ನೆಗೆಟಿವ್, ಪಾಸಿಟಿವ್, ಮತ್ತೇ ನೆಗೆಟಿವ್| ಮನೆಗೆ ವಾಪಸ್ಸಾದ ದುಕಾನವಾಡಿ ವ್ಯಕ್ತಿ : ಪಟಾಕಿ ಸಿಡಿಸಿ, ಹೂ ಮಳೆ ಚೆಲ್ಲಿ ಅದ್ಧೂರಿ ಸ್ವಾಗತ| ಪರೀಕ್ಷೆ ವರದಿಗಳ ಮೇಲೆಯೇ ಅನುಮಾನ| ವ್ಯಕ್ತಿಯ ಪುತ್ರಿ ಹಾಗೂ ಪತ್ನಿಗೂ ರಿಪೋರ್ಟ್ ನೆಗೆಟಿವ್ ಬಂದಿದೆ. ಇವರಿಗೂ ಪಾಸಿಟಿವ್ ಬಂದಿತ್ತು|
ಯಾದಗಿರಿ(ಮೇ.30): ಒಬ್ಬನೇ ವ್ಯಕ್ತಿಗೆ 7 ದಿನಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಡೆಗಳಲ್ಲಿನ ವರದಿಗಳು ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಈಗ ನೆಗೆಟಿವ್ ಬಂದಿರುವುದು ಅಚ್ಚರಿ ಮೂಡಿಸಿವೆ. ಅಲ್ಲದೆ, ಮೂರು ಬಾರಿ ಪ್ರತ್ಯೇಕ ಪರೀಕ್ಷೆಗೊಳಗಾಗಿ ಶುಕ್ರವಾರ ಮನೆಗೆ ವಾಪಸ್ಸಾದ ವ್ಯಕ್ತಿಯನ್ನು ಪಟಾಕಿ ಸಿಡಿಸಿ, ಮೆರವಣಿಗೆಯ ಮೂಲಕ ಮನೆಗೆ ಬರಮಾಡಿಕೊಳ್ಳಲಾಗಿದೆ.
ಕೊರೋನಾ ಸೋಂಕು ತಗುಲಿದೆ ಅನ್ನೋ ಕಾರಣಕ್ಕೆ ಮೇ 23 ರಂದು ಯಾದಗಿರಿ ಜಿಲ್ಲೆಯಲ್ಲಿ ಒಂದೇ ದಿನ 72 ಪ್ರಕರಣಗಳು ಪತ್ತೆಯಾಗಿದ್ದವು. ಇದರಲ್ಲಿ ನಗರದ ದುಕಾನವಾಡಿಯ 38 ವರ್ಷದ ಸೋಂಕಿತ (ಪಿ-1758) ಹಾಗೂ 14 ತಿಂಗಳ ಹೆಣ್ಣುಮಗು (ಪಿ-1874) ಇದ್ದುದರಿಂದ ಅವರನ್ನು ಆಸ್ಪತ್ರೆ ಸೇರಿಸಲಾಗಿತ್ತು.
undefined
ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಲು ಕಾರ್ಮಿಕನ ಯತ್ನ: ಹಿಡಿಯಲು ಹೋದ ASI ಮೇಲೆ ಹಲ್ಲೆ
ಅಪ್ಲಾಸ್ಟಿಕ್ ಅನಿಮೀಯಾ ಕಾಯಿಲೆಯಿಂದ ಬಳಲುತ್ತಿದ್ದ ಈ ವ್ಯಕ್ತಿ ಪುಣೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಮೇ 16 ರಂದು ವಾಪಸ್ಸಾದ ಸದರಿ ವ್ಯಕ್ತಿಯನ್ನು ಕಲಬುರಗಿಯ ಜಿಮ್ಸ್‌ಗೆ ಕಳುಹಿಸಲಾಗಿತ್ತು. ಅಲ್ಲಿ ನಾಲ್ಕು ದಿನಗಳ ಕಾಲ ದಾಖಲಾಗಿದ್ದ ಇವರು, ಮೇ 20 ರಂದು ಯಾದಗಿರಿಗೆ ಆಗಮಿಸಿದ್ದರು. ಇಲ್ಲೂ ಸಹ ಕೋವಿಡ್ ಟೆಸ್ಟ್‌ಗಾಗಿ ಸ್ಯಾಂಪಲ್ ಪಡೆಯಲಾಗಿತ್ತು. ಮೇ 23 ರಂದು ಯಾದಗಿರಿಯಲ್ಲಿ ಬಂದ ವರದಿಯಲ್ಲಿ ದುಕಾನವಾಡಿಯ ವ್ಯಕ್ತಿಗೆ ಪಾಸಿಟಿವ್ ಬಂದಿರುವುದು ಖಚಿತವಾಗಿ, ಈ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಕಂಟೇನ್ಮೆಂಟ ಝೋನ್ ಮಾಡಲಾಗಿದೆ.
ಈಗ, ಮೇ 29 ರಂದು ಮತ್ತೆ ಈ ವ್ಯಕ್ತಿಗೆ ಕಲಬುರಗಿಯ ಇಎಸ್‌ಐ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದಾಗ, ಅದು ನೆಗೆಟಿವ್ ಬಂದಿದೆ ಎನ್ನಲಾಗಿದೆ. ವ್ಯಕ್ತಿಯ ಪುತ್ರಿ ಹಾಗೂ ಪತ್ನಿಗೂ ರಿಪೋರ್ಟ್ ನೆಗೆಟಿವ್ ಬಂದಿದೆ. ಇವರಿಗೂ ಪಾಸಿಟಿವ್ ಬಂದಿತ್ತು. ಹೀಗಾಗಿ, ಮನೆಗೆ ವಾಪಸ್ಸಾದ ಈ ವ್ಯಕ್ತಿಯನ್ನು ಮೆರವಣಿಯ ಮೂಲಕ ಕರೆತರಲಾಗಿದೆ. ಪಟಾಕಿ ಸಿಡಿಸಿದ ಬಡಾವಣೆಯ ಕೆಲವರು ಕೊರೋನಾ ನೆಗೆಟಿವ್ ಬಂದಿದ್ದಕ್ಕೆ ಸ್ವಾಗತ ಎಂದು ಘೋಷಣೆ ಕೂಗಿದ್ದಾರೆ. ಹೂ ಹಾರ ಹಾಕಿ ಸಂಭ್ರಮಿಸಿದ್ದಾರೆ.
ಕಲಬುರಗಿಯ ಜಿಮ್ಸ್‌ನಲ್ಲಿ ನೆಗೆಟಿವ್, ಯಾದಗಿರಿಯಲ್ಲಿ ಪಾಸಿಟಿವ್ ಹಾಗೂ ಈಗ ಕಲಬುರಗಿಯ ಇಎಸ್‌ಐ ಆಸ್ಪತ್ರೆಯಲ್ಲಿ ನೆಗೆಟಿವ್ ಬಂದಿರುವುದನ್ನು ನೋಡಿದರೆ, ಪರೀಕ್ಷೆ ವರದಿಗಳ ಮೇಲೆಯೇ ಅನುಮಾನ ಮೂಡಿಸುವಂತಿದೆ. ಕನ್ನಡಪ್ರಭದಲ್ಲಿ ಈ ಬಗ್ಗೆ ಮೇ 24 ರಂದು ವರದಿ ಪ್ರಕಟಿಸಿ ಗಮನ ಸೆಳೆದಿತ್ತು.