ಗ್ರಾಮಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ: ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್‌ ಸೂಚನೆ

By Kannadaprabha News  |  First Published Aug 17, 2023, 4:54 PM IST

ಗ್ರಾಮಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ತೀರ್ಮಾನ ಕೈಗೊಂಡರೆ ಬಹುತೇಕ ಸಮಸ್ಯೆ ಸ್ಥಳೀಯವಾಗಿಯೇ ಇತ್ಯರ್ಥವಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. 


ಮೂಡಿಗೆರೆ (ಆ.17): ಗ್ರಾಮಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ತೀರ್ಮಾನ ಕೈಗೊಂಡರೆ ಬಹುತೇಕ ಸಮಸ್ಯೆ ಸ್ಥಳೀಯವಾಗಿಯೇ ಇತ್ಯರ್ಥವಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಮತ್ತು ಕುಂದು ಕೊರತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ಥಳೀಯವಾಗಿ ಸಮಸ್ಯೆ ಬಗೆಹರಿದರೆ ಸಚಿವರು, ಶಾಸಕರ ಬಳಿ ತೆರಳುವಂತಹ ಪ್ರಸಂಗ ಬರುವುದಿಲ್ಲ. ಅನುದಾನ ಹುಡುಕಿಕೊಂಡು ಬರುವುದಿಲ್ಲ. ಅದಕ್ಕಾಗಿ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. 

ನಿವೇಶನ ಮತ್ತು ಸ್ಮಶಾನ ಜಾಗ ಒತ್ತುವರಿಯಾಗಿದ್ದರೆ ಕೂಡಲೇ ಬಿಡಿಸಬೇಕು. ಡೀಮ್‌್ಡ ಅರಣ್ಯ, ಕಂದಾಯ ಜಾಗದಲ್ಲಿ ಕಾನೂನು ತೊಡಕುಂಟಾದರೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಕಾಡಾನೆ ಸಮಸ್ಯೆಗೆ ಅರಣ್ಯ ಸಚಿವರೊಂದಿಗೆ ಅರಣ್ಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಚರ್ಚೆ ನಡೆಸಿ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು. ಜನ್ನಾಪುರ, ಹಾಂದಿ, ಮಲ್ಲಂದೂರು ವ್ಯಾಪ್ತಿಯಲ್ಲಿ ವಿದ್ಯುತ್‌ ಉಪ ಕೇಂದ್ರ ಶೀಘ್ರ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಮಧುಗುಂಡಿ, ಮಲೆಮನೆ 11 ನಿರಾಶ್ರಿತ ಕುಟುಂಬಕ್ಕೆ ಭೂಮಿ ನೀಡಲು ಕಂದಾಯ ಮತ್ತು ಅರಣ್ಯ ಸಚಿವರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇನೆಂದು ಭರವಸೆ ನೀಡಿದರು.

Tap to resize

Latest Videos

undefined

ಬೆಂಗಳೂರಲ್ಲಿ ಪೋಕ್ಸೋ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಸ್ವಗ್ರಾಮಕ್ಕೆ ಮೃತದೇಹ!

ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಕಾಡಾನೆ ಹಾವಳಿಯಿಂದ ಬೆಳೆ ನಾಶ, ಪ್ರಾಣ ಹಾನಿ ಸಂಭವಿಸಿದೆ. ಮುಂದೆ ಯಾವುದೇ ಪ್ರಾಣ ಹಾನಿ ಹಾಗೂ ಬೆಳೆನಾಶವಾಗದಂತೆ ಸೋಲಾರ್‌ ಬೇಲಿ ಹಾಗೂ ರೈಲ್ವೆ ಬ್ಯಾರಿಕೇಡ್‌ ನಿರ್ಮಾಣವಾಗಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಹೇಮಾವತಿ ನದಿಯಿಂದ 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಭದ್ರ ನದಿ ಕೂಡ ಇಲ್ಲಿಯೇ ಹುಟ್ಟುತ್ತದೆ. ಆ ನೀರು ಕರಾವಳಿಗೆ ಹರಿದು ಹೋಗುತ್ತಿದೆ. ಈ ಎರಡೂ ನದಿಯಿಂದ ಮೂಡಿಗೆರೆ ಮತ್ತು ಕಳಸ ತಾಲೂಕಿಗೆ ಕುಡಿಯುವ ನೀರಿನ ಪೂರೈಕೆಯಾಗಬೇಕು ಎಂದು ಆಗ್ರಹಿಸಿದರು.

ತುರ್ತಾಗಿ ಮಲೆಮನೆ ಮಧುಗುಂಡಿ ನಿರಾಶ್ರಿತರ 11 ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಕಳಸ ಇನಾಂ ಭೂಮಿ ಬದಲಾಗಿ ಮುಳ್ಳಯ್ಯನಗಿರಿಯ ಭೂಮಿ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇನಾಂ ಭೂಮಿ ಉಳಿಸಲು ಸರ್ಕಾರದಿಂದ ಕೋರ್ಚ್‌ಗೆ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲವಾದರೆ 2 ಸಾವಿರ ಕುಟುಂಬಗಳು ಬೀದಿಗೆ ಬೀಳುತ್ತವೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

740 ಕೋಟಿ ವೆಚ್ಚದಲ್ಲಿ ವಿ.ವಿ.ಸಾಗರ ನೀರಾವರಿ ಯೋಜನೆ ಆಧುನೀಕರಣಕ್ಕೆ ಚಿಂತನೆ: ಸಚಿವ ಡಿ.ಸುಧಾಕರ್

ಸ್ಮಶಾನ ಭೂಮಿ ಸಮಸ್ಯೆ ಹಿಂದಿನಿಂದಲೂ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಬಹುತೇಕ ಜಾಗಗಳು ಒತ್ತುವರಿಯಾಗಿವೆ. ಇದು ಜಿಲ್ಲಾಧಿಕಾರಿ ಮಟ್ಟದಲ್ಲಿ ಸೆ.30ರೊಳಗೆ ಸಮಸ್ಯೆ ಬಗೆಹರಿಸಬೇಕೆಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ಗೆ ಸಚಿವರು ಸೂಚಿಸಿದರು. ಸಭೆಯಲ್ಲಿ ವಿಧಾನಪರಿಷತ್‌ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್‌ ಉಪಸ್ಥಿತರಿದ್ದರು.

click me!