'ರಾಜ್ಯದ ಜನ ಸಮಸ್ಯೆಯಲ್ಲಿದ್ರೂ ಬಿಜೆಪಿಯಲ್ಲಿ ಕುರ್ಚಿಗಾಗಿ ಕಾದಾಟ'

By Kannadaprabha NewsFirst Published Jul 30, 2021, 10:33 AM IST
Highlights

* ಎರಡನೇ ಅಲೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಜನರ ಸಂಕಷ್ಟಕ್ಕೆ ನೆರವು
* ಬಿಜೆಪಿ ನಾಯಕರು ಇಂದಿಗೂ ಅದೇ ಚಾಳಿ ಮುಂದುವರೆಸಿರುವುದು ನೋವಿನ ಸಂಗತಿ
* ನಾವು ಜನರಿಗಾಗಿ ಸಾಮಾಜಿಕ ಕಾರ್ಯ ಮಾಡುತ್ತೇವೆ ಹೊರತು ರಾಜಕೀಯ ಬೆರಸುವುದಿಲ್ಲ  

ಡಂಬಳ(ಜು.30): ಕೊರೋನಾ ಹೆಮ್ಮಾರಿಯ ರೋಗಬಾಧೆಯ ಜನರ ಸಂಕಷ್ಟದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೆರವು ನೀಡದೆ ಲಕ್ಷಾಂತರ ಅಮಾಯಕ ಬಡ ಜನರು ಸಾವಿಗೀಡಾಗಿ ಸಂಕಷ್ಟಅನುಭವಿಸುತ್ತಿದ್ದು ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಜನರ ಜೀವನದ ಜತೆಗೆ ಚೆಲ್ಲಾಟ ನಡೆಸಿದೆ ಎಂದು ಮುಂಡರಗಿ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಸಂಯೋಜಕ ಅಶೋಕ ಬಿ.ಎಚ್‌. ಹೇಳಿದ್ದಾರೆ. 

ಗ್ರಾಮದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎರಡನೇ ಅಲೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಜನರ ಸಂಕಷ್ಟಕ್ಕೆ ನೆರವಾಯಿತು. ಆರೋಗ್ಯ ಸಹಾಯ ಹಸ್ತ ಲಸಿಕೆ ನೀಡುವಿಕೆ, ಸಹಾಯವಾಣಿಯ ಮೂಲಕ ಜನರಿಗೆ ಸೂಕ್ತ ಚಿಕಿತ್ಸೆ ನೀಡುವುದು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೋವಿಡ್‌ ನಿಯಂತ್ರಣಕ್ಕಾಗಿ ಶ್ರಮಿಸುತ್ತಾ ಬಂದಿದೆ. ಆದರೆ, ಬಿಜೆಪಿ ಸರ್ಕಾರವು ಕೋವಿಡ್‌ 2ನೇ ಅಲೆಯಲ್ಲಿ ಕುರ್ಚಿಕಾಗಿ ಕಾದಾಟ ನಡೆಸಿದ್ದು, ಈಗಲಾದರೂ ಜನರ ಸಮಸ್ಯೆಗೆ ಸ್ಪಂಧಿಸಬೇಕಿದ್ದ ಬಿಜೆಪಿ ನಾಯಕರು ಇಂದಿಗೂ ಅದೇ ಚಾಳಿ ಮುಂದುವರೆಸಿರುವುದು ನೋವಿನ ಸಂಗತಿ ಎಂದರು.

Latest Videos

ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಇನ್ಮುಂದೆ ಆಗದಿರಲಿ: ಬೊಮ್ಮಾಯಿಗೆ ಪಾಟೀಲ್‌ ಶುಭ ಹಾರೈಕೆ

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಮು ಕಲಾಲ ಮಾತನಾಡಿ, ಜನರ ಜೀವನಾಡಿಯಾಗಿರುವಂತಹ ಡಿಸೇಲ್‌ ಮತ್ತು ಪೆಟ್ರೋಲ್‌ ಗಗನಕ್ಕೆ ಏರಿದ ಹಿನ್ನೆಲೆಯಲ್ಲಿ ಕಾರ್ಮಿಕರು, ರೈತರು, ಬಡವರ ಸಂಕಷ್ಟದ ಜೀವನ ನಡೆಸುವಂತಹ ಸ್ಥಿತಿ ಉಂಟಾಗಿದೆ. ದೇಶದಲ್ಲಿ ಮೋದಿ ವಿರೋಧಿ ಅಲೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಲೆದೂರಿದೆ. ಮುಖ್ಯಮಂತ್ರಿಯ ಆಯ್ಕೆ ಸರಳವಾಗಿದೆ ಎಂದರೂ ಕೂಡಾ ಆಂತರಿಕ ಬೇಗುದಿಯಿಂದ ಬಿಜೆಪಿ ತತ್ತರಿಸಿದೆ. ಇದರಿಂದ ಮುಂಬರುವ ಜಿಪಂ, ತಾಪಂ ಚುನಾವನೆಯಲ್ಲಿ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಲಿದೆ. ಮುಂಬರುವ ದಿನಗಳಲ್ಲಿ ಮತೊಮ್ಮೆ ಕರ್ನಾಟಕ ರಾಜ್ಯ ಕಾಂಗ್ರೆಸ್‌ ಪಕ್ಷದ ವಶವಾಗುವುದರಲ್ಲಿ ಸಂಶಯವಿಲ್ಲ. ನಾವು ಜನರಿಗಾಗಿ ಸಾಮಾಜಿಕ ಕಾರ್ಯ ಮಾಡುತ್ತೇವೆ ಹೊರತು ರಾಜಕೀಯ ಬೆರಸುವುದಿಲ್ಲ ಎಂದರು. ತಾಪಂ ಸದಸ್ಯ ಮಾಜಿ ರುದ್ರಗೌಡ ಪಾಟೀಲ್‌, ಹೇಮಂತಗೌಡ ಪಾಟೀಲ, ಚನ್ನಬಸಪ್ಪ ಹಳ್ಳಿ, ಕೆ.ಎನ್‌. ದೊಡ್ಡಮನಿ, ಮರಿಯಪ್ಪ ಸಿದ್ದಣ್ಣವರ, ಚನ್ನಬಸಪ್ಪ ಹಳ್ಳಿ ಇದ್ದರು.
 

click me!