ಬಿಜೆಪಿ ಸರ್ಕಾರ ಯಾವುದೇ ಘಳಿಗೆಯಲ್ಲಿ ಪತನವಾಗಬಹುದು ಎಂದು ಭವಿಷ್ಯ ನುಡಿದರು.
ಮಲೇಬೆನ್ನೂರು (ಅ.23): ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಘಳಿಗೆಯಲ್ಲಿ ಪತನವಾಗಬಹುದು ಎಂದು ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಭವಿಷ್ಯ ನುಡಿದರು. ಅವರು ಪಟ್ಟಣದ ವಾಸವಿ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಿದ್ದ ಜನತಾದಳ (ಜಾತ್ಯತೀತ) ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಈ ಚುನಾವಣೆಯಲ್ಲಿ ಬಂಡಾಯದ ಬಾವುಟ ಹಾರಾಡಿದೆ. ಬಿಜೆಪಿಯಲ್ಲಿನ ಕೆಲವರು ಮುಖ್ಯಮಂತ್ರಿಯನ್ನೇ ಬದಲಾಯಿಸಲು ಹುನ್ನಾರ ನಡೆಸಿದ್ದಾರೆ. ಯಾವ ಸಂದರ್ಭದಲ್ಲಿಯಾದರೂ ಸರ್ಕಾರ ಉರುಳಬಹುದು ಎಂದರು. ಈ ಹಿಂದಿನ ಗ್ರಾಪಂ, ತಾಪಂ, ಜಿಪಂ, ವಿಧಾನಸಭಾ ಚುನಾವಣೆಯ ಸೋಲನ್ನು ಪಕ್ಷದ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಬೇಕು ಎಂದ ಅವರು, ಅನುಭವ ದಾರಿಯಾಗುತ್ತದೆ. ಬೇಸರ ಪಡದೇ ಜನರಿಗೆ ಸ್ಪಂದಿಸಲು ಚುನಾವಣೆ ನಡೆಸಬೇಕಿದೆ, ಆಗ ಗೆಲುವಿನ ಗುರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
'ಅಪ್ಪ, ತಾತನ ಹೆಸರು ಹೇಳಿಕೊಂಡಿದ್ದವರು ಮೋದಿ ಬಂದ ಮೇಲೆ ನಿರುದ್ಯೋಗಿಗಳಾಗಿದ್ದಾರೆ' ...
ಆಗ್ನೇಯ ಪದವೀಧರ ಕ್ಷೇತ್ರವನ್ನು ಚೌಡರೆಡ್ಡಿಯವರಿಗೆ ಬಿಟ್ಟುಕೊಟ್ಟಿದ್ದೇನೆ, ಜಯಶಾಲಿಯಾಗಿದ್ದೇವೆ. ಆದರೆ ಕಾಂಗ್ರೆಸ್ ಮತ್ತು ಭಾಜಪ ಎಂದೂ ಈ ಕ್ಷೇತ್ರದಲ್ಲಿ ಗೆಲುವನ್ನು ಕಂಡಿಲ್ಲ. ಕಾಂಗ್ರೆಸ್ ಎಂದು ನಮಗೆ ಪೈಪೋಟಿ ನೀಡಲ್ಲ ಎಂದರು. ಹರಿಹರ ತಾಲೂಕಿನಲ್ಲಿ 4100ಕ್ಕೂ ಹೆಚ್ಚು ಪದವೀಧರರನ್ನು ಪಕ್ಷದ ಕಾರ್ಯಕರ್ತರು ನೋಂದಣಿ ಮಾಡಿಸಿದ್ದಾರೆ. ಹೋಬಳಿಯ ಪದವೀಧರರು ಮಲೇಬೆನ್ನೂರಲ್ಲಿ ಸ್ಥಾಪಿಸಿರುವ ಮೂರು ಮತಗಟ್ಟೆಯಲ್ಲಿಯೇ ಮತ ಹಾಕಬೇಕು, ಹರಿಹರಕ್ಕೆ ತೆರಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನತಾದಳ ಅಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ ಎಂಎಲ್‌ಸಿಯವರು 4 ಜಿಲ್ಲೆಗಳ ಜವಾಬ್ದಾರಿ ಹೊರಬೇಕು. ಜನರಿಗೆ ಸ್ಪಂದಿಸುವ ಚೌಡರೆಡ್ಡಿಯವರನ್ನು ಜಯಶಾಲಿ ಮಾಡಿದರೆ ಪದವೀಧರರ ಸಮಸ್ಯೆಗಳು ಇತ್ಯರ್ಥವಾಗುತ್ತವೆ, ಹೋಬಳಿಯಲ್ಲಿ 2000 ಮತದಾರರಿಗೆ ಮಲೇಬೆನ್ನೂರಲ್ಲಿ ಮತಗಟ್ಟೆಇದೆ ಎಂದು ಹೇಳಿದರು.
ತಾಲೂಕು ಜನತಾದಳ ಅಧ್ಯಕ್ಷ ಬಂಡೇರ ತಿಮ್ಮಣ್ಣ, ಪಿ.ಬಸಪ್ಪ, ಆಲಿ, ಶೌಕತ್, ಪುರಸಭಾ ಸದಸ್ಯರಾದ ಶೇಖಪ್ಪ, ಯೂಸೂಫ್, ಬರ್ಕತ್‌ಅಲಿ, ಜಿ.ಪಂ ಮಾಜಿ ಸದಸ್ಯ ಎ.ಕೆ.ನಾಗಪ್ಪ, ಗುಲ್ಜಾರ್, ಶಾಂತಪ್ಪ, ಅಶೋಕ್,ಮಹದೇವಪ್ಪ, ಕರಿಬಸಪ್ಪ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.