
ಶಿವಾನಂದ ಗೊಂಬಿ
ಹುಬ್ಬಳ್ಳಿ (ಜೂ.28): ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 195 ಆಶಾ ಮೆಂಟರ್ಸ್‌ನ್ನು ಸರ್ಕಾರ ಕೆಲಸದಿಂದ ಮುಕ್ತಗೊಳಿಸಿದೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ನೀಡಿದ್ದ ವಚನವನ್ನು ಕಾಂಗ್ರೆಸ್ ತಾನೇ ಮರೆತಂತಾಗಿದೆ. ಇದು ಆಶಾ ಮೆಂಟರ್ಸ್‌ಗಳಲ್ಲಿ ಆಕ್ರೋಶವನ್ನುಂಟು ಮಾಡಿದ್ದು, ಹೋರಾಟಕ್ಕೆ ಅಣಿಯಾಗುತ್ತಿರುವುದು ಒಂದೆಡೆಯಾದರೆ, ಇದೇ ಯೋಜನೆಯಡಿ ನೇಮಕಗೊಂಡಿರುವ ಉಳಿದ ಸಿಬ್ಬಂದಿಗಳಲ್ಲಿ ಢವ ಢವ ಶುರುವಾಗಿದೆ. ಕೇಂದ್ರ ಸರ್ಕಾರವು ದೇಶದಲ್ಲೇ ಎನ್‌ಎಚ್‌ಆರ್‌ಎಂ (ರಾಷ್ಟ್ರೀಯ ಆರೋಗ್ಯ ರೂರಲ್ ಮಿಷನ್), ಎನ್‌ಎಚ್‌ಯುಎಂ (ರಾಷ್ಟ್ರೀಯ ಆರೋಗ್ಯ ನಗರ ಮಿಷನ್) ಎಂಬ ಯೋಜನೆ ಜಾರಿಗೊಳಿಸಿತ್ತು. ಇದೆರಡನ್ನು ಸೇರಿಸಿ ಎನ್‌ಎಚ್‌ಎಂ ಎಂದು ಪರಿವರ್ತನೆ ಮಾಡಿತ್ತು.
ಇದರಡಿಯಲ್ಲಿ ನರ್ಸ್, ಆಯುಷ್ ವೈದ್ಯರು, ಡಾಟಾ ಎಂಟ್ರಿ ಆಪರೇಟರ್ಸ್, ಕೆಲವೊಂದಿಷ್ಟು ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿತ್ತು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಕಾಪಾಡುವಲ್ಲಿ ಈ ಸಿಬ್ಬಂದಿ ಕೆಲಸ ಮಾಡುತ್ತಿತ್ತು. ಜತೆಗೆ ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರನ್ನು ನೇಮಿಸಿತ್ತು. ಒಂದೊಂದು ತಾಲೂಕಲ್ಲಿ ಕನಿಷ್ಠ 200-250 ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಗ್ರಾಮೀಣ ಪ್ರದೇಶದಲ್ಲಿ ಜನರ ಆರೋಗ್ಯ ಕಾಪಾಡುವ ಕೆಲಸ ನೀಡಲಾಗಿತ್ತು.
ಇವರಿಗೆ ತರಬೇತಿ ನೀಡಲು, ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಸಲಹೆ ಸೂಚನೆ ನೀಡುವುದಕ್ಕಾಗಿ ಎನ್‌ಎಚ್‌ಎಂನಡಿ ನೇಮಕವಾಗಿದ್ದ ನರ್ಸ್‌ಗಳಲ್ಲಿ 195 ಜನರನ್ನು ಆಶಾ ಮೆಂಟರ್ಸ್‌ಗಳನ್ನು ನೇಮಿಸಿಕೊಳ್ಳಲಾಗಿತ್ತು. ಪ್ರತಿ ಜಿಲ್ಲೆಗೊಬ್ಬರು, ತಾಲೂಕೊಬ್ಬರಂತೆ ರಾಜ್ಯದಲ್ಲಿ ಬರೋಬ್ಬರಿ 195 ಜನ ಆಶಾ ಮೆಂಟರ್ಸ್ ಕಾರ್ಯ ನಿರ್ವಹಿಸುತ್ತಿದ್ದರು. ಇವರೆಲ್ಲರೂ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿ ವರ್ಷಕ್ಕೊಮ್ಮೆ ಇವರ ಗುತ್ತಿಗೆ ಆದೇಶ ನವೀಕರಣಗೊಳಿಸಲಾಗುತ್ತಿತ್ತು.
ಕಿತ್ತಾಕಿದ ಸರ್ಕಾರ: ಇಷ್ಟು ದಿನ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಇದೀಗ ಇವರೆಲ್ಲರನ್ನು ರಾಜ್ಯ ಸರ್ಕಾರ ಕೆಲಸದಿಂದ ತೆಗೆದು ಹಾಕಿದೆ. ಜತೆಗೆ ಎನ್‌ಎಚ್‌ಎಂನಡಿ ನರ್ಸ್ ಹುದ್ದೆಗಳು ಖಾಲಿ ಇದ್ದರೆ ಆ ಹುದ್ದೆಗಳಿಗೆ ಅರ್ಹರನ್ನು ಪರಿಗಣಿಸಬಹುದು. ಇಲ್ಲದಿದ್ದಲ್ಲಿ ಕೈ ಬಿಡಬೇಕು ಎಂದು ಸ್ಪಷ್ಟ ಸಂದೇಶದ ಸುತ್ತೊಲೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಇದು ಇವರನ್ನು ಕೆರಳಿಸಿದೆ. ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಕಿತ್ತು ಹಾಕಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮಾಡುತ್ತಿದ್ದು, ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಢವ ಢವ: ಇದೇ ಯೋಜನೆಯಡಿ ನೇಮಕವಾಗಿರುವ ಆಯುಷ್ ವೈದ್ಯರು, ಡಾಟಾ ಎಂಟ್ರಿ ಆಪರೇಟರ್ಸ್, ದಾದಿಯರಲ್ಲಿ ಇದೀಗ ಢವ ಢವ ಶುರುವಾಗಿದೆ. ಎಲ್ಲಿ ತಮ್ಮನ್ನು ಹೇಳದೇ ಕೇಳದೇ ಕೆಲಸದಿಂದ ತೆಗೆದುಹಾಕುತ್ತಾರೆ ಎಂಬ ಭಯ ಶುರುವಾಗಿದೆ. ಹೀಗಾಗಿ ಆಶಾ ಮೆಂಟರ್ಸ್ ಹೋರಾಟಕ್ಕೆ ಇವರೆಲ್ಲರೂ ಇದೀಗ ಸಾಥ್ ನೀಡಲು ನಿರ್ಧರಿಸಿದ್ದಾರೆ.
ವಚನ ಮರೆತ ಕಾಂಗ್ರೆಸ್: ಎನ್‌ಎಚ್‌ಎಂನಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಎಲ್ಲ ಸಿಬ್ಬಂದಿಗಳನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ಬಹಳ ವರ್ಷಗಳದ್ದು. ಹೋರಾಟ ನಡೆಸಿರುವುದುಂಟು. ಚುನಾವಣಾ ಪೂರ್ವದಲ್ಲಿ ತಮ್ಮ ಸರ್ಕಾರ ಬಂದರೆ ಎನ್‌ಎಚ್‌ಎಂನಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲರನ್ನು ಕಾಯಂಗೊಳಿಸಲಾಗುವುದು ಎಂದು ಕಾಂಗ್ರೆಸ್ ವಾಗ್ದಾನ ಮಾಡಿತ್ತು. ಇದು ಸಿಬ್ಬಂದಿಗಳಲ್ಲಿ ಸಂತಸವನ್ನುಂಟು ಮಾಡಿತ್ತು. ಆದರೆ ಇದೀಗ ಆಶಾ ಮೆಂಟರ್ಸ್‌ನ್ನು ಕಿತ್ತು ಹಾಕುವ ಮೂಲಕ ತನ್ನ ವಚನವನ್ನು ತಾನೇ ಮರೆತಿದೆ ಎಂಬ ಆಕ್ರೋಶ ವ್ಯಕ್ತವಾಗಿರುವುದಂತೂ ಸತ್ಯ.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಎನ್‌ಎಚ್‌ಎಂನಡಿ ಕಾರ್ಯನಿರ್ವಹಿಸುತ್ತಿರುವವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿತ್ತು. ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಎಲ್ಲರೂ ಅವರಿಗೆ ಭರವಸೆ ನೀಡಿದ್ದರು. ನುಡಿದಂತೆ ನಡೆಯುವ ಸರ್ಕಾರವೇ ಆಗಿದ್ದರೆ ಆಶಾ ಮೆಂಟರ್ಸರನ್ನು ಕಿತ್ತಹಾಕಿರುವುದೇಕೆ? ಕೂಡಲೇ ಅವರೆಲ್ಲರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು.
- ಎಸ್.ವಿ. ಸಂಕನೂರು, ಎಂಎಲ್ಸಿ,
ನಮಗೆ ಒಂದೇ ಒಂದು ಮಾತು ಹೇಳದೇ ಕಿತ್ತು ಹಾಕಿದೆ. ಇದು ಯಾವ ನ್ಯಾಯ? ಏಕಾಏಕಿ ಕಿತ್ತು ಹಾಕಿದರೆ ನಾವೆಲ್ಲಿ ಹೋಗಬೇಕು? ನಮ್ಮ ಕುಟುಂಬವೇ ಬೀದಿಗೆ ಬಂದಂತಾಗಿದೆ.
- ರೇಷ್ಮಾ, ಆಶಾ ಮೆಂಟರ್ಸ್