ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿರುವ ಕಾವೇರಿ ಚಳವಳಿಯಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡು ಧರಣಿ ನಡೆಸಿದರು.
ಮಂಡ್ಯ : ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿರುವ ಕಾವೇರಿ ಚಳವಳಿಯಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡು ಧರಣಿ ನಡೆಸಿದರು.
ನಗರದ ಸರ್‌ಎಂ ವಿ ಪ್ರತಿಮೆ ಎದುರು ಸಮಿತಿ ನಡೆಸುತ್ತಿರುವ ಚಳವಳಿ ವೇಳೆ ಮಾತನಾಡಿದ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಸರ್ಕಾರ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡುವ ಮೂಲಕ ಉದ್ಧಟತನ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
undefined
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ಅಣೆಕಟ್ಟೆಗಳನ್ನು ಬರಿದು ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ತೀವ್ರಗೊಳಿಸಲು ಸಮಿತಿ ತೀರ್ಮಾನಿಸಿದೆ. ವಿವಿಧ ಆಯಾಮಗಲ್ಲಿ ದೊಡ್ಡ ಸ್ವರೂಪದ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಕೊನೆ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.
ಹೋರಾಟಗಳು, ಸಂಘಟನೆ ಹಾಗೂ ಚಳವಳಿಗೆ ಬೆಲೆ ಕಟ್ಟುಲು ಸಾಧ್ಯವಿಲ್ಲ, ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ನಾಡಿನೆ ನೆಲ, ಜಲ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಆಗ್ರಹಿಸಿದರು.
ಕಾವೇರಿ ನದಿ ನೀರಿನ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ನಿರಂತರ ಅನ್ಯಾಯವನ್ನು ಸಹಿಸುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ನಮ್ಮ ನೀರು ನಮ್ಮ ಹಕ್ಕಾಗಿಯೇ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರವು ನಮಗೂ ಈ ಕಾವೇರಿಗೂ ಏನು ಸಂಬಂಧವಿಲ್ಲ ಎಂಬಂತೆ ಜಾಣತನ ನಡೆ ಅನುಸರಿಸುತ್ತಿದೆ. ಅದೇ ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರವು ಕೂಡ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುವ ಮೂಲಕ, ರಾಜಕೀಯ ಗಿಮಿಕ್ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆತಡೆ, ಚಳವಳಿ ಹಾಗೂ ಹೋರಾಟಕ್ಕೆ ಯಾವುದೇ ಬೆಲೆ ನೀಡದ ರಾಜ್ಯ ಸರ್ಕಾರ ಯೆಥೇಚ್ಚವಾಗಿ ತಮಿಳುನಾಡಿಗೆ ನೀರು ಬಿಟ್ಟು ಅಕಾರ ಅನುಭವಿಸುತ್ತಿದೆ. ರೈತ ಹೋರಾಟಕ್ಕೆ ಬೆಲೆ ನೀಡಿಯಾದರೂ ವಿಶೇಷ ಅಧಿವೇಶನ ಕರೆದು ಕುಡಿಯುವ ನೀರು ಉಳಿಸಿಕೊಳ್ಳಬೇಕಿತ್ತು. ಅದನ್ನು ಮಾಡದೇ ರೈತರನ್ನು ಸಾವಿನ ಕೂಪಕ್ಕೆ ದೂಡುತ್ತಿದೆ ಎಂದು ದೂರಿದರು.
ರೈತ ಸಂಘದ ಮುಖಂಡ ಇಂಡುವಾಳು ಚಂದ್ರಶೇಖರ್ ಮಾತನಾಡಿ, ರೈತರು ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ, ಅಲ್ಲಿ ಸರ್ಕಾರ ಮೈಸೂರು ದಸರಾ ಮೂಡ್‌ನಲ್ಲಿದೆ. ರಾಜ್ಯದಲ್ಲಿ ಬರಗಾಲವಿದೆ, ರೈತರು ನೀರಿಗಾಗಿ ನಿರಂತರ ಧರಣಿ ಮಾಡುತ್ತಿದ್ದರೆ. ಇದೆಲ್ಲವನ್ನೂ ನೋಡಿಕೊಂಡು ರಾಜಕೀಯ ಪಕ್ಷಗಳು ಕೆಸರೆರಚಾಟದಲ್ಲಿ ತೊಡಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಹೋರಾಟಗಾರರು ಚಳವಳಿ ನಿಲ್ಲಿಸಿಲ್ಲ. ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುತ್ತಿರುವುದು ಖಂಡಿಸಿ ಧರಣಿ ಮುಂದುವರಿದಿದೆ. ಈಗ ಮತ್ತಷ್ಟು ತೀವ್ರಗೊಂಡು ಸಾವು ನೋವು ಸಂಭವಿಸಿದರೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಮಿತಿಯ ಕೆ.ಬೋರಯ್ಯ, ಮುದ್ದೇಗೌಡ, ಶಂಭೂನಹಳ್ಳಿ ಕೃಷ್ಣ, ಕನ್ನಡ ಸೇನೆ ಮುಂಜುನಾಥ್, ಸುಜಾತಾ, ಗಾಣದಾಳು ಚಂದ್ರಲಿಂಗಣ್ಣ, ಪಣಕನಹಳ್ಳಿ ಬೊರಲಿಂಗೇಗೌಡ, ದೊರೆಸ್ವಾಮಿ ಭಾಗವಹಿಸಿದ್ದರು.
16 ರಿಂದ ನಗರದಾದ್ಯಂತ ಬೈಕ್ ರ್‍ಯಾಲಿ
ಅ.16 ರಿಂದ ನಗರದಾದ್ಯಂತ ಬೈಕ್ ರ್‍ಯಾಲಿಯನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಾವೇರಿ ಕೊಳ್ಳದ ಪ್ರತಿ ಗ್ರಾಮಗಳಲ್ಲಿಯೂ ಹೋರಾಟದ ಸ್ವರೂಪವನ್ನು ತೀವ್ರಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದರು. ಗ್ರಾಮೀಣ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಬೈಕ್ ರ್‍ಯಾಲಿ ಮೂಲಕ ನಗರ ಪ್ರದಕ್ಷಿಣೆ ಹಾಕಿ ನಮ್ಮ ನೀರನ್ನು ಉಳಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ. ಆ ನಂತರ ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಪ್ರತಿಭಟನೆ ತೀವ್ರಗೊಳ್ಳುವ ಎಲ್ಲ ಲಕ್ಷಣಗಳು ಇದೆ. ಇದಕ್ಕೆ ಜನರು ಹಾಗೂ ರೈತರ ಸಹಕಾರ ಅಗತ್ಯವಾಗಿ ಬೇಕು ಎಂದು ಮನವಿ ಮಾಡಿದರು.