ರೈತರಿಗೆ ಸಹಾಯವಾಗಲು KMF 50ML ಹೆಚ್ಚಳ ಮಾಡಿದೆ. ಹೆಚ್ಚುವರಿ ಹಾಲನ್ನು ನೀಡಿ ₹2 ದರ ಏರಿಕೆ ಮಾಡಿದೆ. ಇದರಿಂದ ನಮ್ಮ ಉದ್ಯಮಕ್ಕೆ ಯಾವುದೇ ಹೆಚ್ಚಿನ ಹೊರೆಯಾಗುವುದಿಲ್ಲ. ಕಾಫಿ ಮತ್ತು ಟೀ ಬೆಲೆಯಲ್ಲಿ ಯಾವುದೇ ಏರಿಕೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್
ಬೆಂಗಳೂರು(ಜೂ.27): ನಂದಿನಿ ಹಾಲಿನ ದರ ಹೆಚ್ಚಳ ಮಾಡಿಲ್ಲ. ಉತ್ಪಾದನೆಯಾಗುತ್ತಿರುವ ಹೆಚ್ಚುವರಿ ಹಾಲಿನ ಮಾರಾಟಕ್ಕಾಗಿ ಗ್ರಾಹಕರಿಗೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ನೀಡಿ ಅದಕ್ಕೆ ತಕ್ಕ ದರವನ್ನಷ್ಟೇ ನಿಗದಿ ಮಾಡಲಾಗಿದೆ. ಹಾಗಾಗಿ ಹೋಟೆಲ್‌ಗಳಲ್ಲಿ ಕಾಫಿ, ಟೀ ದರ ಹೆಚ್ಚಳ ಸಲ್ಲದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಕೆಎಂಎಫ್ ಹಾಲಿನ ದರ ಏರಿಕೆ ಮಾಡಿಲ್ಲ. ರಾಜ್ಯದಲ್ಲಿ 90 ಲಕ್ಷ ಲೀಟರ್ ಇದ್ದ ಹಾಲಿನ ಉತ್ಪಾದನೆ 99 ಲಕ್ಷ ಲೀಟರ್‌ಗೆ ಹೆಚ್ಚಿದೆ. ಅದನ್ನು ಖರೀದಿಸಿ ಮಾರಾಟ ಮಾಡಬೇಕು ತಾನೆ? ಖರೀದಿಸುವುದಿಲ್ಲ ಎಂದರೆ ರೈತರಿಗೆ ನಷ್ಟವಾಗುತ್ತದೆ. ಹಾಗಾಗಿ ಅರ್ಧ ಲೀಟರ್ ಮತ್ತು 1 ಲೀಟರ್ ಹಾಲಿನ್ ಪ್ಯಾಕೆಟ್‌ನಲ್ಲಿ 50 ಮಿ.ಲೀ ಹೆಚ್ಚಳ ಮಾಡಿ ಅದಕ್ಕೆ ತಕ್ಕನಾಗಿ ದರ ನಿಗದಿಪಡಿಸಲಾಗಿದೆ. 2.10 ರು. ದರ ಹೆಚ್ಚಿಸಬೇಕಿತ್ತು. ಆದರೂ 2 ರು. ಹೆಚ್ಚಿಸಲಾಗಿದೆ ಅಷ್ಟೆ. ಹೀಗಿರುವಾಗ ಹೋಟೆಲ್‌ನವರು ಕಾಫಿ, ಟೀ ದರ ಹೆಚ್ಚಿಸಲು ಬರುವುದಿಲ್ಲ. ಹಾಲಿನ ದರ ಹೆಚ್ಚಿಸಿದ್ದರೆ ಅವರು ದರ ಏರಿಕೆ ಮಾಡಬಹುದಿತ್ತು’ ಎಂದರು.
ಶೀಘ್ರದಲ್ಲೇ ಕಾಫಿ, ಟೀ, ತಿಂಡಿ ಬೆಲೆ ಏರಿಕೆ; ಸೂಚನೆ ನೀಡಿದ ಬೆಂಗಳೂರು ಹೋಟೆಲ್ ಮಾಲೀಕರ ಸಂಘ
ಕಾಫಿ ಟೀ ದರ ಹೆಚ್ಚಳ ಸಲ್ಲದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಕೀತು ನೀಡಿದ ಬೆನ್ನಲ್ಲೇ ಟೀ, ಕಾಫಿ ದರದಲ್ಲಿ ಹೆಚ್ಚಳ ಮಾಡಲ್ಲವೆಂದು ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸ್ಪಷ್ಟನೆ ನೀಡಿದ್ದಾರೆ.
ಟೀ, ಕಾಫಿ ದರ ಹೆಚ್ಚಾಗುತ್ತೆ ಅನ್ನೋ ಗೊಂದಲಕ್ಕೆ ಪಿ.ಸಿ.ರಾವ್ ತೆರೆ ಎಳೆದಿದ್ದಾರೆ. ರೈತರಿಗೆ ಸಹಾಯವಾಗಲು KMF 50ML ಹೆಚ್ಚಳ ಮಾಡಿದೆ. ಹೆಚ್ಚುವರಿ ಹಾಲನ್ನು ನೀಡಿ ₹2 ದರ ಏರಿಕೆ ಮಾಡಿದೆ. ಇದರಿಂದ ನಮ್ಮ ಉದ್ಯಮಕ್ಕೆ ಯಾವುದೇ ಹೆಚ್ಚಿನ ಹೊರೆಯಾಗುವುದಿಲ್ಲ. ಕಾಫಿ ಮತ್ತು ಟೀ ಬೆಲೆಯಲ್ಲಿ ಯಾವುದೇ ಏರಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.