ಚಿಕ್ಕಣಜಿ ತಾಂಡಾದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು 300 ಜನರು ವಾಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಗುರುವಾರ ಕೋವಿಡ್ ಪರೀಕ್ಷೆ ನಡೆಸುತ್ತಾರೆ ಎಂಬುದರ ಬಗ್ಗೆ ಬುಧವಾರ ಸಂಜೆ ಹಿರೇಅಣಜಿ ಗ್ರಾಪಂ ವತಿಯಿಂದ ಡಂಗುರ ಸಾರಲಾಗಿತ್ತು. ಇದರ ಮಾಹಿತಿ ಪಡೆದುಕೊಂಡಿದ್ದ ಗ್ರಾಮಸ್ಥರು, ಗುರುವಾರ ಬೆಳಗ್ಗೆ ಎಂಟು ಗಂಟೆಯ ಒಳಗೆ ಮನೆಗಳಿಗೆ ಬೀಗ ಹಾಕಿಕೊಂಡು ಹೊಲಗಳಿಗೆ ತೆರಳಿದ್ದಾರೆ. ಆರೋಗ್ಯ ಕಾರ್ಯಕರ್ತೆಯರು ಮನೆಗಳಿಗೆ ತೆರಳಿದ ಸಂದರ್ಭದಲ್ಲಿ ಗ್ರಾಮದಲ್ಲಿನ ಎಲ್ಲ ಮನೆಗಳಿಗೂ ಬೀಗ ಜಡಿದಿರುವುದು ಕಂಡು ಬಂದಿದೆ.
ಹೊಲಕ್ಕೆ ತೆರಳಿದ ಸಿಬ್ಬಂದಿ:
ಗ್ರಾಮಸ್ಥರೆಲ್ಲರೂ ಕೋವಿಡ್ ಪರೀಕ್ಷೆಗೆ ಹೆದರಿ ಹೊಲಗಳಿಗೆ ತೆರಳಿರುವ ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಸದಸ್ಯರಾದ ಬಸವರಾಜ ಕೋಣನವರ, ಜಯಪ್ಪ ಲಮಾಣಿ ಸೇರಿದಂತೆ ಕಾಗಿನೆಲೆ ಪಿಎಸ್‌ಐ ಬಳಿಗಾರ ಹೊಲಗಳಿಗೆ ತೆರಳಿ ಗ್ರಾಮಸ್ಥರ ಮನವೊಲಿಸಿದ್ದಾರೆ. ಕೆಲವರು ಒಪ್ಪಿ ಪರೀಕ್ಷೆ ಮಾಡಿಸಿಕೊಂಡರೆ ಕೆಲವರು ಅಲ್ಲಿಂದಲೂ ಕಾಲ್ಕಿತ್ತಿದ್ದಾರೆ ಇದರಿಂದಾಗಿ ಗ್ರಾಮದಲ್ಲಿ ಗುರುವಾರ ಒಟ್ಟು 50 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.