ನರೇಗಾ ಕಾಮಗಾರಿಯ ನಿಯಮ ಉಲ್ಲಂಘಿಸಿ, ಜೆಸಿಬಿಗಳಿಂದ ಕಾಮಗಾರಿ ನಿರ್ವಹಿಸುವ ಕಾರಣ ಗ್ರಾಮೀಣ ಕೂಲಿಕಾರರಿಗೆ ವಂಚನೆ ಆಗುತ್ತಿದೆ. ರೈತರ ಜಮೀನು ಪ್ರಗತಿ ಕಾಣಬೇಕು, ಬಡ ಕೂಲಿಕಾರರಿಗೆ ಕೆಲಸ ಸಿಗಬೇಕು. ಇವ್ಯಾವು ಸಾಧ್ಯವಾಗುತ್ತಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಪ್ರಗತಿ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ತಾಲೂಕು ತಮಟೆ ಸಂಸ್ಥೆಯ ಪದಾಧಿಕಾರಿಗಳು ಜಿಪಂ ಸಿಇಒ ಜಿ.ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಾವಗಡ : ನರೇಗಾ ಕಾಮಗಾರಿಯ ನಿಯಮ ಉಲ್ಲಂಘಿಸಿ, ಜೆಸಿಬಿಗಳಿಂದ ಕಾಮಗಾರಿ ನಿರ್ವಹಿಸುವ ಕಾರಣ ಗ್ರಾಮೀಣ ಕೂಲಿಕಾರರಿಗೆ ವಂಚನೆ ಆಗುತ್ತಿದೆ. ರೈತರ ಜಮೀನು ಪ್ರಗತಿ ಕಾಣಬೇಕು, ಬಡ ಕೂಲಿಕಾರರಿಗೆ ಕೆಲಸ ಸಿಗಬೇಕು. ಇವ್ಯಾವು ಸಾಧ್ಯವಾಗುತ್ತಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಪ್ರಗತಿ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ತಾಲೂಕು ತಮಟೆ ಸಂಸ್ಥೆಯ ಪದಾಧಿಕಾರಿಗಳು ಜಿಪಂ ಸಿಇಒ ಜಿ.ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಜಿಪಂ ಸಿಇಒ ಜಿ.ಪ್ರಭು ಮಂಗಳವಾರ ಪಾವಗಡಕ್ಕೆ ಭೇಟಿ ನೀಡಿ ತಾಪಂನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಇದಕ್ಕೂ ಮುನ್ನ ತಾಲೂಕು ಪಂಚಾಯಿತಿ ಬಳಿಯೋಜನೆಯಲ್ಲಿ ಕೂಲಿಕಾರರ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘಿಸಿ ಜೆಸಿಬಿಗಳ ಮೂಲಕ ಕೆಲಸ ಸೇರಿದಂತೆ ಇತರೆ ಪ್ರಗತಿ ಕಾಮಗಾರಿಗಳ ಬಿಲ್ಲು ತಡೆ ಕುರಿತು ಇಲ್ಲಿನ ತಮಟೆ ಸಂಸ್ಥೆ ಪದಾಧಿಕಾರಿಗಳು ಜಿಪಂ ಸಿಇಒ ಗಮನ ಸೆಳೆದರು.
undefined
ಸಮಸ್ಯೆ ಆಲಿಸಿದ ಜಿಪಂ ಸಿಇಒ ಜಿ.ಪ್ರಭು, ಗ್ರಾಮೀಣ ಕೂಲಿಕಾರರ ಜೀವನ ಸುಧಾರಣೆ ಹಾಗೂ ರೈತಾಪಿಗಳ ಜಮೀನುಗಳ ಪ್ರಗತಿಗೆ ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಒಂದು ಅತ್ಯುತ್ತಮ ಯೋಜನೆ. ಈ ಯೋಜನೆ ಸಮಗ್ರ ಅನುಷ್ಟಾನದ ಜವಾಬ್ದಾರಿ ಗ್ರಾಪಂಗೆ ವಹಿಸಿದ್ದು ಜೆಸಿಬಿಗಳ ಬಳಕೆ ಮತ್ತು ಕೂಲಿಕಾರರಿಗೆ ವಂಚನೆ ಇತರೆ ಸಮಸ್ಯೆಗಳ ಕುರಿತು ಕೂಡಲೇ ಸಂಬಂಧಪಟ್ಟತಾಪಂ ಇಒ ಮತ್ತು ಗ್ರಾಪಂ ಅಧಿಕಾರಿಗಳಿಂದ ಯೋಜನೆಯ ಪ್ರಗತಿಯ ಸಮಗ್ರ ಮಾಹಿತಿ ಪಡೆಯಲಿದ್ದೇನೆ. ನಿಯಮ ಉಲ್ಲಂಘಿಸಿ ಕೆಲಸ ಮಾಡಿದ್ದರೆ ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ತಮಟೆ ಸಂಸ್ಥೆಯ ಕಾರ್ಯನಿರ್ವಾಹಕ ಮುಖಂಡ ರಾಮಕೃಷ್ಣ ಮಾತನಾಡಿ, ತಮಟೆ ಸಂಸ್ಥೆ ಸಮುದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತಿದೆ. ತಾಲೂಕಿನ 15ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ನರೇಗಾ ಅನುಷ್ಟಾನದ ಬಗ್ಗೆ ಜಾಗೃತಿ ಮೂಡಿಸಿದ್ದು, ನರೇಗಾ ಅಡಿ ತರಬೇತಿ ನೀಡಿ ಸಾವಿರಾರು ಕೂಲಿಕಾರರಿಗೆ ಗ್ರಾಪಂನಿಂದ ಜಾಬ್‌ಕಾರ್ಡ್ ಕಲ್ಪಿಸಲಾಗಿದೆ. ಈಗಾಗಲೇ ನರೇಗಾ ಯೋಜನೆ ಅಡಿ ಪ್ರಸಕ್ತ ಸಾಲಿಗೆ ಕೂಲಿ ಮತ್ತು ಕ್ರಿಯಾ ಯೋಜನೆಗೆ ಸೇರಿಸಲು 267 ಕಾಮಗಾರಿಗಳ ನಿರ್ವಹಣೆಗೆ ಅರ್ಜಿ ಸಲ್ಲಿಸಲಾಗಿದೆ. ಯೋಜನೆ ಅಡಿಯಲ್ಲಿ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ತಮಟೆ ಸಂಸ್ಥೆಯ ಸಂಚಾಲಕ ಕೆ.ವೆಂಕಟೇಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರರಿಗೆ ಕೂಡಲೇ ಆರೋಗ್ಯ ತಪಾಸಣೆ, ಕೂಲಿಕಾರರಿಗೆ ಕೆಲಸ, ಜೆಬಿಸಿಗಳಿಂದ ಕೆಲಸ ನಿರ್ವಹಣೆಗೆ ತಡೆ, ಕಳೆದ ಸಾಲಿಗೆ ನಿರ್ವಹಿಸಿದ್ದ ಬಚ್ಚಲು ಮತ್ತು ಇಂಗುಗುಂಡಿ ಧನದ ಕೊಟ್ಟಿಗೆಗೆ ಸಂಬಂಧಿಸಿದ ನರೇಗಾ ಯೋಜನೆಯ ಹಣ ಬಿಡುಗಡೆ ಆಗಿಲ್ಲ. ಇದನ್ನು ಪರಿಶೀಲಿಸಿ ಕೂಲಿಕಾರರಿಗೆ ನ್ಯಾಯ ಕಲ್ಪಿಸುವಂತೆ ಒತ್ತಾಯಿಸಿದರು. ಅರಸೀಕೆರೆ, ಮರಿದಾಸನಹಳ್ಳಿ, ನ್ಯಾಯದಗುಂಟೆ, ವೆಂಕಟಾಪುರ, ವೈ.ಎನ್.ಹೊಸಕೋಟೆ, ಸಿದ್ದಾಪುರ, ಸಿ.ಕೆ.ಪುರ ಗ್ರಾಪಂ ಸೇರಿದಂತೆ ತಾಲೂಕಿನಾದ್ಯಂತ ನರೇಗಾ ಯೋಜನೆ ಅಡಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಿ, ಕೂಡಲೇ ತನಿಖೆಗೆ ಒಳಪಡಿಸಿ, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಿಇಒ ಅವರಲ್ಲಿ ಮನವಿ ಮಾಡಿದರು.
ಈ ವೇಳೆ ತಾಲೂಕು ತಮಟೆ ಸಂಸ್ಥೆಯ ಲತಾ, ಮಮತ, ಕಲಾ, ಮುದ್ದಮ್ಮ, ರಂಗಮ್ಮ, ತಿಮ್ಮಕ್ಕ, ಜಯಮ್ಮ, ಚಂದ್ರಕಲಾ ಹಾಗೂ ಕೂಲಿಕಾರರಿದ್ದರು.