
ಮಂಗಳೂರು(ಮಾ.13): ಮಂಗಳೂರು ಗಲಭೆ ಹಾಗೂ ಗೋಲಿಬಾರ್‌ಗೆ ಸಂಬಂಧಿಸಿ ನಗರ ಪೊಲೀಸ್ ಕಮಿಷನರ್ ಅವರು ಒಂದು ಸಾವಿರ ಪುಟಗಳ ಸಾಕ್ಷ್ಯ ದಾಖಲೆಗಳನ್ನು ತನಿಖಾ ಆಯೋಗಕ್ಕೆ ಸಲ್ಲಿಸಿದ್ದಾರೆ.
ಇಲ್ಲಿನ ಸಹಾಯಕ ಕಮಿಷನರ್ ಕೋರ್ಟ್ ಹಾಲ್‌ನಲ್ಲಿ ಮ್ಯಾಜಿಸ್ಟ್ರೀರಿಯಲ್ ತನಿಖೆಯ ತನಿಖಾಧಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅವರು ಗುರುವಾರ ಈ ಸಾಕ್ಷ್ಯ ಸಲ್ಲಿಸಿದರು.
ಬಜರಂಗದಳ ಕಾರ್ಯಕರ್ತಗೆ ಹಲ್ಲೆ: ಇಬ್ಬರ ಬಂಧನ
ಸುಮಾರು ಒಂದು ಸಾವಿರ ಪುಟಗಳ ದಾಖಲೆ ಪೈಕಿ 38 ಪುಟಗಳ ಸಾಕ್ಷ್ಯವನ್ನು ಸ್ವತಃ ಕಮಿಷನರ್ ಅವರೇ ಲಿಖಿತವಾಗಿ ಸಲ್ಲಿಸಿದ್ದಾರೆ. ಡಿ.19ರಂದು ನಡೆದ ಅಹಿತಕರ ಘಟನೆ ಹಾಗೂ ಗೋಲಿಬಾರ್ ಘಟನೆಯ ಸಮಗ್ರ ವಿವರ ಅಲ್ಲದೆ, ಘಟನೆಗೆ ಕಾರಣವಾದ ಪರಿಸ್ಥಿತಿಯ ಬಗ್ಗೆ ವಿಸ್ತೃತವಾಗಿ ದಾಖಲೆಗಳಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ದಾಖಲೆ ಸಲ್ಲಿಸಿದ ಬಳಿಕ ತನಿಖಾಧಿಕಾರಿಗಳು ಪೊಲೀಸ್ ಕಮಿಷನರ್ ಅವರಿಂದ ಘಟನೆ ಬಗ್ಗೆ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ವಿಫಲವಾಗಿದ್ದರೆ, ಇನ್ನಷ್ಟುಪರಿಣಾಮಗಳನ್ನು ಎದುರಿಸಬೇಕಾಗುತ್ತಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಅದನ್ನು ನಿಯಂತ್ರಿಸಲು ಅನಿವಾರ್ಯವಾಗಿ ಗೋಲಿಬಾರ್ ಮಾಡಬೇಕಾಯಿತು ಎಂದು ಕಮಿಷನರ್ ವಿವರಣೆ ನೀಡಿದ್ದಾರೆ ಎಂದು ಹೇಳಲಾಗಿದೆ.
49 ಪೊಲೀಸರ ಸಾಕ್ಷ್ಯ:
ಗುರುವಾರ ನಡೆದ ವಿಚಾರಣೆಯಲ್ಲಿ ಪೊಲೀಸ್ ಕಮಿಷನರ್ ಸೇರಿದಂತೆ ಒಟ್ಟು 49 ಮಂದಿ ಸಾಕ್ಷ್ಯ ಹೇಳಿದ್ದಾರೆ. ಇವರಲ್ಲಿ ಹೋಂ ಗಾರ್ಡ್ ಹಾಗೂ ಕೆಎಸ್‌ಆರ್‌ಪಿ ಪೊಲೀಸರು ಸೇರಿದ್ದಾರೆ. ಹೇಳಿಕೆ ನೀಡಿದ ಹೋಂ ಗಾರ್ಡ್ ಪೈಕಿ ಮೂರು ಮಂದಿ ಘಟನೆ ಸಂದರ್ಭ ಗಾಯಗೊಂಡವರು ಇದ್ದಾರೆ ಎನ್ನಲಾಗಿದೆ. ಇವರಲ್ಲದೆ ಇಬ್ಬರು ನಾಗರಿಕರು ಕೂಡ ತನಿಖಾಧಿಕಾರಿಗೆ ದಾಖಲೆ ಸಲ್ಲಿಸಿದ್ದಾರೆ. ಆದರೆ ಸಿಡಿ ದಾಖಲೆ ಸಲ್ಲಿಸಲು ಮುಂದಾದಾಗ ಅದನ್ನು ತನಿಖಾಧಿಕಾರಿಗಳು ಸ್ವೀಕರಿಸಿಲ್ಲ. ನಿರ್ದಿಷ್ಟದಾಖಲೆ ಮೂಲಕ ಮುಂದಿನ ಅವಧಿಯಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದುವರೆಗೆ 176 ಪೊಲೀಸರ ಪೈಕಿ 57 ಮಂದಿ ವಿಚಾರಣೆಗೆ ಹಾಜರಾದಂತಾಗಿದೆ. ಉಳಿದವರ ವಿಚಾರಣೆ ಮಾ.19ರಂದು ನಡೆಯಲಿದೆ ಎಂದು ತನಿಖಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಡಿಸಿ, ಎಸಿಗೂ ಬುಲಾವ್ ಸಾಧ್ಯತೆ
ಮಂಗಳೂರು ಗಲಭೆ ಕುರಿತು ತನಿಖಾಧಿಕಾರಿ ಎದುರು ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಹಾಗೂ ವೈದ್ಯಾಧಿಕಾರಿಗಳಿಗೆ ತನಿಖೆಗೆ ಹಾಜರಾಗುವಂತೆ ಸೂಚಿಸುವ ಸಂಭವ ಇದೆ.
ಇದುವರೆಗೆ ನಾಗರಿಕರು ಹಾಗೂ ಪೊಲೀಸರ ಸಾಕ್ಷ್ಯ ದಾಖಲೆಯನ್ನು ತನಿಖಾಧಿಕಾರಿಗಳು ಪಡೆದಿದ್ದಾರೆ. ತನಿಖೆಯ ಮುಂದಿನ ಭಾಗವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ ಹಾಗೂ ಶಾಂತಿ ಸಾಮರಸ್ಯ ಕಾಪಾಡುವಲ್ಲಿ ಶ್ರಮ ವಹಿಸಬೇಕಾದ ಜಿಲ್ಲಾಡಳಿತ ಹಾಗೂ ಮಂಗಳೂರು ಸಹಾಯಕ ಕಮಿಷನರ್ ಅವರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಹೇಳಲಾಗಿದೆ. ಗೋಲಿಬಾರ್‌ನಲ್ಲಿ ಸಾವಿಗೀಡಾದ ಇಬ್ಬರ ವಿಧಿವಿಜ್ಞಾನ ಪ್ರಯೋಗಾಲಯ ವರದಿ ತನಿಖಾಧಿಕಾರಿಗೆ ಸಲ್ಲಿಕೆಯಾದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳ ಸಾಕ್ಷ್ಯ ಸಲ್ಲಿಕೆಗೆ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ಈಗಾಗಲೇ ನಾಗರಿಕರು ಮತ್ತು ಪೊಲೀಸರು ಸೇರಿ 320ರಷ್ಟುಸಾಕ್ಷ್ಯ ಸಲ್ಲಿಕೆಯಾಗಿದೆ. ಇವರಿಬ್ಬರ ಹೇಳಿಕೆಗಳ ಸಾಮ್ಯತೆ ಹಿನ್ನೆಲೆಯಲ್ಲಿ ಅಡ್ಡಪರಿಶೀಲನೆ ನಡೆಸಲು ತನಿಖಾಧಿಕಾರಿಗಳು ಪರಸ್ಪರ ವಾದ-ವಿವಾದ ಆಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಂತಿಮ ವರದಿ ಸಲ್ಲಿಕೆ ಇನ್ನೂ ವಿಳಂಬ
ಮಂಗಳೂರು ಗಲಭೆ ಹಾಗೂ ಗೋಲಿಬಾರ್ ಘಟನೆಯ ಮ್ಯಾಜಿಸ್ಟ್ರೀಯಲ್ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಮಾ.24ಕ್ಕೆ ತನಿಖಾ ಆಯೋಗ ರಚನೆಗೊಂಡು ಮೂರು ತಿಂಗಳು ಆಗುತ್ತದೆ. ಇದುವರೆಗೆ ಮಧ್ಯಂತರ ವರದಿ ಮಾತ್ರ ಸಲ್ಲಿಸಲಾಗಿದೆ. ಮಾ.24ಕ್ಕೆ ಆಯೋಗದ ವರದಿ ಸಲ್ಲಿಕೆಗೆ ಅಂತಿಮ ದಿನ. ಆದರೆ ಈವರೆಗೆ 176 ಪೊಲೀಸರ ಪೈಕಿ 57 ಮಂದಿಯ ವಿಚಾರಣೆ ಮಾತ್ರ ನಡೆಸಲಾಗಿದೆ. ಇನ್ನು ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್, ವೈದ್ಯಾಧಿಕಾರಿಗಳ ವಿಚಾರಣೆ ಬಾಕಿ ಇದೆ. ಹಾಗಾಗಿ ಅಂತಿಮ ವರದಿ ಸಲ್ಲಿಕೆಗೆ ತನಿಖಾ ಆಯೋಗದ ಅವಧಿಯನ್ನು ವಿಸ್ತರಿಸುವಂತೆ ತನಿಖಾಧಿಕಾರಿಗಳು ಸರ್ಕಾರವನ್ನು ಕೇಳಿಕೊಳ್ಳುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.