ಇನ್ನಾರು ತಿಂಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು [ಡಿ.15]: ಮುಂದಿನ ಆರು ತಿಂಗಳಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕುರಿತು ಶನಿವಾರ ನಡೆಸಿದ ಸಭೆಯಲ್ಲಿ ನಿಲ್ದಾಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಆರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿಗೆ 40 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ವಾರದಲ್ಲಿ ಎಲ್ಲಾ ರೀತಿಯ ಪೇಪರ್ ಕೆಲಸ ಮುಗಿಸಬೇಕು. ಆರು ತಿಂಗಳಲ್ಲಿ ವಿಮಾನ ನಿಲ್ದಾಣ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕು. ನಿಲ್ದಾಣ ಕಾಮಗಾರಿಗೆ ಎಷ್ಟುಹಣ ಬೇಕಾದರೂ ಸರ್ಕಾರ ಬಿಡುಗಡೆ ಮಾಡಲು ಸಿದ್ಧವಿದೆ. ಆದರೆ, ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದು ತೃಪ್ತಿ ತಂದಿಲ್ಲ. ಮುಂದೆ ಈ ರೀತಿಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಡೆಸಲು ರನ್‌ವೇ ಉದ್ದವನ್ನು 1.20 ಕಿ.ಮೀ.ನಿಂದ 2.10 ಕಿ.ಮೀ.ಗೆ ವಿಸ್ತರಣೆ ಮಾಡುವುದು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರದಿಂದ ಭರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಮಾನ ನಿಲ್ದಾಣ ನಿರ್ಮಾಣದ ಯೋಜನಾ ವೆಚ್ಚವನ್ನು 40 ಕೋಟಿ ರು.ಗಳಿಂದ ಅಂದಾಜು 150 ಕೋಟಿ ರು.ಗೆ ಪರಿಷ್ಕರಿಸಲು ಅಗತ್ಯ ಕ್ರಮಕೊಳ್ಳಬೇಕು. ನಿಲ್ದಾಣದ ಕಾಮಗಾರಿಯನ್ನು ಎರಡು ಹಂತದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸಬೇಕು. ವಿಮಾನ ನಿಲ್ದಾಣದ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಯನ್ನು ಡಿಸೆಂಬರ್ ಅಂತ್ಯಕ್ಕೆ ಮತ್ತು ನಿಲ್ದಾಣ ಕಾಮಗಾರಿಯನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಲು ಸಮಯ ನಿಗದಿ ಮಾಡಲಾಯಿತು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಶ್ಯವಿರುವ ವಿಸ್ತೃತ ಯೋಜನಾ ವರದಿಯನ್ನು ರೈಟ್ಸ್ ಸಂಸ್ಥೆಯ ಮೂಲಕ ಎರಡು ಹಂತದಲ್ಲಿ ಸಿದ್ಧಪಡಿಸಲು ತೀರ್ಮಾನಿಸಲಾಯಿತು.
ತವರು ಜಿಲ್ಲೆಗೆ ಇನ್ನಷ್ಟುಕೊಡುಗೆ: ಶಿವಮೊಗ್ಗ ನಗರದ ಹಳೆಯ ಜೈಲನ್ನು ಸ್ವಾತಂತ್ರ್ಯ ಉದ್ಯಾನವನ ಮಾದರಿಯಲ್ಲಿ ಅಂದಾಜು 45 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣ ಮುಂಭಾಗದ ವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ 20 ಕೋಟಿ ರು. ಮಂಜೂರಾಗಿದ್ದು, ಕೂಡಲೇ ಏಳು ಕೋಟಿ ರು. ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ಬಸ್ ಸ್ಟಾಪ್ ನಿಂದ ಮನೆಗೆ ಡ್ರಾಪ್ : ಮಹಿಳೆಯರಿಗೆ ಪೊಲೀಸರಿಂದ ಹೊಸ ಸೇವೆ ...
ಶಿವಮೊಗ್ಗ ರೈಲ್ವೆ ಟರ್ಮಿನಲ್‌ಗೆ ಸಂಬಂಧಪಟ್ಟಂತೆ ಕೋಟೆ ಗಂಗೂರ್‌ನಲ್ಲಿ ಭೂಸ್ವಾಧೀನ ಮಾಡಿಕೊಂಡು ಕಾಮಗಾರಿ ಕೈಗೊಳ್ಳಬೇಕು. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸಿಂಗದೂರು ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸೇತುವೆಗೆ ಈಗಾಗಲೇ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ. ಕಾಮಗಾರಿಯನ್ನು ಪ್ರಾರಂಭಿಸಲು ಇರುವ ಅಡೆತಡೆಗಳನ್ನು ಪರಿಹರಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ರುದ್ರೇಗೌಡ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಇತರರು ಉಪಸ್ಥಿತರಿದ್ದರು.