Commission ಆರಂಭಿಸಿದ್ದೇ ಕಾಂಗ್ರೆಸಿಗರು, ತನಿಖೆಗೆ ಒತ್ತಾಯಿಸಿರುವುದು ಹಾಸ್ಯಾಸ್ಪದ : ಬೊಮ್ಮಾಯಿ!

By Kannadaprabha News  |  First Published Nov 27, 2021, 9:56 AM IST

*40% ಕಮಿಷನ್‌ ದೂರಿಗೆ ಸಿಎಂ ತಿರುಗೇಟು
*ಕಾಂಗ್ರೆಸ್‌ ಅವಧಿಯ ಟೆಂಡರ್‌ಗಳೂ ತನಿಖೆ
*ಕಾಂಗ್ರೆಸ್ಸೇ ಪರ್ಸೆಂಟೇಜ್‌ ಜನಕ: ಬೊಮ್ಮಾಯಿ ಕಿಡಿ


ದಾವಣಗೆರೆ(ನ.27): ಗುತ್ತಿಗೆದಾರರಿಂದ ಶೇ.40ರಷ್ಟುಕಮಿಷನ್‌ (commission) ಪಡೆಯುತ್ತಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರ (governor) ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿರುವ ಕಾಂಗ್ರೆಸ್‌ (Congress) ಮುಖಂಡರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದ್ದು, ಕಾಂಗ್ರೆಸಿಗರೇ ಪರ್ಸೆಂಟೇಜ್‌ ಜನಕರು. ಅವರೇ ಈಗ ಕಮಿಷನ್‌ ವಿಚಾರದ ತನಿಖೆಗೆ ಒತ್ತಾಯಿಸಿರುವುದು ಹಾಸ್ಯಾಸ್ಪದ. ಅವರೇ ಆಸಕ್ತಿ ತೋರುತ್ತಿರುವುದರಿಂದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಗಿರುವ ಟೆಂಡರ್‌ಗಳನ್ನೂ ಸೇರಿಸಿ ಎಲ್ಲ ಟೆಂಡರ್‌ಗಳಿಗೆ ಸಂಬಂಧಿಸಿ ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಮಿಷನ್‌ ಆರಂಭಿಸಿದ್ದೇ ಕಾಂಗ್ರೆಸಿಗರು. ಕಮಿಷನ್‌ ಅನ್ನು ಪ್ರತಿ ಸಲವೂ ಹೆಚ್ಚಿಸಿಕೊಂಡು ಬಂದವರೂ ಅವರೇ, ಈಗ ಕಮಿಷನ್‌ ಬಗ್ಗೆ ತನಿಖೆಗೆ ಮನವಿ ಕೊಟ್ಟವರೂ ಅವರೇ. ಈ ವಿಚಾರ ಇಡೀ ಜಗತ್ತಿಗೇ ಗೊತ್ತಿದೆ. ಸ್ವತಃ ಇದು ಪತ್ರ ಬರೆದಿರುವ ಗುತ್ತಿಗೆದಾರರಿಗೂ ಗೊತ್ತಿದೆ. ಇದೊಂದು ಹಾಸ್ಯಾಸ್ಪದ ವರ್ತನೆ. ಪತ್ರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ನಿರ್ದಿಷ್ಟಕಾಮಗಾರಿ ಬಗ್ಗೆಯಾಗಲಿ, ಯಾವ ಇಲಾಖೆಯೆಂಬ ಬಗ್ಗೆಯಾಗಲೀ ನಿಖರವಾಗಿ ಮಾಹಿತಿಯೂ ಇಲ್ಲ. ಜನರಲ್‌ ಆಗಿ ಪತ್ರ ಬರೆದಿದ್ದಾರಷ್ಟೆಎಂದರು.

Latest Videos

undefined

ನಿರ್ದಿಷ್ಟವಾಗಿ ಯಾವುದೇ ಇಲಾಖೆ ಬಗ್ಗೆ ದೂರು ಕೊಟ್ಟಿಲ್ಲ

ಗುತ್ತಿಗೆದಾರರು ಪ್ರಧಾನಿಗೆ (Prime Minister) ಬರೆದ ಪತ್ರದಲ್ಲಿ ಯಾವ ಅವಧಿಯಲ್ಲಿ ಶೇ.40ರಷ್ಟುಕಮಿಷನ್‌ನ ಅನುಭವವಾಗಿದೆಯೆಂಬುದನ್ನು ಸ್ಪಷ್ಟವಾಗಿ ಬರೆದಿಲ್ಲ. ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿದ್ದ ಅನುಭವವನ್ನು ಪತ್ರದಲ್ಲಿ ಬರೆದಿರಬೇಕು. ಸ್ವತಃ ಕಾಂಗ್ರೆಸ್‌ನ ಇಬ್ಬರು ನಾಯಕರು ಪರ್ಸೆಂಟೇಜ್‌ ವಿಚಾರದಲ್ಲಿ ಪರಸ್ಪರ ಖುಷಿಯಿಂದ ಮಾತನಾಡಿದ್ದನ್ನು ನೀವು ಮಾಧ್ಯಮದವರೇ ರೆಕಾರ್ಡ್‌ ಮಾಡಿದ್ದೀರಿ ಎಂದು ತಿಳಿಸಿದರು. ಸಮಗ್ರವಾಗಿ, ನಿರ್ದಿಷ್ಟವಾಗಿ ಯಾವುದೇ ಇಲಾಖೆ ಬಗ್ಗೆ ದೂರು ಕೊಟ್ಟಿಲ್ಲ. ಆದರೂ, ತನಿಖೆಗೆ ಒತ್ತಾಯಿಸುವ ಕೆಲಸ ಮಾಡುತ್ತಿದ್ದಾರೆ. ಅವರೇ ತನಿಖೆಗೆ ತೀವ್ರ ಆಸಕ್ತಿ ತೋರಿದ್ದರಿಂದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಗಿರುವ ಟೆಂಡರ್‌ಗಳನ್ನೂ ಸೇರಿಸಿ, ಎಲ್ಲ ಟೆಂಡರ್‌ಗಳಿಗೆ ಸಂಬಂಧಿಸಿ ತನಿಖೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ಎಸಿಬಿಗೆ ಮುಕ್ತ ಸ್ವಾತಂತ್ರ್ಯ: ಸಿಎಂ

ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB Karnataka Anti Corruption Bureau)ಗ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಇದರಿಂದ ಭ್ರಷ್ಟರ ಬಂಡವಾಳ ಬಯಲಾಗಿದೆ. ವ್ಯವಸ್ಥೆಯ ಶುದ್ಧೀಕರಣ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಅದರಿಂದಾಗಿಯೇ ರಾಜ್ಯದ ವಿವಿಧೆಡೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ನೇತೃತ್ವದ ತಂಡಗಳು ಭ್ರಷ್ಟಅಧಿಕಾರಿಗಳ ಮನೆಗಳು, ಕಚೇರಿ, ಇತರೆಡೆ ದಾಳಿ ನಡೆಸಿ, ಅಕ್ರಮ ಆಸ್ತಿ ಬಯಲಿಗೆ ಎಳೆಯುತ್ತಿದ್ದಾರೆ ಎಂದು ಎಸಿಬಿ ದಾಳಿ ಕುರಿತ ಪ್ರಶ್ನೆಯೊಂದಕ್ಕೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

 'ನಿಮ್ಮದು ಜನಸ್ವರಾಜ್ ಅಲ್ಲ, ಜನಬರ್ಬಾದ್ ಯಾತ್ರೆ'

ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah)ಸರಣಿ ಟ್ವೀಟ್ ಮಾಡಿ   ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿಗಳೆ ನಿಮ್ಮ ಹನಿಮೂನ್ ಕಾಲ ಮುಗಿದಿದೆ. ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ (Karnataka Floods) ಜಿಲ್ಲೆಗಳಿಗೆ ಓಡಿಸಿ. ಕಣ್ಣೀರಿಟ್ಟು ಗೋಳಾಡುತ್ತಿರುವ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಹೇಳಿ. ಮಳೆ-ನೆರೆಗೆ ಸಿಕ್ಕಿ 20ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಹತ್ತು ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ, ಮನೆ ಬಿದ್ದು ಜನ ಬೀದಿಪಾಲಾಗಿದ್ದಾರೆ. ಇವರ ನೆರವಿಗೆ ಧಾವಿಸಬೇಕಾದ  ಆಡಳಿತ ಪಕ್ಷ ಮತ್ತು ಸರ್ಕಾರ ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ ಎಂದು ಆರೋಪಿಸಿದ್ದಾರೆ.

click me!