ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದ ಬಳಿ ಹಣವಿಲ್ಲ: ಬಿಜೆಪಿ ವಿರುದ್ಧ ಹರಿಹಾಯ್ದ ಬೇಳೂರು

By Kannadaprabha NewsFirst Published Aug 23, 2021, 12:20 PM IST
Highlights

* ಸಂಸದ ಹೆಗಡೆ, ಕಾಗೇರಿ ಜನರ ನೋವಿಗೆ ಸ್ಪಂದಿಸುತ್ತಿಲ್ಲ
* ಉತ್ತರ ಕನ್ನಡ ಜಿಲ್ಲೆ ಸಂಪೂರ್ಣವಾಗಿ ಅಭಿವೃದ್ಧಿ ಕುಂಠಿತ
* ಕೋವಿಡ್‌ ಸಂತ್ರಸ್ತರಿಗೆ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ

ಸಿದ್ದಾಪುರ(ಆ.23): ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದ ಬಹಳ ದೊಡ್ಡ ಸಮಸ್ಯೆ ಇದೆ. ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್‌ ಹುಕುಂ ಅಡಿಯಲ್ಲಿ ಸಾಕಷ್ಟುಕಡೆ ಅರಣ್ಯಭೂಮಿ ಮಂಜೂರಾಗಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯಲ್ಲಿ ಈ ಕುರಿತು ಜನರ ನೋವಿಗೆ, ಇತರ ವರ್ಗದ ಜನರ ಸಮಸ್ಯೆಗೆ ಸ್ಪಂದನೆ ಮಾಡಬೇಕಾದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತಕುಮಾರ ಹೆಗಡೆ ಧ್ವನಿ ಎತ್ತುತ್ತಿಲ್ಲ. ಯಾವುದೋ ಮೋದಿ ಹೆಸರು ಹೇಳಿಕೊಂಡು ಆಯ್ಕೆಯಾಗಿರುವ ಅನಂತಕುಮಾರ ಹೆಗಡೆ, ಇಲ್ಲಿ ಸ್ಪೀಕರ್‌ ಆಗಿರುವ ಕಾಗೇರಿ ಇವರಿಂದಾಗಿ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣವಾಗಿ ಅಭಿವೃದ್ಧಿ ಕುಂಠಿತವಾಗಿದೆ. ಅಭಿವೃದ್ಧಿ ಮಾಡಲು ಸಹ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇದೆ ಎಂದು ಹೇಳಿದರು.

'BSY ಇಳಿಸಿದ್ದು ಬೇಸರವಾಗಿದೆ : ಆದರೆ ಬೊಮ್ಮಾಯಿ ಅಲ್ಲಾಡಿಸಲು ಯಾರಿಂದಲೂ ಆಗಲ್ಲ'

ಯಡಿಯೂರಪ್ಪ ಅವರು ಸಣ್ಣಪುಟ್ಟ ಅಭಿವೃದ್ಧಿ ಮಾಡುತ್ತಿದ್ದರು. ಈಗ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇಲ್ಲ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಸಂಪುಟದವರನ್ನೇ ಸರಿ ಮಾಡುವುದು ಕಷ್ಟ ಇದೆ ಎಂದರು.

ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಮುಂದಿನ ನಡೆಯೇನು ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರಿಲ್ಲದೆ ಬಿಜೆಪಿ ಇಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿರುವುದರಿಂದ ಶಿವಮೊಗ್ಗದಲ್ಲಿ ಬಿಜೆಪಿ ಅರ್ಧಕ್ಕೆ ಅರ್ಧ ಡೌನ್‌ ಆಗಿದೆ. ಶಿವಮೊಗ್ಗದಲ್ಲಿ ಈ ಸಲ ಮಧು ಬಂಗಾರಪ್ಪ, ಮಂಜುನಾಥಗೌಡ ಅವರಂಥವರು, ಹಿರಿಯ ನಾಯಕರೆಲ್ಲರೂ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದಾರೆ. ಅದರಿಂದ ಹಾಲಿ ಒಂದು ಎಂಎಲ್‌ಎ ಸೀಟ್‌ ಗೆದ್ದಿರುವ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ 7ಕ್ಕೆ 7 ಸೀಟ್‌ ಗೆಲ್ಲಲಿದೆ ಎಂದರು.

ಕೋವಿಡ್‌ ಸಂತ್ರಸ್ತರಿಗೆ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರ್ಕಾರ ಜನಾಶೀರ್ವಾದ ಕಾರ್ಯಕ್ರಮ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಧರ್ಮದ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಲು ಇನ್ನು ಮುಂದೆ ಬಿಜೆಪಿಯಿಂದ ಸಾಧ್ಯವಿಲ್ಲ. ಮುಂದಿನ ಚುನಾವಣೆಗಳಲ್ಲಿ ನಮ್ಮ ಪಕ್ಷ 150 ಸೀಟುಗಳಲ್ಲಿ ಜಯಭೇರಿ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 

click me!