Latest Videos

ಬಾಗಲಕೋಟೆ: ಹಸೆಮಣೆ ಏರಬೇಕಿದ್ದವ ನಾಲ್ವರ ಪ್ರಾಣ ಉಳಿಸಿ ತಾನೇ ಅಸುನೀಗಿದ..!

By Kannadaprabha NewsFirst Published Jun 27, 2024, 5:15 AM IST
Highlights

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ತಲಾ ₹5 ಲಕ್ಷ ಪರಿಹಾರ ಕೊಡಲಾಗುವುದು. ಗಾಯಾಳುಗಳ ಆಸ್ಪತ್ರೆ ಖರ್ಚನ್ನು ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ತೇರದಾಳ(ಬಾಗಲಕೋಟೆ)(ಜೂ.27): ಮನೆಯ ಮೇಲಿದ್ದ ಹೈವೋಲ್ಟೇಜ್‌ ವಿದ್ಯುತ್‌ ತಂತಿ ಒಮ್ಮೇಲೆ ತುಂಡಾಗಿ ತಗಡಿನ ಶೆಡ್‌ ಮೇಲೆ ಬಿದ್ದ ಪರಿಣಾಮ, ಇನ್ನೇನು ಎರಡ್ಮೂರು ದಿನದಲ್ಲಿ ಮದುವೆಯಾಗಬೇಕಿದ್ದ 23 ವರ್ಷದ ಯುವಕ ಸೇರಿ ಇಬ್ಬರು ಅಸುನೀಗಿದ ಘಟನೆ ಬಾಗಲಕೋಟೆ ಜಿಲ್ಲೆ ತೇರದಾಳ ತಾಲೂಕಿನ ದಾಸರಮಡ್ಡಿ ಗಲ್ಲಿಯಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ಕೈದು ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಸರಮಡ್ಡಿಯ ಸಂತೋಷ ರಾಮಪ್ಪ ಸುಣಗಾರ (23) ಹಾಗೂ ಆತನ ಬಾವಿ ಪತ್ನಿಯ ತಾಯಿ ಬೆಳಗಾವಿ ಜಿಲ್ಲೆಯ ಬೆನ್ನಾಳದ ಶೋಭಾ ಹುಲ್ಲೆನ್ನವರ (40) ಮೃತರು. ದಾಸರಮಡ್ಡಿಯಲ್ಲಿ ಮಂಗಳವಾರ ಮತ್ತು ಬುಧವಾರ ದುರ್ಗಾದೇವಿಯ ಜಾತ್ರೆ ಇತ್ತು. ಇದಕ್ಕಾಗಿ ಆತನ ಮನೆಗೆ ನೆಂಟರು ಬಂದಿದ್ದರು. ಈ ಮಧ್ಯೆ, ಸಂತೋಷ ಅವರ ಮನೆ ಪಕ್ಕ ಹಾದು ಹೋಗಿದ್ದ ಹೈವೋಲ್ಟೇಜ್‌ ತಂತಿ ಇದ್ದಕ್ಕಿದ್ದಂತೆ ತುಂಡಾಗಿ ತಗಡಿನ ಶೆಡ್‌ ಮೇಲೆ ಬಿದ್ದಿದೆ. 

ಬಾಗಲಕೋಟೆ: ನಕಲಿ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆ, ಪೊಲೀಸ್ ಅಧಿಕಾರಿಗಳಿಂದ ದಾಳಿ

ಇದೇ ವೇಳೆ ದೇವಿಯ ಪಲ್ಲಕ್ಕಿ ಉತ್ಸವ ನೋಡಲು ನೆಂಟರೊಂದಿಗೆ ಈತ ದೇವಸ್ಥಾನಕ್ಕೆ ತೆರಳುತ್ತಿದ್ದ. ಈ ವೇಳೆ, ನಾಲ್ಕೈದು ಜನರಿಗೆ ವಿದ್ಯುತ್‌ ಸ್ಪರ್ಶವಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಸಂತೋಷ, ನಾಲ್ಕೈದು ಜನರನ್ನು ಎಳೆದು, ದೂಡಿ ಕಾಪಾಡಿದ್ದಾನೆ. ನಂತರ, ಆತನ ಕಾಲು ಹೈವೋಲ್ಟೇಜ್‌ ತಂತಿಗೆ ತಾಕಿದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದಾನೆ. ಆತ ವಿವಾಹವಾಗಬೇಕಿದ್ದ ಹುಡುಗಿಯ ತಾಯಿ ಶೋಭಾ ಕೂಡ ಅಸುನೀಗಿದ್ದಾರೆ. 

ಜೂ.28ಕ್ಕೆ ಆತನ ವಿವಾಹ ನಿಶ್ಚಯವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ತಲಾ ₹5 ಲಕ್ಷ ಪರಿಹಾರ ಕೊಡಲಾಗುವುದು. ಗಾಯಾಳುಗಳ ಆಸ್ಪತ್ರೆ ಖರ್ಚನ್ನು ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

click me!