ಕೇಂದ್ರ ಸರ್ಕಾರದಿಂದ ಪಶ್ಚಿಮ ಬಂಗಾಳಕ್ಕೆ 2700 ಕೋಟಿ ರು. ಅನುದಾನ| ರಾಜ್ಯಕ್ಕೆ ಜಿಪುಣನಂತೆ ವರ್ತಿಸಿದೆ, ಇದು ಕೇಂದ್ರದ ಮಲತಾಯಿ ಧೋರಣೆ| ಬಿಡಿಗಾಸು ನೀಡಿ ಕುಳಿತರೆ ಸಾಲದು, ಜನರ ಸಂಕಷ್ಟ ಅರಿತು ಹೆಚ್ಚಿನ ನೆರವು ನೀಡಬೇಕಿದೆ: ಡಾ.ಅಜಯ ಸಿಂಗ್|
ಕಲಬುರಗಿ(ನ.18): ಮಳೆ, ನೆರೆಯಿಂದ ರಾಜ್ಯದಲ್ಲಿ ಅಪಾರ ಹಾನಿಗೆ ಕೇಂದ್ರ ಸರ್ಕಾರ 577 ಕೋಟಿ ರು. ನೀಡುವ ಮೂಲಕ ಕರ್ನಾಟಕದ ಮೂಗಿಗೆ ತುಪ್ಪ ಸವರಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ ಸಿಂಗ್ ದೂರಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಪಶ್ಚಿಮ ಬಂಗಾಳಕ್ಕೆ 2700 ಕೋಟಿ ರು. ಅಪಾರ ಅನುದಾನ ನೀಡಿದ್ದು, ರಾಜ್ಯಕ್ಕೆ ಜಿಪುಣನಂತೆ ವರ್ತಿಸಿದೆ. ಇದು ಕೇಂದ್ರದ ಮಲತಾಯಿ ಧೋರಣೆಯಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ 3 ಹಂತದಲ್ಲಿ ಪ್ರವಾಹ, ಮಳೆ ಬಂದು ಸಾವಿರಾರು ಕೋಟಿ ರೂಪಾಯಿ ಹಾನಿ ಆಗಿತ್ತು. 2384 ಕೋಟಿ ಅನುದಾನ ಕೋರಿ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೇಂದ್ರ 577 ಕೋಟಿ ರು ನೀಡಿ ಕೈತೊಳೆದುಕೊಂಡಿದೆ. ಪ.ಬಂಗಾಳಕ್ಕೆ ಚುನಾವಣೆ ಲಾಭ ಲೆಕ್ಕ ಹಾಕಿ ಭಾರಿ ನೆರವು ನೀಡಿದೆ ಎಂಬುದು ಸ್ಪಷ್ಟ. ಕಳೆದ ಬಾರಿಯೂ ರಾಜ್ಯದ 3,200 ಕೋಟಿ ರು. ಮನವಿಗೆ ಪ್ರತಿಯಾಗಿ 1,800 ಕೋಟಿ ನೀಡಿತ್ತು. ಕೇಂದ್ರದ ಈ ನಡೆ ಸಂಪೂರ್ಣ ಚುನಾವಣೆ ಕೇಂದ್ರಿತ ಹಾಗೂ ರಾಜಕೀಯ ಲಾಭದ ನಡೆ ಆಗಿದೆ ಎಂದು ದೂರಿದ್ದಾರೆ.
ಕೈ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ಧ ಎದುರಾಯ್ತು ಗಂಭೀರ ಆರೋಪ
ಹಾನಿಯಿಂದ ಮೇಲೇಳದ ಜನ:
ನೆರೆ, ಮಳೆ ಹೊಡೆತದಿಂದ ರೈತರು, ಜನತೆ ಇನ್ನೂ ಮೇಲೆ ಎದ್ದಿಲ್ಲ. ಜಿಲ್ಲೆಯ ಅಫಜಲ್ಪುರ, ಜೇವರ್ಗಿ, ಆಳಂದ ಸೇರಿದಂತೆ ಎಲ್ಲಡೆ 150 ಕೋಟಿಗೂ ಅಧಿಕ ಹಾನಿ ಆಗಿದೆ. ಬಿಡಿಗಾಸು ನೀಡಿ ಕುಳಿತರೆ ಸಾಲದು, ಜನರ ಸಂಕಷ್ಟ ಅರಿತು ಹೆಚ್ಚಿನ ನೆರವು ನೀಡಬೇಕಿದೆ. ಕೇಂದ್ರಕ್ಕೆ ಹಾನಿಯ ಬಗ್ಗೆ ಇನ್ನಷ್ಟು ಮನವರಿಕೆ ಮಾಡಿ ಕೊಟ್ಟು ನೊಂದವರಿಗೆ ಹೆಚ್ಚು ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಲಿ ಎಂದೂ ಡಾ.ಅಜಯ್ ಸಿಂಗ್ ಆಗ್ರಹಿಸಿದ್ದಾರೆ.