ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವ ಲಾಂಛನ ಬಿಡುಗಡೆ

By Suvarna News  |  First Published Jan 1, 2020, 12:12 PM IST

ಜನವರಿ 10 ಮತ್ತು 11 ರಂದು ನಡೆ​ಯುವ ಹಂಪಿ ಉತ್ಸವ| ಸ್ಥಳೀಯ ಶೇ. 75 ಕಲಾವಿದರಿಗೆ ಉತ್ಸವದ ಅವಕಾಶ| ಹೊಸಪೇಟೆಯಿಂದ ಉಚಿತ ಬಸ್‌ಗಳ ವ್ಯವಸ್ಥೆ| ಪೊಲೀಸ್‌ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ| ಮಹಿಳೆಯರು ಹಾಗೂ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಭದ್ರತೆ| 13 ಕಡೆ ಪಾರ್ಕಿಂಗ್‌ ಸ್ಥಳಗಳ ವ್ಯವಸ್ಥೆ|


ಬಳ್ಳಾರಿ(ಜ.01): ಇದೇ ಜನವರಿ 10 ಮತ್ತು 11 ರಂದು ನಡೆ​ಯುವ ಹಂಪಿ ಉತ್ಸವದಲ್ಲಿ ಶೇ. 75 ರಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದ್ದಾರೆ.

ಡಿಸಿ ಕಚೇರಿ ಸಭಾಂಗಣದಲ್ಲಿ ಹಂಪಿ ಉತ್ಸವದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೂರು ವರ್ಷಗಳಿಂದ ಉತ್ಸವದಲ್ಲಿ ಅವಕಾಶ ಸಿಗದ ಕಲಾವಿದರಿಗೆ ಈ ಬಾರಿ ಆದ್ಯತೆ ನೀಡಲಾಗಿದೆ. ಶೇ. 25ರಷ್ಟುಕಲಾವಿದರು ಹೊರ ರಾಜ್ಯಗಳಿಂದ ಆಗಮಿಸಲಿದ್ದಾರೆ. ಈ ಬಾರಿ 25ಕ್ಕೂ ಹೆಚ್ಚು ಕಲಾ ಪ್ರಕಾರಗಳು ಉತ್ಸವದಲ್ಲಿ ಪ್ರದರ್ಶನ ನೀಡಲಿವೆ. ಅವಕಾಶ ಕೋರಿ 843 ಅರ್ಜಿಗಳು ಬಂದಿದ್ದವು. ಈ ಪೈಕಿ 125 ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜ. 10 ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪ್ರವಾಸೋದ್ಯಮ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಉದ್ಘಾಟನೆಗೂ ಮುನ್ನ ಗಂಗಾವತಿ ಪ್ರಾಣೇಶ್‌ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಆಯೋಜಿಸಲಾಗುವುದು. ಉತ್ಸವದ ಸಮಾರೋಪಕ್ಕೆ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವ ಪ್ರಹ್ಲಾದ ಸಿಂಗ್‌ ಪಾಟೀಲ್‌ ಆಗಮಿಸಲಿದ್ದಾರೆ. ಎರಡು ದಿನದ ಉತ್ಸವದಲ್ಲಿ ಸ್ಥಳೀಯ ರಾಜ್ಯ, ರಾಷ್ಟ್ರಮಟ್ಟದ ಕಲಾವಿದರು ಸೇರಿ ಕನ್ನಡದ ಖ್ಯಾತ ಗಾಯಕರು ಉತ್ಸವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 

ಪ್ರಮುಖವಾಗಿ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ತಂಡ ಕಾರ್ಯಕ್ರಮ ನೀಡಲಿದೆ. ಗಾಯಕಿ ಅನುರಾಧ ಭಟ್‌, ಹೇಮಂತ್‌, ಚೇತನ್‌ ಮತ್ತಿತರರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಫೆ. 11ರಂದು ಮುಂಬೈನ ಖ್ಯಾತ ಹಿನ್ನೆಲೆ ಗಾಯಕಿ ನೀತಿ ಮೋಹನ್‌ ತಂಡ ಮತ್ತು ಸುಪ್ರಿಯಾ ಲೋಹಿತ್‌ ತಂಡ ಮನೋರಂಜನೆ ಕಾರ್ಯಕ್ರಮ ನೀಡಲಿದೆ ಎಂದು ತಿಳಿಸಿದರು.

ಉತ್ಸವದಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಈಗಾಗಲೇ ನಿರ್ಮಾಣ ಕಾರ್ಯದ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಗಾಯತ್ರಿ ಪೀಠದ ಬಳಿ ಮುಖ್ಯ ವೇದಿಕೆಯನ್ನು ನಿರ್ಮಿಸಲಾಗುವುದು. ಎದುರು ಬಸವಣ್ಣ ವೇದಿಕೆ, ವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ವೇದಿಕೆ, ಸಾಸಿವೆ ಕಾಳು ಗಣಪ ಬಳಿ ವೇದಿಕೆ ನಿರ್ಮಿಸಲಾಗುತ್ತಿದೆ. ಜಾನಪದ ವಾಹಿನಿ, ಶೋಭಾ ಯಾತ್ರೆ, ಪುಸ್ತಕ ಪ್ರದರ್ಶನ, ಶಿಲ್ಪಕಲೆ, ಚಿತ್ರಕಲೆ ಶಿಬಿರ, ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕುಸ್ತಿ ಪ್ರದರ್ಶನ, ರಂಗೋಲಿ ಸ್ಪರ್ಧೆ, ಧ್ವನಿ ಮತ್ತು ಬೆಳಕು, ಮತ್ಸ್ಯಮೇಳ, ಹಂಪಿಬೈ ಸ್ಕೆ ೖ, ತುಂಗಾರತಿ, ವಸಂತ ವೈಭವ, ಚಿತ್ರಸಂತೆ, ಕವಿಗೋಷ್ಠಿ, ವಿಚಾರಸಂಕಿರಣ, ಸ್ಯಾಂಡ್‌ ಆರ್ಟ್‌, ಕುಸ್ತಿ, ಗುಂಡು ಎತ್ತುವ ಸ್ಪರ್ಧೆ, ಸಾಹಸ ಕ್ರೀಡೆಗಳು ನಡೆಯಲಿವೆ. ಈ ಬಾರಿ ವಿಶೇಷವಾಗಿ ತೃತೀಯ ಲಿಂಗಿಗಳು ಹಾಗೂ ವಿಕಲಚೇತರಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಹಂಪಿ ಬೈಸ್ಕೈಗೆ ಎರಡು ಹೆಲಿಕಾಪ್ಟರ್‌ಗಳನ್ನು ತರಿಸಲಾಗುವುದು. 2800 ಶುಲ್ಕ ನಿಗದಿಗೊಳಿಸಲಾಗಿದೆ. ಉಳಿದಂತೆ ಎಲ್ಲವೂ ಉಚಿತವಾಗಿ ಇರಲಿವೆ. ಕುಡಿವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ಉತ್ಸವದಲ್ಲಿ ಯಾವುದೇ ಕೊರತೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್‌ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾತನಾಡಿ, ಉತ್ಸವದ ಯಶಸ್ವಿ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಪ್ರಮುಖವಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. 13 ಪಾರ್ಕಿಂಗ್‌ ಸ್ಥಳಗಳನ್ನು ಗುರುತಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ 8 ಆ್ಯಂಬ್ಯುಲೆನ್ಸ್‌ಗಳನ್ನು ಇರಿಸಲಾಗುವುದು. ಮಫ್ತಿಯಲ್ಲಿ ಪೊಲೀಸರು ಓಡಾಟ ಮಾಡಲಿದ್ದಾರೆ. ಪ್ರವಾಸಿಗರು ಸೇರಿದಂತೆ ಉತ್ಸವಕ್ಕೆ ಬರುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಸದ ವೈ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ, ವಿಧಾನಪರಿಷತ್‌ ಸದಸ್ಯರಾದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಅಪರ ಜಿಲ್ಲಾಧಿಕಾರಿ ಮಂಜುನಾಥ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದಶಕ ಬಿ.ಕೆ. ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ. ರಂಗಣ್ಣನವರ್‌ ಉಪಸ್ಥಿತರಿದ್ದರು.

ಆಕರ್ಷವಲ್ಲದ ಲಾಂಛನ!

ಈ ಬಾರಿಯ ಹಂಪಿ ಉತ್ಸವದ ಲಾಂಛನವನ್ನು ಉತ್ತರ ಕನ್ನಡದ ಕಲಾವಿದ ದಾಮೋದರ್‌ ರೂಪಿಸಿದ್ದಾರೆ. ಅಷ್ಟೇನೂ ಆಕರ್ಷಕವಲ್ಲದ ಲಾಂಛನ ಕಲ್ಲಿನ ತೇರಿನ ಸುತ್ತವೇ ಗಿರಕಿ ಹೊಡೆದಿದೆ. ಸಾಮಾನ್ಯ ಚಿತ್ರದಂತೆ ಕಂಡು ಬರುತ್ತಿರುವ ಈ ಲಾಂಛನಕ್ಕಾಗಿ ಅಷ್ಟು ದೂರದ ಕಲಾವಿದರಿಂದ ತಯಾರಿಸಬೇಕಿತ್ತೇ? ಎಂಬ ಪ್ರಶ್ನೆ ಮೂಡಿತು. ಜಿಲ್ಲೆಯಲ್ಲೇ ಅತ್ಯುತ್ತಮ ಕಲಾವಿದರಿದ್ದಾಗ್ಯೂ ಉತ್ತರಕನ್ನಡದ ಕಲಾವಿದನಿಂದ ಲಾಂಛನ ತಯಾರಿಸಿದ್ದೇಕೆ ? ಎಂಬ ಪ್ರಶ್ನೆ ಕಾಡಿತು.

ಕೈತೋಟ ಅಭಿ​ವೃ​ದ್ಧಿ

2020ರ ಹಂಪಿ ಉತ್ಸವ ನೆನಪಿಗಾಗಿ ಹಂಪಿಯ ರಾಣಿ ಸ್ನಾನಗೃಹದ ಬಳಿಯ ಕೈತೋಟವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದರು. ಉತ್ಸವ ಮುಗಿದ ಬಳಿಕ ಅದರಿಂದ ಏನಾದರೂ ಗುರುತು ಇರಬೇಕು ಎಂಬ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಹಂಪಿ ಕನ್ನಡ ವಿವಿ ವೇದಿಕೆಗೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಸಹ ವೇದಿಕೆಯ ಮೇಲೆ ಇರಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದರು. ಈ ಹಿಂದೆ ಕನ್ನಡ ವಿವಿ ವಿಸಿಗೆ ಅವಮಾನವಾಗಿತ್ತು. ಈ ಬಾರಿ ಏನು ಕ್ರಮ ಕೈಗೊಂಡಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಕನ್ನಡ ವಿವಿ ವಿಸಿ ಅವರಿಗೆ ಸಹ ಉತ್ಸವದ ಕೆಲಸ ಜವಾಬ್ದಾರಿ ನೀಡಲಾಗಿದೆ. ಅವರು ಸಹ ವೇದಿಕೆಯ ಮೇಲಿರುತ್ತಾರೆ ಎಂದು ವಿವರಿಸಿದರು.

ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಂಪಿ ಉತ್ಸವದ ಲಾಂಛನ ಬಿಡುಗಡೆ ಮಾಡಲಾಯಿತು. ಸಂಸದ ವೈ. ದೇವೇಂದ್ರಪ್ಪ, ಶಾಸಕ ಕರುಣಾಕರರೆಡ್ಡಿ, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಡಿಸಿ ನಕುಲ್‌, ಎಸ್ಪಿ ಸಿ.ಕೆ. ಬಾಬಾ ಇದ್ದರು.
 

click me!