ಸಿಂಧನೂರು ತಾಲೂಕನ್ನು ಸಂಪೂರ್ಣ ನೀರಾವರಿಯನ್ನಾಗಿಸಲು ಬದ್ಧ: ಸಿದ್ದರಾಮಯ್ಯ

By Kannadaprabha NewsFirst Published Dec 31, 2023, 11:01 PM IST
Highlights

ಸಿಂಧನೂರು ತಾಲೂಕು ಈಗಾಗಲೇ ಶೇ.80ರಷ್ಟು ನೀರಾವರಿ ಸೌಲಭ್ಯ ಹೊಂದಿದ್ದು, ಅದನ್ನು ಶೇ.100 ರಷ್ಟು ಮಾಡುವ ಗುರಿ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. 

ಸಿಂಧನೂರು (ರಾಯಚೂರು) (ಡಿ.31): ಸಿಂಧನೂರು ತಾಲೂಕು ಈಗಾಗಲೇ ಶೇ.80ರಷ್ಟು ನೀರಾವರಿ ಸೌಲಭ್ಯ ಹೊಂದಿದ್ದು, ಅದನ್ನು ಶೇ.100 ರಷ್ಟು ಮಾಡುವ ಗುರಿ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನ ಮೈದಾನದಲ್ಲಿ ಶನಿವಾರ ತಿಮ್ಮಾಪುರ ಏತ ನೀರಾವರಿ ಯೊಜನೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನೀರಿನ ಲಭ್ಯತೆ ಇದ್ದಾಗ ಅದನ್ನು ಕೃಷಿ ಉಪಯೋಗಕ್ಕೆ ಕಲ್ಪಿಸಿ ರೈತರನ್ನು ಮೇಲ್ದರ್ಜೆಗೇರಿಸುವುದೇ ನಮ್ಮ ಸರ್ಕಾರದ ಗುರಿಯಾಗಿದೆ. 

ತಿಮ್ಮಾಪುರ ಏತ ನೀರಾವರಿ ಜಾರಿಗೆ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಸಾಕಷ್ಟು ಒತ್ತಾಯಿಸಿದ್ದರು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ₹ 90.06 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ ಮಾಡಿದ್ದು, 1.85 ಟಿಎಂಸಿ ನೀರು ಕೃಷಿ ಲಭ್ಯವಾಗಲಿದೆ. ಇದರಿಂದ 27 ಸಾವಿರ ಎಕರೆ ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ. ಏತ ನೀರಾವರಿ ವ್ಯಾಪ್ತಿಯಲ್ಲಿ ಶೇ.90ರಷ್ಟು ಜನ ಹಿಂದುಳಿದ ವರ್ಗಗಳ ಜನರೇ ವಾಸಿಸುತ್ತಿದ್ದು, ಅವರಿಗೆ ಅನುಕೂಲವಾಗಲಿದೆ ಎಂದಿ ಹೇಳಿದರು.

ಮಲ್ಲಿಕಾರ್ಜುನ್‌ ಖರ್ಗೆಯವರನ್ನು ನಿರ್ಲಕ್ಷಿಸಿದ ಸಿದ್ದು ದಲಿತ ವಿರೋಧಿ: ಛಲವಾದಿ ನಾರಾಯಣಸ್ವಾಮಿ

ತುಂಗಭದ್ರಾ ಜಲಾಶಯದಲ್ಲಿ 32 ಟಿಎಂಸಿ ಹೂಳು ಸಂಗ್ರಹಗೊಂಡಿದ್ದು, ಸಾಕಷ್ಟು ನೀರು ಆಂಧ್ರಕ್ಕೆ ಹರಿದು ಹೋಗುತ್ತಿದೆ. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಜೆಟ್ ನಂತರ ಈ ಕುರಿತು ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳ ಜತೆ ಚರ್ಚಿಸಲಾಗುವುದು ಎಂದರು. ಕರ್ನಾಟಕ ಸುವರ್ಣ ಸಂಭ್ರಮವನ್ನು ಕಳೆದ ವರ್ಷವೇ ಮಾಡಬೇಕಿತ್ತು. ಆದರೆ, ಹಿಂದಿನ ಸರ್ಕಾರ ಮಾಡಲಿಲ್ಲ. ನಮ್ಮ ಸರ್ಕಾರ ಈ ವರ್ಷ ಅದ್ಧೂರಿಯಾಗಿ ಆಚರಿಸುತ್ತಿದೆ. 2024 ರ ನವೆಂಬರ್ ವರೆಗೆ ಅದ್ಧೂರಿಯಾಗಿ ಆಚರಿಸಲು ಆದೇಶ ಮಾಡಲಾಗಿದೆ. ಸಿಂಧನೂರಿನ ಸರ್ಕಾರಿ ಪದವಿ ಕಾಲೇಜ್ ಸುವರ್ಣ ಸಂಭ್ರಮ ಆಚರಿಸುತ್ತಿರುವುದು ಖುಷಿಯ ವಿಚಾರ ಎಂದರು. ಬಿಜೆಪಿ ಸರ್ಕಾರ ಎಲ್ಲ ಇಲಾಖೆಗಳಲ್ಲಿ ಹಣ ಬಾಕಿ ಉಳಿಸಿಕೊಂಡು ನಮ್ಮನ್ನು ಕಷ್ಟಕ್ಕೆ ಸಿಲುಕಿಸಿದೆ. ಆದರೂ ನಿಮ್ಮ ನಿರೀಕ್ಷೆ ಹುಸಿ ಮಾಡುವುದಿಲ್ಲ. ನಿಮ್ಮ ನಿರೀಕ್ಷೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದರು.

ನಮ್ಮದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್: ಬರ ಪರಿಹಾರ ಬಿಡುಗಡೆ ಗೊಳಿಸುವಂತೆ ಮನವಿ ಮಾಡಿದರು ನಯಾಪೈಸ ನೀಡದ ಬಿಜೆಪಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತು ಎತ್ತಿದರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವರು ಆದರೆ ನಮಗೆ ಸಾಥ್ ನೀಡುತ್ತಿಲ್ಲ. ಬಡವರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ಸಿನದ್ದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಕೇಂದ್ರ ಸರ್ಕಾರ ನಮ್ಮಿಂದ ತೆರಿಗೆ ಕಟ್ಟಿಸಿಕೊಂಡು ಬರ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿದೆ. ಬಿಜೆಪಿ ಆಡಳಿತ ಸಮಯದಲ್ಲಿ ಹಣವನ್ನು ತಿಂದು ಹೋಗಿದ್ದಾರೆ. ನೀರಾವರಿ ಇಲಾಖೆಯಲ್ಲಿ 13 ಸಾವಿರ ಕೋಟಿ, ಲೋಕೋಪಯೋಗಿಯಲ್ಲಿ 9 ಸಾವಿರ ಕೋಟಿ, ಸಣ್ಣ ನೀರಾವರಿಯಲ್ಲಿ 4 ಸಾವಿರ ಕೋಟಿ, ಆರ್ಡಿಪಿಎಸ್ನಲ್ಲಿ 3 ಸಾವಿರ ಕೋಟಿಯನ್ನು ಬಾಕಿ ಉಳಿಸಿದ್ದು, ಇಂತಹ ಕಷ್ಟ ಕಾಲದಲ್ಲಿಯೂ ನಾವು ನಿಮ್ಮ ಜೊತೆಗಿದ್ದು ಕೆಲಸ ಮಾಡುತ್ತಿದ್ದೇವೆ ಎಂದರು.

ನಮ್ಮದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್: ಸಿಎಂ ಸಿದ್ದರಾಮಯ್ಯ

ಎಲ್ಲ ಶಾಸಕರು ಕ್ರಿಯಾಶೀಲರಾಗಿದ್ದುಕೊಂಡು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಿದರೆ ಇಡೀ ರಾಜ್ಯವೂ ಸಹ ಅಭಿವೃದ್ಧಿಯಾಗುತ್ತದೆ. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಸಜ್ಜನ ಮತ್ತು ಅಭಿವೃದ್ಧಿ ಬಗ್ಗೆ ಹೆಚ್ಚು ಶ್ರಮಿಸುವ ಶಾಸಕರು. ಇವರಂತೆಯೇ ಎಲ್ಲಾ ಶಾಸಕರು ಶ್ರಮಿಸಿದರೆ ಇಡಿ ರಾಜ್ಯ ಮತ್ತು ಹೈದರಾಬಾದ್ ಕರ್ನಾಟಕ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

click me!