ಹೊಸ ವರ್ಷ ಸಂಭ್ರಮಾಚರಣೆ, ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಬಂದ್ ಮಾಡಿದ ಪೊಲೀಸರು!

By Suvarna NewsFirst Published Dec 31, 2023, 9:45 PM IST
Highlights

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಎಲ್ಲೆಡೆ ಡಿಜೆ ಸದ್ದುಗಳೇ ಆರ್ಭಟಿಸುತ್ತಿದೆ. ಇದರ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಕಿಕ್ಕಿರಿದು ಜನ ಸೇರಿದ್ದಾರೆ. ಇದೀಗ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಫ್ಲೈ ಓವರ್ ರಸ್ತೆಗಳನ್ನು ಬಂದ್ ಮಾಡುತ್ತಿದ್ದಾರೆ.

ಬೆಂಗಳೂರು(ಡಿ.31) ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಪಾರ್ಟಿ ರಂಗೇರಿದೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ. ಇದೀಗ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಒಂದೊಂದೆ ಫ್ಲೈಓವರ್ ಬಂದ್ ಮಾಡಲಾಗುತ್ತಿದೆ. ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಸಿಲ್ಕ್ ಬೋರ್ಡ್ ವರೆಗೆ ಸಂಪರ್ಕ ಕಲ್ಪಿಸುವ ಫ್ಲೈಓವರ್ ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಫ್ಲೈ ಓವರ್ ಬಂದ್ ಮಾಡಲಾಗಿದೆ. 

ಹೊಸ ವರ್ಷ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಫ್ಲೈ ಓವರ್ ಮೇಲೆ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚು. ಇದೇ ವೇಳೆ ಅತೀ ವೇಗದ ಚಾಲನೆಗಳಿಂದ ಫ್ಲೈಓವರ್ ಹೆಚ್ಚು ಅಪಾಯಕಾರಿಯಾಗಬಲ್ಲದು. ಹೀಗಾಗಿ ಅಪಘಾತ ಹಾಗೂ ಅನಾಹುತಗಳನ್ನು ತಪ್ಪಿಸಲು ಪೊಲೀಸರು ಫ್ಲೈ ಓವರ್ ಬಂದ್ ಮಾಡುತ್ತಿದ್ದಾರೆ. ರಾತ್ರಿ 10 ಗಂಟೆಗೆ ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಬಂದ್ ಆಗಲಿದೆ. ನಾಳೆ ಬೆಳಗ್ಗೆ 6 ಗಂಟೆ ವರೆಗೆ ಫ್ಲೈ ಓವರ್ ಬಂದ್ ಆಗಲಿದೆ.

Latest Videos

ಬ್ರಿಗೇಡ್‌ ರಸ್ತೆಯಲ್ಲಿ ಮಹಿಳೆ, ಮಕ್ಕಳಿಗೆ ಪ್ರತ್ಯೇಕ ಲೈನ್‌ ವ್ಯವಸ್ಥೆ ಮಾಡಿದ ಪೊಲೀಸರು!

ಬೆಂಗಳೂರಿನ ಹಲವು ರಸ್ತೆಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಖುದ್ದು ಪೊಲೀಸ್ ಅಧಿಕಾರಿಗಳು ಬೆಂಗಳೂರಿನ ಸುರಕ್ಷತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇಂದಿರಾನಗರ ಸುತ್ತಮುತ್ತ ಡಿಸಿಪಿ ದೇವರಾಜ ರೌಂಡ್ಸ್ ಹಾಕಿ ಪರಿಶೀಲನೆ ನಡೆಸಿದ್ದಾರೆ. ಪ್ರತಿ ರಸ್ತೆಗೂ ಭೇಟಿ ನೀಡಿ ಭದ್ರತೆ ಪರಿಶೀಲನೆ ಮಾಡಿದ್ದಾರೆ.  ನಮ್ಮ ಪೂರ್ವ ವಿಭಾಗದಲ್ಲಿ ಮುಖ್ಯವಾಗಿ ಇಂದಿರಾನಗರ 100 ಫೀಟ್ ಮತ್ತು 80 ಫೀಟ್ ರಸ್ತೆಯಲ್ಲಿ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಹೀಗಾಗಿ ಇಬ್ಬರು ಡಿಸಿಪಿಗಳು ಪೂರ್ವ ವಿಭಾಗಕ್ಕೆ ನಿಯೋಜನೆ ಆಗಿದ್ದಾರೆ. 1 ಸಾವಿರ ಪೊಲೀಸರು ಪೂರ್ವ ವಿಭಾಗದಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ದೇವರಾಜ್ ಹೇಳಿದ್ದಾರೆ.

ಪಬ್, ಬಾರ್ ಕ್ಲಬ್ ಎಲ್ಲವೂ 1 ಗಂಟೆ ತನಕ ಅನುಮತಿ ಇದೆ. ನಂತರ ಎಲ್ಲವನ್ನೂ ಬಂದ್ ಮಾಡಬೇಕು. ವಾಚ್ ಟವರ್ ನಿರ್ಮಿಸಲಾಗಿದೆ. ಇನ್ನು ಪೊಲೀಸರು ಹ್ಯಾಂಡ್ ಕ್ಯಾಮೆರಾ ಮೂಲಕ ರೆಕಾರ್ಡಿಂಗ್ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳು, ಮಹಿಳೆಯರ ಸುರಕ್ಷತೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಮಹಿಳೆಯರಿಗೆ ವಿಶ್ರಾಂತಿ ತಾಣ ನಿರ್ಮಾಣ ಮಾಡಲಾಗಿದೆ ಎಂದು ದೇವರಾಜ್ ಹೇಳಿದ್ದಾರೆ. ಬಹೇತೇಕ ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಕುಡಿದು ವಾಹನ ಚಲಾಯಿಸಿದರೆ ದುಬಾರಿ ದಂಡದ ಜೊತೆಗೆ ಲೈಸೆನ್ಸ್ ಕೂಡ ರದ್ದಾಗಲಿದೆ.
 
 

click me!