'ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ: ಕಾಂಗ್ರೆಸ್‌ ಗೂಂಡಾಗಿರಿ ಆರಂಭ'

By Kannadaprabha NewsFirst Published May 3, 2021, 12:19 PM IST
Highlights

ಹಲವು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ| ಬಸನಗೌಡ ಗೆದ್ದಾಗಕ್ಷಣ ಗೂಂಡಾಗಿರಿ ಆರಂಭ: ಪ್ರತಾಪಗೌಡ ಆರೋಪ| ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರಿಗೆ ಸಾಂತ್ವನ ಹೇಳಿದ ಪ್ರತಾಪಗೌಡ ಪಾಟೀಲ್‌| 

ಸಿಂಧನೂರು(ಮೇ.03): ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದಾಕ್ಷಣ ಹಲವು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಮೂಲಕ ಗೂಂಡಾಗಿರಿ ಆರಂಭಿಸಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಆರೋಪಿಸಿದ್ದಾರೆ.

ಸ್ಥಳೀಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಸಂಜೆ ಭೇಟಿ ನೀಡಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ ಮುಖಂಡರಾದ ಪಂಪನಗೌಡ, ದಿನೇಶ್‌ಗೌಡ ನೇತೃತ್ವದಲ್ಲಿ ಸುಮಾರು 50 ಜನರು ಸೇರಿ ಗುಂಡಾ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಅಮರೇಶ ಅಮರಣ್ಣ, ಗಣೇಶ ತಿರುಪತೆಪ್ಪ, ಅಮರೇಶ ಹನುಮಂತ ಮತ್ತು ಗಂಗಪ್ಪ ಕಬೀರಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ದಾರೆ. ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯ ಗಂಭೀರವಾಗಿರುವುದರಿಂದ ಬಳ್ಳಾರಿ ಆಸ್ಪತ್ರೆಗೆ ಕಳುಹಿಸುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.

'ದೇಶ ಹಾಗೂ ರಾಜ್ಯದಲ್ಲಿ ಜನ ಬದಲಾವಣೆ ಬಯಸಿರುವುದಕ್ಕೆ ಚುನಾವಣೆ ಫಲಿತಾಂಶಗಳೇ ಸಾಕ್ಷಿ'

ಈ ವೇಳೆ ಕೋಳಬಾಳ ಗ್ರಾಮದಲ್ಲಿ ತಿಮ್ಮಣ್ಣ ನಾಯಕ, ಬೆಂಚಮಟ್ಟಿ ಬೂತ್‌ ಕಮಿಟಿ ಅಧ್ಯಕ್ಷ ಶರಣಬಸವ, ತುಗ್ಗಲದಿನ್ನಿ, ರತ್ನಾಪುರ, ಕಳಚಿಮ್ಮಿ ಹೀಗೆ ಹತ್ತಾರು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ನವರು ಹಲ್ಲೆ ಎಸಗಿದ್ದಾರೆ. ತಕ್ಷಣವೇ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೂರು ಬಾರಿ ಶಾಸಕನಾಗಿ ಅಧಿಕಾರ ನಡೆಸಿದರೂ ಯಾವುದೇ ಅಹಿತಕರ ಘಟನೆ ಮತ್ತು ಹಿಂಸೆಗೆ ತಾವು ಅವಕಾಶ ನೀಡಿರಲಿಲ್ಲ. ಆದರೆ, ಚುನಾವಣೆಯಲ್ಲಿ ಗೆದ್ದ ಒಂದೇ ದಿನದಲ್ಲಿ ಗೂಂಡಾಗಿರಿ ನಡೆಸಿರುವುದನ್ನು ಮತದಾರರು ಗಮನಿಸಬೇಕು ಎಂದು ಅವರು, ಉಪಚುನಾವಣೆಯಲ್ಲಿ ಮತದಾರರ ತೀರ್ಪಿಗೆ ತಲೆಬಾಗುತ್ತೇನೆ. ಮತದಾರರು ಬದಲಾವಣೆಯನ್ನು ಬಯಸಿದ್ದಾರೆ ಎಂದರು. ಮುಖಂಡರಾದ ಬಸವಂತರಾಯ ಕುರಿ, ಅಮರೇಶ ಗಚ್ಚಿನಮನಿ, ಅಮರೇಶಗೌಡ ರತ್ನಾಪುರ ಇದ್ದರು.
 

click me!