ಕೊರೋನಾ ಅಟ್ಟಹಾಸದ ಮಧ್ಯೆ ಬಳಕೆಯಾಗದ ರೈಲ್ವೆ ಐಸೋಲೇಷನ್‌ ಬೋಗಿ

By Kannadaprabha News  |  First Published May 20, 2021, 7:36 AM IST

* ಕೋವಿಡ್‌ ಕೇರ್‌ ಸೆಂಟರ್‌ನಂತೆ ಬಳಸಬಹುದಾದ ಬೋಗಿ
* ಒಂದು ಬೋಗಿಯಲ್ಲಿ 16 ಸೋಂಕಿತರಿಗೆ ಚಿಕಿತ್ಸೆ ನೀಡಬಹುದು
* ಆಕ್ಸಿಜನ್‌ ಅಳವಡಿಸಲು ಎಲ್ಲ ಬಗೆಯ ವ್ಯವಸ್ಥೆ ಬೋಗಿಯಲ್ಲಿ ಕಲ್ಪಿ​ಸಲಾಗಿದೆ


ಹುಬ್ಬಳ್ಳಿ(ಮೇ.20): ನೈರುತ್ಯ ರೈಲ್ವೆ ಇಲಾಖೆಯೂ ಕೋವಿಡ್‌ ತುರ್ತು ಸಂದರ್ಭದಲ್ಲಿ ಬೇಕಾಗಬಹುದೆಂಬ ಉದ್ದೇಶದಿಂದ ಸಿದ್ಧಪಡಿಸಿಟ್ಟಿರುವ ‘ಐಸೋಲೇಷನ್‌ ಬೋಗಿ’ಗಳ ಬಳಕೆಗೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಕಲ್ಯಾಣ ಮಂಟಪ, ಶಾಲೆಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯುವ ಸರ್ಕಾರ, ಸಿದ್ಧವಿರುವ ಬೋಗಿಗಳನ್ನು ಬಳಸಿಕೊಳ್ಳುತ್ತಿಲ್ಲ.

Latest Videos

undefined

ನೈರುತ್ಯ ರೈಲ್ವೆ ವಲಯವೂ ಕಳೆದ ವರ್ಷವೂ 312 ಐಸೋಲೇಷನ್‌ ಬೋಗಿಗಳನ್ನು ಸಿದ್ಧಪಡಿಸಿತ್ತು. ಆಗಲೂ ಅವುಗಳ ಉಪಯೋಗವಾಗಲಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಇರಲೆಂದು ಅವುಗಳಲ್ಲಿ 262 ಬೋಗಿಗಳನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳದೇ ಹಾಗೆ ಇಟ್ಟುಕೊಂಡಿತ್ತು. ಇನ್ನುಳಿದ 50 ಬೋಗಿಗಳನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಂಡಿದೆ.

"

ಇದೀಗ ಎರಡನೆಯ ಅಲೆ ಪ್ರಾರಂಭವಾದ ಬಳಿಕ ಕೊರೋನಾ ಸೋಂಕು ತೀವ್ರಗತಿಯಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಮೊದಲಿದ್ದ 262 ಐಸೋಲೇಷನ್‌ ಬೋಗಿಗಳನ್ನು ಮತ್ತೆ ಸ್ಯಾನಿಟೈಸ್‌ ಮಾಡಿ ಸಿದ್ಧಪಡಿಸಿಕೊಂಡಿದೆ. ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಗಳಲ್ಲಿ ಈ ಬೋಗಿಗಳಿವೆ. ಒಂದು ಬೋಗಿಯಲ್ಲಿ 16 ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ. ಆಕ್ಸಿಜನ್‌ ಅಳವಡಿಸಲು ಎಲ್ಲ ಬಗೆಯ ವ್ಯವಸ್ಥೆಯನ್ನೂ ಬೋಗಿಯಲ್ಲಿ ಕಲ್ಪಿ​ಸಲಾಗಿದೆ.

ಕಾಂಗ್ರೆಸ್‌ನವರೇನು ಬದನೆಕಾಯಿ ಕೊಡ್ತಾರೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ನಾವು ಸಿದ್ಧ:

ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುವುದರಿಂದ ರಾಜ್ಯ ಸರ್ಕಾರ ಬೆಡ್‌ಗಳ ಸಮಸ್ಯೆ ಎದುರಿಸಿದರೆ ಬೇಕಾಗಬಹುದು ಎಂಬ ಉದ್ದೇಶದಿಂದ ಬೋಗಿಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಈ ವರೆಗೂ ರಾಜ್ಯಸರ್ಕಾರದಿಂದ ಬೇಡಿಕೆ ಬಂದಿಲ್ಲ. ಹೀಗಾಗಿ ಇವುಗಳನ್ನು ನೀಡಿಲ್ಲ. ಒಂದು ವೇಳೆ ರಾಜ್ಯ ಸರ್ಕಾರವೇನಾದರೂ ಬೇಕೆಂದು ಕೇಳಿದರೆ ನಾವು ಕೊಡಲು ಸಿದ್ಧ. ನಾವು ಸಿದ್ಧಪಡಿಸಿರುವ ಐಸೋಲೇಷನ್‌ ಬೋಗಿಗಳನ್ನು ಕೋವಿಡ್‌ ಕೇರ್‌ ಸೆಂಟರ್‌ನಂತೆ ಬಳಸಿಕೊಳ್ಳಬಹುದಾಗಿದೆ. ಆದರೆ, ಈ ವರೆಗೂ ರಾಜ್ಯ ಸರ್ಕಾರ ಐಸೋಲೇಷನ್‌ ಬೋಗಿ ಬೇಕೆಂದು ಕೇಳಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸುತ್ತದೆ.

ಕೋವಿಡ್‌ ಕೇರ್‌ ಸೆಂಟರ್‌:

ಕೋವಿಡ್‌ ಕೇರ್‌ ಸೆಂಟರ್‌ ಮಾದರಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದಾಗಿದೆ. ಬೆಂಗಳೂರು ಸೇರಿದಂತೆ ಬೆಡ್‌ಗಳು ಸಿಗದೇ ಸೋಂಕಿತರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಕಲ್ಯಾಣ ಮಂಟಪ, ಶಾಲೆ, ವಸತಿ ಶಾಲೆ ಮತ್ತಿತರರೆಡೆ ಸರ್ಕಾರ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆದಿದೆ. ಅವುಗಳ ಬದಲಿಗೆ ಸುಸಜ್ಜಿತ ಐಸೋಲೇಷನ್‌ ಬೋಗಿಗಳನ್ನು ಬಳಕೆಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಏಕೆ ಎಂಬ ಪ್ರಶ್ನೆಗೆ ಮಾತ್ರ ಈ ವರೆಗೂ ಉತ್ತರ ಸಿಕ್ಕಿಲ್ಲ. ರಾಜ್ಯ ಸರ್ಕಾರ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಪರದಾಡುವ ಬದಲು ರೈಲ್ವೆ ವಲಯ ಸಿದ್ಧಪಡಿಸಿರುವ ಐಸೋಲೇಷನ್‌ ಬೋಗಿ ಬಳಸಿಕೊಳ್ಳುವುದು ಉತ್ತಮ.

ನಾವು ಸಿದ್ಧಪಡಿಸಿರುವ ಐಸೋಲೇಷನ್‌ ಬೋಗಿಗಳನ್ನು ಕೋವಿಡ್‌ ಕೇರ್‌ ಸೆಂಟರ್‌ ಮಾದರಿಯಂತೆ ಬಳಸಿಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿದರೆ ನಾವು ಅವನ್ನು ಕೊಡಲು ಸಿದ್ಧ. ಆದರೆ ರಾಜ್ಯ ಸರ್ಕಾರದಿಂದ ಈ ವರೆಗೂ ಬೇಡಿಕೆ ಬಂದಿಲ್ಲ. ಹೀಗಾಗಿ ಸದ್ಯ ಐಸೋಲೇಷನ್‌ ಬೋಗಿಗಳೆಲ್ಲ ಹುಬ್ಬಳ್ಳಿ, ಬೆಂಗಳೂರು, ಮೈಸೂರುಗಳಲ್ಲಿವೆ ಎಂದು ನೈಋುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!