
ಹಾಸನ (ನ.08): ಹಾಸನ ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನದ ಬಳಿಕ, ತಾಲೂಕಿನ ಸಾಲಗಾಮೆಯ ಬೀಕನಹಳ್ಳಿಯಲ್ಲಿರುವ ಪುರದಮ್ಮ (ಶ್ರೀ ಚೌಡೇಶ್ವರಿ ದೇವಿ) ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ಪಕ್ಷದ ಅಭಿಮಾನಿ ಹಾಗೂ ಕಾರ್ಯಕರ್ತರೊಬ್ಬರು ಪುರದಮ್ಮ ದೇವಿಗೆ ವಿಶೇಷ ಹರಕೆ ಕಟ್ಟಿಕೊಂಡಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ, ಈ ಹರಕೆಯನ್ನು ತೀರಿಸುವ ಕಾರ್ಯಕ್ರಮಕ್ಕಾಗಿ ಸಿಎಂ ಅವರು ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.
ಬೀಕನಹಳ್ಳಿಯ ಪುರದಮ್ಮ ದೇವಾಲಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೂವಿನ ಗಿಡ ನೀಡುವ ಮೂಲಕ ಅರ್ಚಕರು ಹಾಗೂ ಸ್ಥಳೀಯ ಮುಖಂಡರು ಶ್ರದ್ಧಾ-ಭಕ್ತಿಯಿಂದ ಸ್ವಾಗತಿಸಿದರು. ದೇಗುಲದ ಆವರಣದಲ್ಲಿದ್ದ ತೆಂಗಿನ ಸಸಿಗೆ ನೀರೆರೆದ ಸಿಎಂ, ಬಳಿಕ ದೇವಾಲಯದ ಒಳಪ್ರವೇಶಿಸಿ ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪುರದಮ್ಮ ದೇವಿಗೆ ಮೂರು ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ ಅವರು, ಒಡೆದ ಕಾಯನ್ನು ಆಯ್ದುಕೊಂಡು ಸೇವಿಸಿದರು. ನಂತರ ತೆಂಗಿನಕಾಯಿಯ ಮೇಲೆ ಕರ್ಪೂರ ಹಚ್ಚಿ ದೇವಿಗೆ ದೀರ್ಘವಾಗಿ ನಮಸ್ಕರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ದೇವಿಗೆ ಬಲಿ ಕೊಡುವ ಕುರಿಗೆ ತೀರ್ಥ ಪ್ರೋಕ್ಷಣೆ ಮಾಡಿ ನಮಸ್ಕರಿಸಿದರು.
ಹಾಸನಾಂಬೆ ದರ್ಶನೋತ್ಸವದ ಜೊತೆಗೆ ಪುರದಮ್ಮ ದೇವಿಯ ಸನ್ನಿಧಾನದಲ್ಲೂ ಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶೇಷ ಪೂಜೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲೂ ಭಾರಿ ಕುತೂಹಲ ಮೂಡಿಸಿದೆ. ಇನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರ ಪುರದಮ್ಮ ದರ್ಶನಕ್ಕೆ ಸಚಿವ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಲತಾ ಕುಮಾರಿ ಸೇರಿ ಹಲವು ಗಣ್ಯರು ಸಾಥ್ ನೀಡಿದರು.