
ತಿಪಟೂರು: ತುಮಕೂರಿನ ತಿಪಟೂರಿಗೆ ಕೇಂದ್ರ, ಜಲ ಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ರೈಲ್ವೆ ಕಾಮಗಾರಿಗಳನ್ನು ವೀಕ್ಷಿಸಲು ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕಿನ ನೂರಾರು ಮಹಿಳೆಯರು ಯಶವಂತಪುರ ಮಾರ್ಗದಿಂದ ತುಮಕೂರು ತಿಪಟೂರು ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತಿದ್ದ ಮಂಗಳ ಎಕ್ಸ್ ಪ್ರೆಸ್ ರೈಲನ್ನು ಪುನರಾಂಬಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಸಚಿವರು ಇದಕ್ಕೆ ಪ್ರತಿಕ್ರಿಯಿಸಿ ಈ ಬಗ್ಗೆ ಕೂಡಲೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಪತ್ರಿಕೆಯೊಂದಿಗೆ ಮಾತನಾಡಿದ ಮಹಿಳೆಯರು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆಗೆ ತೆರಳುತ್ತಿದ್ದೆವು. ಅಲ್ಲದೆ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಕಡಿಮೆ ಹಣದಲ್ಲಿ ದೇವರ ದರ್ಶನ ಮಾಡುತ್ತಿದ್ದೆವು. ಈ ಭಾಗದಲ್ಲಿ ಸಾವಿರಾರು ಮಕ್ಕಳು ಮಂಗಳೂರು, ಉಜಿರೆ, ಮೂಡುಬಿದರೆ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ತುಮಕೂರು ಮಾರ್ಗದಿಂದ ಸಂಚರಿಸುತ್ತಿದ್ದ ಏಕೈಕ ರೈಲು ಇದಾಗಿತ್ತು. ಸಚಿವರು ಮನಸ್ಸು ಮಾಡಿ ಮತ್ತೆ ಸಂಚಾರ ವ್ಯವಸ್ಥೆ ಮಾಡಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದು ಸಂಘದ ಪರವಾಗಿ ಸದಸ್ಯೆ ಭಾರತಿ ತಿಳಿಸಿದರು.
ಲೋಕಸಭಾ ಸದಸ್ಯರ ಅನುದಾನ ಹಾಗೂ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ರೈತನಿಗೆ ಟ್ರ್ಯಾಕ್ಟರ್ ಮಂಜೂರು ಮಾಡಲಾಗಿದ್ದು, ಹೊಸ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಸಂಸದ ಹಾಗೂ ಕೇಂದ್ರ ರೇಲ್ವೆ ಸಚಿವ ವಿ.ಸೋಮಣ್ಣ ರೈತನಿಗೆ ಕೀ ಹಸ್ತಾಂತರಿಸಿದರು.
ತಾಲೂಕಿನ ನಿಟ್ಟೂರಿನಲ್ಲಿ ಕರೇಕುರಿಹಟ್ಟಿ ಬಡ ರೈತ ವೆಂಕಟೇಶ್ ಅವರಿಗೆ ಟ್ರ್ಯಾಕ್ಟರ್ ಖರೀದಿಗೆ ಸಂಸದರ ನಿಧಿಯಿಂದ ವಿ.ಸೋಮಣ್ಣ ಅವರ ಅನುದಾನ ಸೇರಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಅನುದಾನ ಮಂಜೂರು ಮಾಡಲಾಗಿದ್ದು, ಈ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ರೈತರ ಕೃಷಿ ಚಟುವಟಿಕೆಯಲ್ಲಿ ಯಂತ್ರೋಪಕರಣ ಬಳಕೆ ಸರ್ವೇ ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಅನುದಾನವನ್ನು ಬಡ ರೈತರಿಗೆ ಒದಗಿಸುವ ನಿಟ್ಟಿನಲ್ಲಿ ನೂತನ ಟ್ರ್ಯಾಕ್ಟರ್ ಖರೀದಿಗೆ ಸಹಕಾರ ನೀಡಲಾಗಿದೆ. ಕೇಂದ್ರ ಸರ್ಕಾರದ ನಿರ್ಧಾರದಂತೆ ಕೃಷಿಕರಿಗೆ ಸಹಾಯಕ್ಕೆ ಅನುದಾನ ಬಳಕೆ ಮಾಡಿದ್ದೇವೆ ಎಂದು ಹೇಳಿದರು.
ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಪಿ.ಬಿ.ಚಂದ್ರಶೇಖರಬಾಬು, ಎನ್.ಸಿ. ಪ್ರಕಾಶ್, ಬ್ಯಾಟರಂಗೇಗೌಡ, ತಾಲೂಕು ಅಧ್ಯಕ್ಷ ಬಲರಾಮಯ್ಯ, ಬಿ.ಎಸ್. ಪಂಚಾಕ್ಷರಿ, ಜಿ.ಆರ್. ಪ್ರಕಾಶ್, ಹೇಮಂತ್ ಇತರರು ಇದ್ದರು.