Mysuru: ಮಳೆ ಹಾನಿ ಕುರಿತು ನಿಖರ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿ: ಜಿ.ಟಿ.ದೇವೇಗೌಡ

By Govindaraj SFirst Published Sep 8, 2022, 1:56 PM IST
Highlights

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದಾಗಿ ಸುಮಾರು . 100 ಕೋಟಿ ಮೊತ್ತದಷ್ಟುಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆ ಹಾನಿ ಕುರಿತು ಶಾಸಕ ಜಿ.ಟಿ.ದೇವೇಗೌಡ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಮೈಸೂರು (ಸೆ.08): ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದಾಗಿ ಸುಮಾರು . 100 ಕೋಟಿ ಮೊತ್ತದಷ್ಟುಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆ ಹಾನಿ ಕುರಿತು ಶಾಸಕ ಜಿ.ಟಿ.ದೇವೇಗೌಡ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮತ್ತಷ್ಟುಹಾನಿಗೀಡಾಗುತ್ತಿರುವ ಹಿನ್ನಲೆಯಲ್ಲಿ ಎರಡು ದಿನಗಳೊಳಗೆ ಮತ್ತೊಮ್ಮೆ ಸರ್ವೆ ನಡೆಸಿ ನಿಖರವಾದ ನಷ್ಟದ ಅಂದಾಜು ಪಟ್ಟಿತಯಾರಿಸಿದ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸುವಂತೆ ತಾಕೀತು ಮಾಡಿದರು.

ಕೆರೆಗಳು ಕೋಡಿ ಒಡೆದ ಪರಿಣಾಮ ಅಪಾರ ಪ್ರಮಾಣದ ಹಾನಿಯಾಗಿದೆ. ಲೋಕೋಪಯೋಗಿ, ಪಂಚಾಯತ್‌ ರಾಜ್‌, ಜಿಲ್ಲಾ ರಸ್ತೆಗಳು, ಸೇತುವೆಗಳು ಹಾಳಾಗಿರುವುದರಿಂದ ಮೇಲ್ನೋಟಕ್ಕೆ . 100 ಕೋಟಿಗಿಂತ ಹೆಚ್ಚು ನಷ್ಟವಾಗಿದೆ ಎಂದು ಅವರು ಹೇಳಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಅನಾಹುತದ ಬಗ್ಗೆ ಎರಡು ದಿನಗಳ ಒಳಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅಧಿಕಾರಿಗಳಿಗೆ ಸೂಚಿಸಿದರು. ವರದಿ ಬಂದ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಲಾಗುವದು. ಕ್ಷೇತ್ರ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಕೆರೆಗಳಿವೆ. ಇವುಗಳ ಪೈಕಿ 20 ಕೆರೆಗಳು ಹಾನಿಯಾಗಿವೆ. 

Mysuru: ಮಳೆಹಾನಿಯಾದ ಪ್ರದೇಶಗಳಿಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ

ಕೆಲವು ಕೆರೆಗಳಲ್ಲಿ ಕೋಡಿ ಬಿದ್ದು ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ರಸ್ತೆಗಳು ಹಾಳಾಗಿವೆ. ಕೇರನಹಳ್ಳಿ ಕೆರೆ ಒಡೆದು 18 ತೋಟಗಳು ಹಾಳಾಗಿದೆ ಎಂದು ಮಾಹಿತಿ ನೀಡಿದರು. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಲೋಕೋಪಯೋಗಿ ಇಲಾಖೆಯ 16 ಸೇತುವೆಗಳು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ 2 ಸೇತುವೆಗಳು ಹಾನಿಯಾಗಿವೆ. ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಭೆಯಲ್ಲಿ ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ, , ಉಪ ವಿಭಾಗಾಧಿಕಾರಿ ಕಮಲಾಬಾಯಿ, ತಹಸೀಲ್ದಾರ್‌ ಗಿರೀಶ್‌, ಶ್ರೀರಾಂಪುರ ಪಪಂ ಮುಖ್ಯಾಧಿಕಾರಿ ಶ್ರೀಧರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

100ಕ್ಕೂ ಹೆಚ್ಚು ಮನೆ ಹಾನಿ: ಮುಂಗಾರು ಮಳೆ ಆರಂಭವಾದ ದಿನದಿಂದ ಈ ತನಕ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮೊನ್ನೆ ಸುರಿದ ಮಳೆಗೆ 35 ಮನೆಗಳು ಹಾನಿಯಾಗಿದೆ. ಹಲವಾರು ಕಡೆಗಳಲ್ಲಿ ಗೋಡೆಗಳು ಕುಸಿದು ಬಿದ್ದಿರುವ ಬಗ್ಗೆ ದೂರು ಬರುತ್ತಿದ್ದರೂ ಅಧಿಕಾರಿಗಳಿಂದ ಪೂರ್ಣ ಮಾಹಿತಿ ಸಿಗಬೇಕಿದೆ ಎಂದು ಜಿ.ಟಿ. ದೇವೇಗೌಡರು ಹೇಳಿದರು. ತಾಲೂಕಿನ ಮೂಗನಹುಂಡಿ, ತಿಬ್ಬಯ್ಯನಹುಂಡಿ ಗ್ರಾಮಗಳ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಮಳೆಗೆ ಸಿಲುಕಿ ಪುಟ್ಟಸ್ವಾಮಿ ಅವರು ಸಾಕಿದ್ದ 800 ನಾಟಿ ಕೋಳಿಗಳು, ಚೆಕ್ಕೆರೆ ಹಿಂಭಾಗದಲ್ಲಿರುವ ಗಂಗಾಧರ್‌ ಅವರ ಕೋಳಿ ಫಾರಂನಲ್ಲಿ 4ಸಾವಿರ ಕೋಳಿಗಳು ಮೃತಪಟ್ಟಿವೆ. ಸಾಹುಕಾರ್‌ ಹುಂಡಿ, ಜೆಟ್ಟಿಹುಂಡಿ, ಹುಯಿಲಾಳು ಕೆರೆ ಕೋಡಿ ಬಿದ್ದು ಬೆಳೆ ಹಾಳಾಗಿದೆ. ಲಿಂಗಾಂಬುಧಿ ಕೋಡಿ ಬಿದ್ದು ಸಮೀಪದ ಬಡಾವಣೆಗಳ ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ ಎಂದು ಅವರು ವಿವರಿಸಿದರು.

ಕಿಡ್ನಾಪ್‌ ಮಾಡಿದ್ದರಿಂದ ಬಿಜೆಪಿ ಬೆಂಬಲಿಸಿದೆವು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತ್ಯೇಕ ಸ್ಪರ್ಧೆಗೆ ತೀರ್ಮಾನ ಮಾಡಿ ಸಾ.ರಾ. ಮಹೇಶ್‌ ಅವರಿಗೆ ಹೇಳಿದ್ದರಿಂದಾಗಿ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಲಾಗಿತ್ತು. ಆದರೆ ನಮ್ಮ ಪಕ್ಷದ ಇಬ್ಬರನ್ನು ಕಾಂಗ್ರೆಸ್‌ನವರು ಕಿಡ್ನಾಪ್‌ ಮಾಡಿದ್ದರಿಂದ ನಾವು ಬಿಜೆಪಿ ಬೆಂಬಲಿಸಿದ್ದಾಗಿ ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್‌ ಸ್ವತಂತ್ರ ಸ್ಪರ್ಧೆಗೆ ಮುಂದಾಗಿದ್ದವು. ಈ ವೇಳೆ ನನ್ನ ಕ್ಷೇತ್ರದವರೇ ಆಗಿರುವ ನಿರ್ಮಲಾ ಹರೀಶ್‌ ಅವರೊಟ್ಟಿಗೆ ಮತ್ತೊಂದಿಬ್ಬರನ್ನು ಕಾಂಗ್ರೆಸ್‌ ಕಿಡ್ನಾಪ್‌ ಮಾಡಿ ಉಪ ಮೇಯರ್‌ ಹುದ್ದೆಗೆ ನಿಲ್ಲಿಸಿತು. 

ಸೆ.26ರಂದು ರೈತ ಸಂಘಟನೆಗಳ ಒಕ್ಕೂಟದಿಂದ ವಿಧಾನಸೌಧ ಚಲೋ: ಕುರುಬೂರು ಶಾಂತಕುಮಾರ್‌

ಆಗ ನಮ್ಮ ಪಕ್ಷದ ಪಾಲಿಕೆ ಸದಸ್ಯರೆಲ್ಲರೂ ಒಗ್ಗೂಡಿ ಬಿಜೆಪಿಯ ಮೇಯರ್‌ ಸ್ಥಾನದ ಅಭ್ಯರ್ಥಿಗೆ ಮತ ಹಾಕುವ ತೀರ್ಮಾನ ಕೈಗೊಂಡೆವು ಎಂದರು. ಉಪಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದವರು ಬಿಸಿಎ ಸರ್ಟಿಫಿಕೇಟ್‌ ಹಾಕಬೇಕಿತ್ತು. ಆದರೆ ಸರ್ಟಿಫಿಕೇಟ್‌ ಹಾಕದ ಸ್ವಯಂ ಕೃತ ಅಪರಾಧದಿಂದ ಅನಿವಾರ್ಯದಿಂದ ಎರಡು ಸ್ಥಾನ ಬಿಜೆಪಿಗೆ ಲಭಿಸಿದೆ. ಹೀಗಾಗಿ ಯಾವುದೇ ಎ ಅಥವಾ ಬಿ ಟೀಂ ಇಲ್ಲ. ಕುಮಾರಸ್ವಾಮಿ ಅವರು ನೇರ ಸ್ಪರ್ಧೆ ಮಾಡುವಂತೆ ಹೇಳಿದ್ದರು.

click me!