ಕುಕ್ಕೆ ದೇವಳದ ಕೋಟ್ಯಂತರ ರೂ. ಬೆಲೆಬಾಳುವ ಆಭರಣ ನಾಪತ್ತೆ

By Kannadaprabha News  |  First Published Oct 23, 2020, 3:45 PM IST

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ದಾಖಲಾಗಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಜ್ರದ ಕಂಠಿಹಾರ, ಆಭರಣಗಳು, ಶ್ರೀ ಸತ್ಯನಾರಾಯಣ ದೇವರ ಫೋಟೋ, ಶ್ರೀ ಕುಕ್ಕೆ ಲಿಂಗ ದೇವಳದ ಬಳಿ ಇದ್ದ ಬೆಳ್ಳಿಯ ಒಡವೆಗಳು, ಪುರಾತನ ಕಾಲದ ವಿಗ್ರಹಗಳು ನಾಪತ್ತೆ


 ಸುಬ್ರಹ್ಮಣ್ಯ (ಅ.23): ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ದೇವಾಲಯದ ಆಭರಣಗಳನ್ನು ಅವ್ಯವಹಾರ ನಡೆಸಿರುವ ಆರೋಪ ಕೇಳಿಬಂದಿದೆ. ದೇವಾಲಯದ ಆಡಳಿತಾಧಿಕಾರಿ ರೂಪಾ ಎಂ.ಜೆ. ಹಾಗೂ ದೇಗುಲದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್‌. ಅವರ ಮೇಲೆ ಸುಬ್ರಹ್ಮಣ್ಯದ ನಿವಾಸಿ ಶ್ರೀನಾಥ್‌ ಟಿ.ಎಸ್‌. ಅವರು ಮಂಗಳೂರಿನ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೋಲಿಸ್‌ ಅಧೀಕ್ಷಕರಿಗೆ ದೂರು ದಾಖಲಿಸಿದ್ದಾರೆ. ಅಲ್ಲದೆ ತನಿಖೆ ನಡೆಸುವಂತೆ ಕೋರಿದ್ದಾರೆ.

ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಡಳಿತದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ದಾಖಲಾಗಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಜ್ರದ ಕಂಠಿಹಾರ, ಆಭರಣಗಳು, ಶ್ರೀ ಸತ್ಯನಾರಾಯಣ ದೇವರ ಫೋಟೋ, ಶ್ರೀ ಕುಕ್ಕೆ ಲಿಂಗ ದೇವಳದ ಬಳಿ ಇದ್ದ ಬೆಳ್ಳಿಯ ಒಡವೆಗಳು, ಪುರಾತನ ಕಾಲದ ವಿಗ್ರಹಗಳು ನಾಪತ್ತೆಯಾಗಿದ್ದು, ಈ ಬಗ್ಗೆ ದೇವಾಲಯದ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮೋನಪ್ಪ ಮಾನಾಡು ಅವರು 22.10.2019ರಂದೇ ದೇವಾಲಯದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್‌. ಅವರಿಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಯಾವುದೇ ಮಾಹಿತಿಯನ್ನು ಆಡಳಿತ ಮಂಡಳಿ ಈವರೆಗೆ ನೀಡಿಲ್ಲ ಎನ್ನಲಾಗಿದೆ.

Tap to resize

Latest Videos

undefined

ಭಕ್ತರು ಕಡಿಮೆ: ಕುಕ್ಕೆ ದೇವಾಲಯದೊಳಗೆ ಸರ್ಪಗಳ ಸ್ವಚ್ಛಂದ ಓಡಾಟ, ನಾಗರಪಂಚಮಿ ಫೋಟೋಸ್ ಇಲ್ನೋಡಿ ..

ಈ ವಿಚಾರವಾಗಿ 01.08.2020ರಂದು ರಾಜ್ಯ ಮಾನವ ಹಕ್ಕುಗಳ ಸಮಿತಿಯ ನಿರ್ದೇಶಕರಾಗಿರುವ ಶ್ರೀನಾಥ್‌ ಟಿ.ಎಸ್‌. ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೂ ಆಡಳಿತಾಧಿಕಾರಿಯಾಗಲಿ, ಕಾರ್ಯ ನಿರ್ವಹಣಾಧಿಕಾರಿಯೇ ಆಗಲಿ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿದಾರ ಶ್ರೀನಾಥ್‌ ಟಿ.ಎಸ್‌. ಆಗ್ರಹಿಸಿದ್ದಾರೆ.

 ದೇವಸ್ಥಾನದ ಮೂಲಕ ದಾಖಲೆಗಳನ್ನು ನೀಡಲಾಗಿದೆ: ಸ್ಪಷ್ಟೀಕರಣ

ಈ ಬಗ್ಗೆ ಶ್ರೀ ದೇವಳದ ಕಚೇರಿಯಿಂದ ಅ.19ರಂದು ಸದರಿ ಮಾಹಿತಿಗಳನ್ನು ಶ್ರೀನಾಥ್‌ ಅವರಿಗೆ ರವಾನಿಸಲಾಗಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

2019ರ ಡಿಸೆಂಬರ್‌ 19ರಂದು ದೇವಳದಲ್ಲಿ ಸರ್ಪಸಂಸ್ಕಾರ ಸೇವೆ ನಡೆಸಿದ್ದ ಭಕ್ತಾದಿ ಸಂಜೀವ ಪೂಜಾರಿ ಅವರಿಗೆ ಸೇವಾ ಕ್ರಿಯಾಕರ್ತೃರಾಗಿ ದೇವಳದಿಂದ ನಿಯೋಜಿಸಿದ್ದ ಶ್ರೀನಾಥ್‌ ಟಿ.ಎಸ್‌. ತನಗೆ 800 ರು. ದಕ್ಷಿಣೆಯಾಗಿ ನೀಡಬೇಕೆಂದು ಸತಾಯಿಸಿದ್ದಾಗಿ ಸಂಜೀವ ಪೂಜಾರಿ ದೂರು ನೀಡಿದ್ದರು. ದೂರಿನಂತೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ, ಮಂಗಳೂರು ಇವರಿಗೆ ಸೂಚಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದಾಗ ಶ್ರೀನಾಥ್‌ ತಾನು ಸಂಜೀವ ಪೂಜಾರಿ ಅವರಿಂದ 600 ರು. ದಕ್ಷಿಣೆಯಾಗಿ ಕೇಳಿ ಪಡೆದಿರುವುದಾಗಿ ಒಪ್ಪಿಕೊಂಡಿರುತ್ತಾರೆ.

ರ್ಪಸಂಸ್ಕಾರ ಸೇವೆಗೆ ದೇವಳದಿಂದ ರೂಪಿಸಿರುವ ನಿಯಮ ಪ್ರಕಾರ ಕ್ರಿಯಾಕರ್ತೃಗಳು ಯಾವುದೇ ಭಕ್ತಾದಿಯಿಂದ ಪ್ರತ್ಯೇಕ ದಕ್ಷಿಣೆಗಾಗಿ ಅಪೇಕ್ಷಿಸುವಂತಿಲ್ಲ ಹಾಗೂ ಸತಾಯಿಸುವಂತಿಲ್ಲ. ಶ್ರೀನಾಥ್‌ ಅವರು ದೇವಸ್ಥಾನದ ನಿಯಮವನ್ನು ಉಲ್ಲಂಘಿಸಿದ್ದರಿಂದ 2020ರ ಸೆಪ್ಟೆಂಬರ್‌ 29ರಂದು ದೇವಳದ ಕಾರ್ಯನಿರ್ವಹಣಾಧಿಕಾರಿಗಳು ಅವರನ್ನು ದೇವಳದಲ್ಲಿ ಸರ್ಪಸಂಸ್ಕಾರ ಸೇವೆಯ ಕ್ರಿಯಾಕರ್ತೃತ್ವಕ್ಕೆ ನಿಯೋಜಿಸುವುದನ್ನು ರದ್ದು ಪಡಿಸಿ ಆದೇಶಿಸಿದ್ದಾರೆ. ಇದೇ ವೈಯಕ್ತಿಕ ದ್ವೇಷದಿಂದ ಶ್ರೀನಾಥ್‌ ಆಧಾರ ರಹಿತ ಆರೋಪ ಮಾಡಿದ್ದಾರೆ. ಹಾಗೂ ಅವರು ಕೋರಿರುವ ಎಲ್ಲ ವಸ್ತುಗಳು ದೇವಳದ ದಾಖಲೆಗಳಲ್ಲಿ ಇದ್ದು, ಯಾವುದೇ ಇಲಾಖಾಧಿಕಾರಿಗಳು ಪರೀಶೀಲನೆಯನ್ನು ನಡೆಸಬಹುದು ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

click me!