ಕೆಎಸ್‌ಪಿಡಿಸಿಎಲ್ ಪಾವಗಡ ಸೋಲಾರ್ ಪಾರ್ಕ್ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು.
ತುಮಕೂರು : ಕೆಎಸ್‌ಪಿಡಿಸಿಎಲ್ ಪಾವಗಡ ಸೋಲಾರ್ ಪಾರ್ಕ್ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು.
ಪಾವಗಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗವಾರ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೆಎಸ್‌ಪಿಡಿಸಿಎಲ್‌ನ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರಲ್ಲದೆ ಯಾವ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲವೂ ಆ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕು ಎಂದು ತಿಳಿಸಿದರು.
ಸ್ಥಳೀಯ ಅಭಿವೃದ್ಧಿ ನಿಧಿಯಡಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಮೂರನೇ ವ್ಯಕ್ತಿಯು ಪರಿಶೀಲನೆ ನಡೆಸಿ ವರದಿ ನೀಡಿ. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ಯಾವ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆಗಳು ಇದ್ದಲ್ಲಿ ಕೂಡಲೇ ಸರಿಪಡಿಸಬೇಕೆಂದು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಒಂದೇ ಒಂದು ಶವಾಗಾರ ಕೇಂದ್ರ ಇರುವುದರಿಂದ ದೂರದ ಹಳ್ಳಿಗಳಿಂದ ಮೃತ ದೇಹಗಳನ್ನು ಸಾಗಿಸಲು ಕಷ್ಟಆಗುತ್ತಿದೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ತಾಲೂಕಿನಲ್ಲಿ ಮತ್ತೊಂದು ಶವಾಗಾರ ಕೇಂದ್ರವನ್ನು ಕೋಟಗುಡ್ಡದಲ್ಲಿ ಸ್ಥಾಪಿಸುವುದಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಟಿಎಚ್‌ಓ ಅವರಿಗೆ ಸೂಚಿಸಿದರು. ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೊತಿ ಯೋಜನೆಯಡಿಯಲ್ಲಿ ಜುಲೈ 3ರವರೆಗೆ ತಾಲೂಕಿನ 25,508 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬೆಸ್ಕಾಂ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿರುವುದರಿಂದ ಪ್ರತಿ ದಿನ 1.5 ಲಕ್ಷ ಆದಾಯ ನಿಗಮಕ್ಕೆ ಬರುತ್ತಿದೆ ಎಂದು ಡಿಪೋ ಮ್ಯಾನೇಜರ್ ಹೇಳಿದರು.
ತಾಲೂಕಿನಲ್ಲಿ 3 ಎಕರೆಗಿಂತ ಹೆಚ್ಚಿನ ಕೃಷಿ ಭೂಮಿಯನ್ನು, ನಾಲ್ಕು ಚಕ್ರದ ವಾಹನ, 30*40 ವಿಸ್ತೀರ್ಣದ ಜಾಗವನ್ನು ಹೊಂದಿರುವ ಕುಟುಂಬಗಳನ್ನು ಗುರುತಿಸಿ ಇನ್ನು 15 ದಿನಗಳೊಳಗಾಗಿ ಬಿಪಿಎಲ್ ಪಡಿತರ ಚೀಟಿಯನ್ನು ವಿತರಿಸಬೇಕೆಂದು ಆಹಾರ ಇಲಾಖೆಯ ಶಿರಸ್ತೇದಾರ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ, ತಹಸೀಲ್ದಾರ್ ಸುಜಾತ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ, ಕೆಎಸ್‌ಪಿಡಿಸಿಎಲ್‌ನ ಸಿಇಓ ಅಮರನಾಥ್, ಡಿಎಚ್‌ಓ. ಡಾ. ಮಂಜುನಾಥ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸುರೇಶ್ ರೆಡ್ಡಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಫೋಟೋ ಫೈಲ್ 4ಟಿಯುಎಂ8