ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಸಂಘದ ಸಹಯೋಗದಲ್ಲಿ ನಡೆದ ಐದನೇ ಕೃಷಿ ಕೂಲಿಕರರ ಮಂಡ್ಯ ಜಿಲ್ಲಾ ಸಮ್ಮೇಳನದಲ್ಲಿ ನರೇಗಾ ಯೋಜನೆಯಡಿ ಕೂಲಿ ಮಾಡುವವರಿಗೆ ದಿನಕ್ಕೆ 600 ರೂ ಕೂಲಿ ನೀಡುವಂತೆ ಆಗ್ರಹ
ಮಂಡ್ಯ (ನ.13): ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಕ್ಕೆ 600 ರೂ ಕೂಲಿ ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸಮಾಧಿ ಕಟ್ಟಲು ಸಿದ್ಧರಾಗಬೇಕು ಎಂದು ಅಖಿಲ ಭಾರತ ಕೃಷಿ ಕೂಲಿಕಾರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಹೇಳಿದರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಐದನೇ ಕೃಷಿ ಕೂಲಿಕರರ ಮಂಡ್ಯ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು 200 ದಿನಕ್ಕೆ ಏರಿಸಬೇಕು. ದಿನಕ್ಕೆ .600 ಕೂಲಿ ಕೊಡಬೇಕು. ವ್ಯವಸಾಯದಲ್ಲಿ ಯಂತ್ರಗಳು ಬಂದಮೇಲೆ ಕೂಲಿ ಕೆಲಸ ಕಡಿಮೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬೇಸಿಗೆಯಲ್ಲಿಯೂ ದುಡಿಮೆ ಮಾಡುತ್ತೇವೆ. ಈ ಸಂದರ್ಭದಲ್ಲಿ ನೂರಾರು ಜನ ಸಾಯುತ್ತಿದ್ದಾರೆ, ಆದರೂ ಬಿಜೆಪಿ ಸರ್ಕಾರ ಸಮಸ್ಯೆ ಕೇಳುತ್ತಿಲ್ಲ. ಕೆಲಸ ಕೊಡಲು ಆಗದೇ ಹೋದರೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ದೇಶದ ಕೃಷಿ ಕೂಲಿಕಾರರು, ನರೇಗಾ ಅಥವಾ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ, ಕೇವಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಸ್ತೆ ಬಗ್ಗೆ ಮಾತನಾಡಿದರು. ಜನಸಾಮಾನ್ಯರ ಬಗ್ಗೆ ಒಂದು ಮಾತನ್ನು ಹೇಳಲಿಲ್ಲ ಎಂದು ಆರೋಪಿಸಿದರು.
ದೇಶದಲ್ಲಿ ನರೇಂದ್ರ ಮೋದಿ ಮತ್ತು ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಸೇರಿಕೊಂಡು ರಾಜ್ಯವನ್ನು ನಾಶ ಮಾಡುತ್ತಿದ್ದಾರೆ, ಅದಕ್ಕೋಸ್ಕರ ಈ ಸಮ್ಮೇಳನದಲ್ಲಿ ಕೇಂದ್ರ ಮತ್ತು ರಾಜ್ಯ ವಿಷಯಗಳನ್ನು ಚರ್ಚೆ ಮಾಡಿ ಹೇಳುತ್ತಿದ್ದೇನೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಬರುವ ಚುನಾವಣೆಯಲ್ಲಿ ಬಿಜೆಪಿಗೆ ಸಮಾಧಿ ಕಟ್ಟೋಣ, ಬಿಜೆಪಿಯನ್ನು ಓಡಿಸೋಕೆ ಎಲ್ಲರೂ ಸಿದ್ಧರಾಗಿ ಎಂದು ಉರಿದುಂಬಿಸಿದರು.
ನಿವೇಶನ ರಹಿತರಿಗೆ ಹಾಗೂ ಪ್ರತಿ ಬಡಕುಟುಂಬಕ್ಕೆ ಒಂದು ಮನೆ ಕಟ್ಟಿಸಿಕೊಡಿ, ಅದನ್ನು ನಾವು ಕೇಳುತ್ತಿದ್ದೇವೆ, ನಮ್ಮ ತಂದೆ ತಾಯಿ ಅಥವಾ ತಾತಂದಿರಿಗೆ ಸ್ವಂತ ಮನೆಯಿಲ್ಲ, ಸ್ವಂತ ಶೌಚಾಲಯವನ್ನೂ ಕಟ್ಟಿಸಿಕೊಳ್ಳಲು ಸಾಧ್ಯವಾಗದೆ ಬಹಳ ಕಷ್ಟಪಡುತ್ತಿದ್ದಾರೆ, ಕಳೆದ 50 ವರ್ಷಗಳಲ್ಲಿ ಪ್ರತಿ ಬಡಕುಟುಂಬಗಳಿಗೆ ನಿವೇಶನ ಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ .5 ಲಕ್ಷ ನಂತೆ ಒಟ್ಟು .10 ಲಕ್ಷ ಗಳನ್ನು ಬಡಕುಟುಂಬಗಳಿಗೆ ಕೊಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಟಿಪ್ಪುಸುಲ್ತಾನ್, ಜಾತಿ, ಧರ್ಮದ ಬಗ್ಗೆ ಮಾತನಾಡಿ ಗಲಭೆ ಸೃಷ್ಟಿಮಾಡುತ್ತಿದ್ದಾರೆ. ಪಕ್ಕದ ಕೇರಳ ಸರ್ಕಾರ ಪ್ರತಿ ಬಡಕುಟುಂಬಗಳಿಗೆ .7.40 ಲಕ್ಷ ಕೊಟ್ಟು ಮನೆ ನಿರ್ಮಿಸಿಕೊಡುತ್ತಿದೆ. ಈ ಕೆಲಸ ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇಕೆ. ಏಕೆಂದರೆ ಕೇರಳ ಸರ್ಕಾರ ಬಡವರ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ ಕಾರ್ಪೋರೇಟ್ ಸರ್ಕಾರವಾಗಿದೆ. ನಮ್ಮ ಸಂಪನ್ಮೂಲವನ್ನು ದೋಚುತ್ತಿದ್ದಾರೆಯೇ ವಿನಃ ಬಡವರಿಗೆ ಬದುಕನ್ನು ಕಟ್ಟಿಕೊಡುತ್ತಿಲ್ಲ. ಇನ್ನೆರಡು ತಿಂಗಳಲ್ಲಿ ಖಾಲಿ ಸ್ಥಳಗಳಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಪೊ›.ಬಿ.ಜಯಪ್ರಕಾಶಗೌಡ, ಪ್ರಧಾನ ಪೋಷಕ ಕೆ.ಟಿ.ಶ್ರೀಕಂಠೇಗೌಡ, ಸಂಘದ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದಸ್ವಾಮಿ, ರಾಜ್ಯ ಉಪಾಧ್ಯಕ್ಷರಾದ ಜಿ.ಎನ್.ನಾಗರಾಜು, ಮುನಿವೆಂಕಟಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಮುಖಂಡರಾದ ಟಿ.ಎಲ್ ಕೃಷ್ಣೇಗೌಡ, ಶಿವಕುರ್ಮಾ, ಸಿ.ಕುಮಾರಿ ಭಾಗವಹಿಸಿದ್ದರು.
ಮಜ್ಜಿಗೆಗಾಗಿ ಕೂಗಾಟ, ಕೆಲಕಾಲ ನಿಂತ ಸಭೆ: ಕೃಷಿ ಕೂಲಿಕರರ ಮಂಡ್ಯ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯ ಪ್ರಾಸ್ತಾವಿಕ ನುಡಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್ ಮಾತನಾಡುತ್ತಿರುವ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಕೆಲವು ಸದಸ್ಯರು ಮಜ್ಜಿಗೆ ಪ್ಯಾಕೆಟ್‌ಗಳನ್ನು ಚೀಲಗಳಲ್ಲಿ ತಂದು ಒಂದೊಂದಾಗಿ ನೆರದಿದ್ದ ಸಭಿಕರಿಗೆ ಕೊಡುತ್ತಿರುವಾಗ ಸಭಿಕರು ಮತ್ತು ಮಜ್ಜಿಗೆ ವಿತರಿಸುತ್ತಿರುವವರ ಜೊತೆ ಕೆಲಕಾಲ ಗಲಾಟೆ ಉಂಟಾಯಿತು.
Yadgir: ನರೇಗಾದಡಿ ಗ್ರಾಮೀಣ ಭಾಗದ ಕೆರೆಗಳ ಪುನರುಜ್ಜೀವನ
ನಂತರ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜು ಅವರು ಐದು ನಿಮಿಷ ಮಜ್ಜಿಗೆ ಬ್ರೇಕ್ ಇದೆ ಸಮಾಧಾನವಾಗಿ ತೆಗೆದುಕೊಳ್ಳಿ ಎಂದು ಧ್ವನಿವರ್ಧಕದಲ್ಲಿ ಹೇಳಿದರು. ನಂತರ ಸಭೆಯನ್ನು ನಿಲ್ಲಿಸಿ ಶಾಂತವಾಗಿ ಮಜ್ಜಿಗೆ ವಿತರಿಸುವ ಕೆಲಸ ಶುರುವಾಯಿತು. ಮಜ್ಜಿಗೆ ಪ್ಯಾಕೆಟ್‌ಗಳನ್ನು ಕ್ಯಾಚ್ ಹಿಡಿದುಕೊಳ್ಳಿ ಎಂದು ಕುಳಿತಿದ್ದ ಸಭಿಕರ ಹಿಂದಿನ ಕುರ್ಚಿಗಳಲ್ಲಿದ್ದವರಿಗೆ ಎಸೆಯುತ್ತಿದ್ದಾಗ, ಮಧ್ಯ ಪ್ರವೇಶಿಸಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಅವರು ಎಸೆಯದಂತೆ ತಾಕೀತು ಮಾಡಿದರು. ಮಜ್ಜಿಗೆ ಸಿಗದಿದ್ದವರು ಬೈದಾಡಿಕೊಂಡು ಕುರ್ಚಿಯಲ್ಲಿಯೇ ಕುಳಿತು ಗಣ್ಯರ ಮಾತುಗಳನ್ನು ಆಲಿಸಿದರು.
Chikkaballapur: ಲೈಬ್ರರಿ ಕಟ್ಟಡ ಕಟ್ಟಲು ಸಿಗದ ನರೇಗಾ ಆಸರೆ!
ಕಾರ್ಯಕ್ರಮಕ್ಕೆ ದೂರದ ಗ್ರಾಮದಿಂದ ಬಂದಿದ್ದವರಿಗೆ ಸರಿಯಾದ ಆಸನದ ವ್ಯವಸ್ಥೆಯನ್ನೂ ಮಾಡಿರಲಿಲ್ಲ, ಕೆಲವು ಮಳೆಯಲ್ಲಿಯೇ ನಿಂತುಕೊಂಡಿದ್ದರು. ಮಳೆ ರಕ್ಷಣೆಗೆಂದು ಇನ್ನು ಕೆಲವರು ಮರದಡಿಯಲ್ಲಿ ನಿಂತುಕೊಂಡಿದ್ದ ದೃಶ್ಯ ಸಾಮಾನ್ಯವಾಗಿತ್ತು.