* ಸೆ. 5ರ ವರೆಗೆ ಭಕ್ತರ ದರ್ಶನಕ್ಕೆ ಮತ್ತೆ ನಿರ್ಬಂಧಿಸಿದ ಸಹಾಯಕ ಆಯುಕ್ತರು
* ಕೊರೋನಾ ಮೂರನೇ ಅಲೆ ಮುನ್ಸೂಚನೆ, ದರ್ಶನಕ್ಕೆ ನಿರ್ಬಂಧ
* ಶ್ರಾವಣ ಮಾಸದಲ್ಲಿ ಆಂಜನೇಯಸ್ವಾಮಿ ದರ್ಶನ ಪಡೆಯದೆ ಭಕ್ತರು ವಾಪಸ್
ಗಂಗಾವತಿ(ಆ.23): ಕೊರೋನಾ 3ನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆಂಜನೇಯಸ್ವಾಮಿ ದರ್ಶನಕ್ಕೆ ಜಿಲ್ಲಾಡಳಿತ ಮತ್ತೆ ನಿರ್ಬಂಧ ವಿಧಿಸಿದೆ. ಆ. 2ರಿಂದ ಆ. 17ರ ವರೆಗೆ ಪ್ರವೇಶ ರದ್ದುಪಡಿಸಲಾಗಿತ್ತು. ಈಗ ಮತ್ತೆ ಸಹಾಯಕ ಆಯುಕ್ತರು ಸೂಚನೆ ಹೊರಡಿಸಿ, ಆ. 22ರಿಂದ ಸೆ. 5ರ ವರೆಗೆ ಹೋಗದಂತೆ ನಿರ್ಬಂಧಿಸಿದ್ದಾರೆ.
ಶ್ರಾವಣ ಮಾಸ ಭಕ್ತರಿಗೆ ವಿಶೇಷ ದಿನಗಳಾಗಿದ್ದು, ಅದರಲ್ಲೂ ಶ್ರಾವಣ ಶನಿವಾರ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಕಳೆದ ದಿನ ಶನಿವಾರ ವಿಶೇಷ ದಿನವಾಗಿದ್ದರಿಂದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಆದರೆ ದರ್ಶನ ನಿರ್ಬಂಧಿಸಿದ್ದರಿಂದ ಭಕ್ತರು ರಸ್ತೆಯ ದೂರದಲ್ಲಿ ನಿಂತು ಭಕ್ತಿ ಸಮರ್ಪಿಸಿದರು. ಇದರಿಂದಾಗಿ ಭಕ್ತರಿಗೆ ನಿರಾಸೆ ಉಂಟಾಯಿತು.
ಉತ್ತರ ಭಾರತದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನಿರ್ಬಂಧದ ಹಿನ್ನೆಲೆಯಲ್ಲಿ ಅಂಜನಾದ್ರಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಐತಿಹಾಸಿಕ ಪ್ರದೇಶಗಳನ್ನು ವೀಕ್ಷಿಸಿ ವಾಪಸಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಸೋಂಕು ಬರುತ್ತಿದ್ದರಿಂದ ಕ್ಕೆ ಭಕ್ತರು ಬಾರದಂತಾಗಿದೆ.
ಗಂಗಾವತಿ: ಅಂಜನಾದ್ರಿ ಸುತ್ತ ನಿಷೇಧಾಜ್ಞೆ ಬಿಸಿ..!
ನಿಷೇಧಾಜ್ಞೆ:
ಅಂಜನಾದ್ರಿ ಪರ್ವತ ಸೇರಿದಂತೆ ಬೆಟ್ಟದ ಸುತ್ತಲೂ ಭಕ್ತರು ಬರಬಾರದು ಮತ್ತು ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಾರದೆಂಬ ಕಾರಣಕ್ಕೆ ಜಿಲ್ಲಾಡಳಿತ ನಿಷೇಧಾಜ್ಞೆ ಹೊರಡಿಸಿದೆ. ಕಳೆದ 6 ತಿಂಗಳ ಹಿಂದೆ ಅಂಜನಾದ್ರಿ ಪರ್ವತ ಸೇರಿದಂತೆ ಐತಿಹಾಸಿಕ ಪ್ರದೇಶಗಳ ಸುತ್ತಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದರಿಂದ 144ನೇ ಕಲಂನ್ನು ಜಾರಿಗೊಳಿಸಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಈಗ ಕೊರೋನಾ ಮೂರನೇ ಅಲೆ ಬರುತ್ತಿದೆ ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ಅಂಜನಾದ್ರಿ ಪರ್ವತ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತರು ಆಗಮಿಸದಂತೆ ಆದೇಶ ಹೊರಡಿಸಿದ್ದು, 144ನೇ ಕಲಂ ಜಾರಿ ಮಾಡಿದ್ದಾರೆ.
ಮುಂಜಾಗ್ರತೆ
ಜಿಲ್ಲಾಡಳಿತ ಆದೇಶದ ಮೇರೆಗೆ ಪರ್ವತದ ದ್ವಾರದಲ್ಲಿ ತಡೆ ಗೇಟ್ ಅಳವಡಿಸಲಾಗಿದ್ದು, ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಅಂಜನಾದ್ರಿ ಪರ್ವತದ ಮೆಟ್ಟಿಲುಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗಿದ್ದು, ಬೆಟ್ಟದ ಹಿಂಭಾಗದಲ್ಲಿರುವ ರಾಂಪುರ ಬಳಿಯು ಸಹ ನಿಗಾವಹಿಸಲಾಗಿದೆ. ದೇವಸ್ಥಾನದಲ್ಲಿ ಅರ್ಚಕರು ಮಾತ್ರ ಪೂಜೆ ಮಾಡುತ್ತಿದ್ದು, ಯಾವುದೇ ರೀತಿಯ ಪ್ರಸಾದ ವಿತರಣೆಯನ್ನು ರದ್ದುಪಡಿಸಲಾಗಿದೆ.
ಶ್ರಾವಣ ಮಾಸ ಹಬ್ಬ ಹರಿದಿನಗಳ ಆಚರಣೆಗೆ ವಿಶೇಷ ದಿನವಾಗಿದೆ. ಅದರಲ್ಲೂ ಶ್ರಾವಣ ಶನಿವಾರ ಆಂಜನೇಯ ದರ್ಶನ ಪಡೆಯುವುದಕ್ಕೆ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಈಗ ಕೊರೋನಾ ಮೂರನೇ ಅಲೆಯು ಬರುತ್ತಿದೆ ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ದರ್ಶನ ನಿರ್ಬಂಧಿಸಿರುವುದು ನಿರಾಸೆ ತಂದಿದೆ ಎಂದು ಹೊಸಪೇಟೆ ಭಕ್ತ ಶ್ರೀನಿವಾಸ ರಾಯಸ್ತ ಹೇಳಿದ್ದಾರೆ.