ಅಬ್ಬಿಫಾಲ್ಸ್ ಪ್ರವಾಸಿಗರ ಟಿಕೆಟ್ ಕೌಂಟರಿಗೆ ಬೀಗ ಹಾಕಿದ ತೋಟದ ಮಾಲೀಕರ ವಿರುದ್ಧ ದೂರು ದಾಖಲು

By Suvarna News  |  First Published Feb 20, 2023, 8:31 PM IST

ತಮ್ಮ ಜಾಗದಲ್ಲಿ ಓಡಾಡುವ ಅಬ್ಬಿಫಾಲ್ಸ್ ಪ್ರವಾಸಿಗರಿಗೆ ಅಕ್ರಮವಾಗಿ ಶುಲ್ಕ ಸಂಗ್ರಹ ಮಾಡುತ್ತಿರುವುದಾಗಿ ತೋಟದ ಮಾಲೀಕರ ಅಸಮಾಧಾನ. ಟಿಕೆಟ್ ಕೌಂಟರಿಗೆ ಬೀಗ ಹಾಕಿದ ತೋಟದ ಮಾಲೀಕರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲು


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 
ಕೊಡಗು (ಫೆ.20): ಖಾಸಗಿ ಮಾಲೀಕತ್ವದ ತೋಟಗಳ ನಡುವೆ ಜಲಪಾತ ಹರಿಯುತ್ತಿದ್ದರೆ, ಆ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಪ್ರವಾಸೋದ್ಯಮ ಇಲಾಖೆ ಶುಲ್ಕ ನಿಗಧಿ ಮಾಡಿ ಸಂಗ್ರಹಿಸುತ್ತಿದೆ. ನಾವು ಪ್ರವಾಸಿಗರಿಗಾಗಿ ಪುಕ್ಕಟ್ಟೆಯಾಗಿ ನಮ್ಮ ಜಾಗದಲ್ಲಿ ಓಡಾಡಲು ಅವಕಾಶ ನೀಡಿದ್ದೇವೆ. ಆದರೆ ಇಲಾಖೆ ಮತ್ತು ಪಂಚಾಯಿತಿ ಶುಲ್ಕ ಸಂಗ್ರಹಿಸುತ್ತಿರುವುದು ಏಕೆ ಎಂದು ತೋಟದ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಈಗ ಕಾನೂನು ಸಮರಕ್ಕೆ ಕಾರಣವಾಗಿದೆ.  ಪ್ರವಾಸಿ ತಾಣಗಳ ತವರೂರಾಗಿರುವ ಕೊಡಗಿನ ಪ್ರಸಿದ್ಧ ಪ್ರವಾಸಿತಾಣ ಅಬ್ಬಿಫಾಲ್ಸ್ ಈಗ ವಿವಾದಗಳ ಸುಳಿಗೆ ಸಿಲುಕಿದೆ. ಕಳೆದ ಆರೇಳು ದಶಕಗಳಿಂದ ಅಬ್ಬಿಫಾಲ್ಸ್ ಪ್ರವಾಸಿಗರ ಕಣ್ಣಿಗೆ ಹಬ್ಬವಾಗಿದ್ದು, ಇದನ್ನು ನೋಡುವುದಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಇದರ ವೀಕ್ಷಣೆಗೆ ಖಾಸಗಿ ತೋಟದೊಳಗೆ ಬಂದು ಹೋಗಬೇಕಾಗಿದ್ದು ಇದರ ತೋಟದ ಮಾಲೀಕರಾದ ಮಡಿಕೇರಿ ತಾಲೂಕಿನ ನಿವಾಸಿ ನೆರವಂಡ ಬಿ.ಪಾವರ್ತಿ ನಾಣಯ್ಯ ಮತ್ತು ಮಕ್ಕಳು ಅಬ್ಬಿಜಲಪಾತ(ಅಬಿಫಾಲ್ಸ್)ವನ್ನು ಪ್ರವಾಸಿಗರ ವೀಕ್ಷಣೆಗಾಗಿ ಜಾಗ ಬಿಟ್ಟುಕೊಟ್ಟಿದ್ದರು. ಈ ಸಂದರ್ಭದಲ್ಲಿ ಯಾವುದೇ ಟಿಕೆಟ್ ಕೌಂಟರ್ ಅಥವಾ ಪ್ರವಾಸಿಗರಿಗೆ ಟಿಕೆಟ್ ನಿಗದಿ ಮಾಡದಂತೆ ಪತ್ರದಲ್ಲಿ ಸೂಚಿಸಲಾಗಿತ್ತು.

ಆದರೆ, ಪಂಚಾಯಿತಿ ವತಿಯಿಂದ ಟಿಕೆಟ್ ಕೌಂಟರ್ ಆರಂಭಿಸಿ ಒಬ್ಬರಿಗೆ ರೂ.10 ರಂತೆ ನಿಗದಿ ಮಾಡಿ, ಶುಲ್ಕ ಸಂಗ್ರಹಿಸುತ್ತಿದ್ದಾರೆ. ಈ ಮಾಹಿತಿ ತಿಳಿದ ತೋಟದ ಮಾಲೀಕರು ಸ್ಥಳಕ್ಕೆ ಆಗಮಿಸಿ ಟಿಕೆಟ್ ಕೌಂಟರ್‌ರನ್ನು ಮುಚ್ಚಿಸಿ, ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಿದರು. ಅಬ್ಬಿಪಾಲ್ಸ್‌ಗೆ ತೆರಳುವ ಜಾಗವನ್ನು ನಾವು ದಾನ ಮಾಡಿಲ್ಲ. ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡುವ ಸಲುವಾಗಿ ಸ್ಥಳ ಬಿಟ್ಟುಕೊಡಲಾಗಿದೆ. ಈ ಮೊದಲು ಅಲ್ಲಿ ಕಾಲು ದಾರಿಯಿತ್ತು. ನಂತರ ಪ್ರವಾಸೋದ್ಯಮ ಇಲಾಖೆಯಿಂದ 5 ಅಡಿ ಜಾಗದಲ್ಲಿ ಕಾಂಕ್ರಿಟ್ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ, ಇಕ್ಕೆಲಗಳಲ್ಲಿ ಕಬ್ಬಿಣದ ಗ್ರಿಲ್ಸ್ ಅಳವಡಿಸಲಾಗಿದೆ. ಈ ಸಂದರ್ಭ ನಾವು ಯಾವುದೇ ರೀತಿಯ ಚಕಾರವೆತ್ತಲಿಲ್ಲ.

Latest Videos

undefined

ಆದರೆ, ಇಂದು ಪ್ರವಾಸಿಗರ ವೀಕ್ಷಣೆಗೆ ಬಿಟ್ಟುಕೊಟ್ಟ ಜಾಗವನ್ನು ದಾನ ಮಾಡಿದ ರೀತಿಯಲ್ಲಿ ಸ್ಥಳ ದಾನಿಗಳು ಎಂದು ನಾಮಫಲಕ ಹಾಕಿದ್ದು, ಇದು ಯಾವ ನ್ಯಾಯ. ಜೊತೆಗೆ ತೋಟಕ್ಕೆ ಗೊಬ್ಬರ ಅಥವಾ ಇತರೆ ಯಾವುದೇ ವಸ್ತುಗಳ ಸಾಗಾಟಕ್ಕೆ ತೊಂದರೆಯಾಗುತ್ತಿದೆ ಎಂದು ತೋಟದ ಮಾಲೀಕರಾದ ಇಂದಿರಾ ಅವರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಅಬ್ಬಿ ಜಲಪಾತದ ಪ್ರವೇಶದ ಟಿಕೆಟ್ ಕೌಂಟರ್ ಬಂದ್ ಮಾಡಿ ಪ್ರವಾಸಿಗರನ್ನ ಉಚಿತ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಮಾಲೀಕರ ವಿರುದ್ದ ಕೆ‌.ನಿಡುಗಣೆ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಿಡಿಓ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನಾವು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದು ಅಬ್ಬಿಫಾಲ್ಸ್ ಅಭಿವೃದ್ಧಿಪಡಿಸಿದ್ದೇವೆ.

ಅದಕ್ಕೂ ಮೊದಲು ಕಾಮಗಾರಿ ಮಾಡುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಅಭಿವೃದ್ಧಿಗೊಳಿಸಿದ ಬಳಿಕ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿರ್ವಹಣೆಗಾಗಿ ಶುಲ್ಕ ಸಂಗ್ರಹಿಸುತ್ತಿರುವಂತೆ ನಾವು ಕೂಡ  ಟಿಕೆಟ್ ಕೌಂಟರ್ ಆರಂಭ ಮಾಡಿದ್ದೇವೆ. ಟಿಕೆಟ್ ಆರಂಭಕ್ಕೂ ಮುಂಚಿತವಾಗಿಯೇ ಪ್ರಕಟಣೆ ನೀಡಲಾಗಿತ್ತು. ಇದಕ್ಕೆ ಯಾರು ತಕರಾರು ಮಾಡಿರಲಿಲ್ಲ. ಆದ್ರೆ ನಿನ್ನೆ ಏಕಾಏಕಿ‌ ಪಂಚಾಯಿತಿಯಲ್ಲಿ‌ ಯಾರು ಇಲ್ಲದ ಸಂದರ್ಭದಲ್ಲಿ ಫಾಲ್ಸ್ ನ ಕೌಂಟರ್ ಗೆ ಬಂದು ಬಂದ್‌ ಮಾಡಿದ್ದಾರೆ. ಅಲ್ಲಿ ಶುಲ್ಕ ಸಂಗ್ರಹಿಸುತ್ತಿದ್ದ ನಮ್ಮ ಸಿಬ್ಬಂದಿಯನ್ನು ಎದುರಿಸಿ ಕಳುಹಿಸಿದ್ದಾರೆ.

ನಾಗಾಲ್ಯಾಂಡ್ ನಲ್ಲಿದೆ ಅಧ್ಬುತ ಸೌಂದರ್ಯ ಅಡಗಿರೋ ಮಿನಿ ಸ್ವಿಟ್ಜರ್ಲ್ಯಾಂಡ್…

ಹೀಗಾಗಿ ಕರ್ತವ್ಯಕ್ಕೆ ಅಡಿಪಡಿಸಿದ್ದರಿಂದ ನಾವು ಮಡಿಕೇರಿ ಗ್ರಾಮಾಂತರ ಪೊಲೀಸರ್ ಠಾಣೆಗೆ ದೂರು ನೀಡಲಾಗಿದೆ‌‌ ಎಂದು ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಪಿಡಿಓ ಸಿಲ್ವಿನ್ ಜೈಕುಮಾರ್ ತಿಳಿಸಿದ್ದಾರೆ. ವಾರಾಂತ್ಯದ ರಜೆ ಸಂದರ್ಭದಲ್ಲಿ ಶುಲ್ಕ ಸಂಗ್ರಹಕ್ಕೆ ತಡೆಯೊಡ್ಡಿದ್ದರಿಂದ ಹತ್ತರಿಂದ 12 ಸಾವಿರ ರೂಪಾಯಿ ನಷ್ಟವಾಗಿದೆ. ಇದನ್ನು ಠಾಣೆ ಗಮನಕ್ಕೆ ತರಲಾಗುವುದು ಎಂದು ಪಂಚಾಯಿತಿ ಪಿಡಿಓ ತಿಳಿಸಿದ್ದಾರೆ.

Karnataka Budget 2023: ಹಂಪಿ ಪ್ರವಾಸೋದ್ಯಮಕ್ಕೆ ಬಜೆಟ್‌ ಬಲ!

ಒಟ್ಟಿನಲ್ಲಿ ಒಟ್ಟಿನಲ್ಲಿ ಇದುವರೆಗೆ ಉಚಿತವಾಗಿ ಅಬ್ಬಿಫಾಲ್ಸ್ ನೋಡಿ ಹೋಗುತ್ತಿದ್ದ ಪ್ರವಾಸಿಗರಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಪಂಚಾಯಿತಿ ಶುಲ್ಕ ನಿಗಧಿ ಮಾಡಿರುವುದನ್ನು ತೋಟದ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ಮುಂದೆ ಏನಾಗುವುದು ಕಾದು ನೋಡಬೇಕಾಗಿದೆ.

click me!