ಬಾಗಲಕೋಟೆ: ಐತಿಹಾಸಿಕ ರಂಗಿನಾಟಕ್ಕೆ ಅದ್ಧೂರಿ ತೆರೆ!

By Kannadaprabha News  |  First Published Mar 13, 2020, 12:37 PM IST

ಮೂರು ದಿನಗಳ ರಂಗುರಂಗಿನಾಟಕ್ಕೆ ತೆರೆ| ಬಾಗಲಕೋಟೆಯಲ್ಲಿ ನಡೆದ ಬಣ್ಣದೋಕುಳಿ|  ಗಮನ ಸೆಳೆದ ಬಾಹುಬಲಿ ಸಿನೆಮಾದ ಪಾತ್ರಧಾರಿಗಳ ಯುವಕರು| 


ಬಾಗಲಕೋಟೆ(ಮಾ.13): ಕೊರೋನಾ ಭೀತಿಯ ನಡುವೆಯೂ ಬಾಗಲಕೋಟೆಯಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ರಂಗುರಂಗಿನಾಟಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಈ ಮೂಲಕ ಬಣ್ಣದಾಟದ ಕೊನೆಯ ದಿನವಾದ ಗುರುವಾರ ನಗರವು ಅಕ್ಷರಶಃ ಬಣ್ಣದ ಬಾಗಲಕೋಟೆಯಾಗಿ ಪರಿವರ್ತನೆಯಾಗಿತ್ತು. 

ಬಾಗಲಕೋಟೆ ಹೋಳಿ ಸಂಭ್ರಮದಲ್ಲಿ ಭಾಗಿಯಾದ್ರು ಬಾಹುಬಲಿ, ಕಟ್ಟಪ್ಪ..!

Tap to resize

Latest Videos

ಮೊದಲ ದಿನ ನಗರದ ಹೊರ ವಲಯದ ಗದ್ದನಕೇರಿ ಬಳಿ, ಎರಡನೇ ದಿನ ಹಳೆಯ ಬಾಗಲಕೋಟೆ ಕಿಲ್ಲಾ, ಮೂರನೇ ದಿನ ವೆಂಕಟಪೇಟೆ, ಜೈನ್ ಪೇಟೆ, ಹಳೇಪೇಟೆಗಳಲ್ಲಿ ಮತ್ತು ಕೊನೆಯ ದಿನವಾದ ಗುರುವಾರ ಇಡೀ ಬಾಗಲಕೋಟೆಯ ಜನ ಕಿಲ್ಲಾ ಪ್ರದೇಶದಲ್ಲಿ ಒಟ್ಟಾಗಿ ಸೇರಿ ಬಣ್ಣವಾಡಿದರು. ಈ ಮೂಲಕ ಸಮಸಮಾಜ, ಜಾತ್ಯತೀತ ಮತ್ತು ದೇಶದ ಐಕ್ಯತೆ ಸಾರುವ ಹೋಳಿಯಾಗಿ ಇದು ನೋಡುಗರ ಕಣ್ಣಿಗೆ ಕಂಡಿತು. ಈ ವರ್ಷ ಕೂಡ ಶಾಂತಯುತವಾಗಿ ಮತ್ತು ಅಷ್ಟೇ ಅದ್ಧೂರಿಯಾಗಿ ನಗರದ ಜನರು ಹಬ್ಬ ಆಚರಿಸಿದರು. 

ನಿಲ್ಲದ ಉತ್ಸಾಹ: 

ಮೊದಲ ದಿನ ಬಣ್ಣದಾಟಕ್ಕೆ ಯಾವ ರೀತಿಯ ಉತ್ಸಾಹವಿತ್ತೋ ಅದೇ ರೀತಿಯ ಉತ್ಸಾಹ ಕೂಡ ಕೊನೆಯ ದಿನವೂ ಯುವಕರಲ್ಲಿತ್ತು. ಈ ಮೂಲಕ ಹಬ್ಬವೆಂದರೆ ಹೇಗಿರಬೇಕು ಎಂಬುವುದಕ್ಕೆ ಬಾಗಲಕೋಟೆಯ ಈ ಹಬ್ಬವೇ ಎಲ್ಲರಿಗೂ ಸಾರಿ ಹೇಳುವಂತಿತ್ತು. ಯಾವುದೇ ಧರ್ಮ, ಜಾತಿ, ವಯಸ್ಸಿನ ಭೇದವಿಲ್ಲದೆ, ಎಲ್ಲರೂ ಸರಿ ಸಮಾನರಾಗಿ ಬಣ್ಣದಾಟದಲ್ಲಿ ತೊಡಗಿದ್ದು ವಿಶೇಷವಾಗಿತ್ತು. 

ವಹಿವಾಟು ಕೂಡ ಸ್ತಬ್ಧ: 

ಇಡೀ ನಗರ ಜನತೆ ಹೋಳಿಯಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಸಿನೆಮಾ ಥಿಯೇಟರ್‌ಗಳು, ತರಕಾರಿ ಮಾರುಕಟ್ಟೆ, ಹಣ್ಣು ವ್ಯಾಪಾರಸ್ಥರು ಎಲ್ಲ ವಹಿವಾಟನ್ನು ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಮೂರು ದಿನಗಳ ಕಾಲ ಯಾವುದೇ ವಹಿವಾಟು ನಗರದಲ್ಲಿ ಕಂಡು ಬರಲಿಲ್ಲ. ಹೀಗಾಗಿ ಒಂದು ರೀತಿಯ ಸ್ವಯಂ ಘೋಷಿತ ಬಂದ್ ಎಂಬಂತೆ ಹೋಳಿ ಹಬ್ಬ ಕಾರಣವಾಗಿತ್ತು. ಬಣ್ಣವನ್ನೇ ತುಂಬಿಕೊಂಡಿದ್ದ ಬ್ಯಾರಲ್‌ಗಳು, ಸಿಂಟೆಕ್ಸ್‌ಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳು, ಎತ್ತಿನ ಗಾಡಿಗಳು ಯು ದ್ಧದ ರಥಗಳು ಸಾಗಿದಂತೆ ಜನರ ಮಧ್ಯೆ ಸಾಗಿದಂತೆ ಕಂಡುಬಂದವು. ಮಾತ್ರವಲ್ಲ, ಮುಂಗಾರು ಮೋಡಗಳು ರಭಸದಿಂದ ಸಾಗುತ್ತ ಮಳೆ ಸುರಿಸಿ ಹೋದಂತ ಅನುಭವವಾಗಿತ್ತು. 

ಬಂಡಿ ಮಾಯ: 

ಐತಿಹಾಸಿಕ ಹೋಳಿ ಬಣ್ಣಕ್ಕೆ ಬಂಡಿಗಳು ಮೆರಗು ನೀಡುತ್ತಿದ್ದವು. ಆದರೆ, ಇಂದಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಬಂಡಿಗಳು ಬಣ್ಣದಾಟದಿಂದ ಮಾಯವಾಗುತ್ತಿವೆ ಎಂಬುವುದಕ್ಕೆ ಈಗಿನ ಹೋಳಿಯಲ್ಲಿ ಕೇವಲ ಎರಡು 2 ಬಂಡಿಗಳು ಭಾಗವಹಿಸಿದ್ದವು. ನಾಗರಿಕರು ಆಡುತ್ತಿದ್ದ ಈ ಹೋಳಿಯನ್ನು ನೋಡಲೆಂದೆ ಇಡೀ ನಗರಕ್ಕೆ ನಗರವೇ ಎದ್ದು ಬಂದಂತಿತ್ತು. ಸಂದಿಗೊಂದಿ, ಮನೆ ಮಾಳಿಗೆಗಳೆಲ್ಲ ಮಹಿಳೆಯರು ಮಕ್ಕಳಾದಿಯಾಗಿ ಜನಜಾತ್ರೆಯೇ ನೆರೆದಿತ್ತು. ಬೃಹತ ಸಂಖ್ಯೆಯಲ್ಲಿ ಮಹಿಳೆಯರು ನೋಡಿ ಸಂಭ್ರಮಿಸಿದರು. ಶಿಳ್ಳೆ, ಕೇಕೆ ಹಾಕಿ ಅವರು ಕೂಡ ನಿಂತಲ್ಲಿಯೇ ಕುಣಿದರು. 

ಕಳೆದ ಮೂರು ದಿನಗಳಿಂದ ನಡೆಯುತ್ತ ಬಂದ ಓಕುಳಿ ಕೊನೆಯ ದಿನ ಇಡೀ ನಗರಕ್ಕೆ ಅಕ್ಷರಶಃ ಬಣ್ಣದ ಮಜ್ಜನವಾಗಿತ್ತು. ಒಂದು ಸಮಯದಲ್ಲಿ ಯುವಕರ ನಡುವೆ ಜಲಯುದ್ಧವೇ ನಡೆಯುತ್ತಿತ್ತು ಎಂದು ನೋಡುಗರಿಗೆ ಭಾಸವಾಗುತ್ತಿತ್ತು. 150ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಮತ್ತು ಬಂಡಿಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರಲ್ ಗಳು ಗಾಡಿಯಲ್ಲಿ ಯುವಕರು ಯುದ್ಧಕ್ಕೆ ಹೋಗುವಂತೆ ಸಜ್ಜಾಗಿ ರಂಗಿನಾಟಕ್ಕೆ ಬಂದರು.

ಹೋಳಿಯಲ್ಲಿ ಕಟ್ಟಪ್ಪ!

ಪ್ರತಿಬಾರಿ ಒಂದಿಲ್ಲೊಂದು ಹೊಸತನಕ್ಕೆ ಸಾಕ್ಷಿಯಾಗುವ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಹೋಳಿ ಬಣ್ಣದಾಟ ಈ ಬಾರಿ ಬಾಹುಬಲಿಯ ಸಿನೆಮಾದ ಕಟ್ಟಪ್ಪನನ್ನೂ ಬಿಟ್ಟಿಲ್ಲ, ಹೌದು, ಜಿಲ್ಲೆಯ ಗದ್ದನಕೇರಿ ತಾಂಡಾದಲ್ಲಿ ನಿರಂತರವಾಗಿ ನಡೆದ ಬಣ್ಣದಾಟದ ಮಧ್ಯೆ ಯುವಕರು ಬಾಹುಬಲಿ ಸಿನೆಮಾದ ಪಾತ್ರಧಾರಿಗಳಾದ ಬಾಹುಬಲಿ ಮತ್ತು ಕಟ್ಟಪ್ಪನ ವೇಷಧರಿಸಿ ಯುದ್ದಾಸ್ತ್ರಗಳನ್ನು ಹಿಡಿದು ಶತ್ರುಗಳ ವಿರುದ್ಧ ಪರಸ್ಪರ ಹೋರಾಟ ಮಾಡುವ ಅಣುಕ ಪ್ರದರ್ಶನ ಮಾಡಿ ಗಮನ ಸೆಳೆದರು. ನೂರಾರು ಜನರ ಮಧ್ಯೆ ಬಾಹುಬಲಿ ಕಟ್ಟಪ್ಪನನ್ನು ಕೂಗಿ ಕರೆಯುವುದು, ಆತ ಬಾಹುಬಲಿ ರಕ್ಷಣೆಗೆ ನಿಲ್ಲುವುದು ಹೀಗೆ ಜನರ ಮನಸಿಗೆ ಹಿಡಿಸಿತು.
 

click me!