ಗಗನಕ್ಕೇರಿದ್ದ ಈರುಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಜನ ನಿರಾಳರಾಗಿದ್ದಾರೆ. ಈರುಳ್ಳಿ ಕೊಳ್ಳುವುದಿರಲಿ, ಬೆಲೆ ಕೇಳಿ ಓಡುವ ಪರಿಸ್ಥಿತಿ ಇತ್ತು. ಇದೀಗ ತೀರ ಕಡಿಮೆಯಾಗದಿದ್ದರೂ ಸ್ವಲ್ಪ ಈರುಳ್ಳಿಯನ್ನಾದರೂ ಕೊಂಡು ತರಬಹುದು ಎನ್ನುಂತಿದೆ.
ಮಂಗಳೂರು(ಡಿ.15): ಕೆ.ಜಿ.ಯೊಂದಕ್ಕೆ ಬರೋಬ್ಬರಿ 200 ರು. ಹತ್ತಿರ ಹೋಗಿದ್ದ ಈರುಳ್ಳಿ ಬೆಲೆ ಈಗ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಶನಿವಾರ ಮಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ 70-80 ರು.ಗೆ ತಲುಪಿದೆ.
ಕಳೆದೊಂದು ತಿಂಗಳಿನಿಂದ ಜನಸಾಮಾನ್ಯರ ಕಣ್ಣೀರಿಗೆ ಈರುಳ್ಳಿ ಕಾರಣವಾಗಿತ್ತು. ಬಡ ವರ್ಗದ ಜನತೆ ಬೆಲೆ ಕೇಳಿಯೇ ತೆಪ್ಪಗಾದರೆ, ಇತ್ತ ಹೊಟೇಲ್‌ಗಳೂ ಈರುಳ್ಳಿ ಬಳಕೆಯನ್ನೇ ನಿಲ್ಲಿಸಿದ್ದರು. ಈರುಳ್ಳಿ ಬದಲಿಗೆ ಎಲೆಕೋಸು ಬಳಕೆ ಮಾಡತೊಡಗಿದ್ದರು. ಮಧ್ಯವರ್ತಿಗಳ ಹಾವಳಿಯಿಂದ ಬೆಲೆ ಗಗನಕ್ಕೇರಿದ ಆರೋಪ ವ್ಯಾಪಕವಾಗಿದ್ದರೂ ಈ ಕುರಿತು ಆಡಳಿತ ಯಾವ ಕ್ರಮವನ್ನೂ ವಹಿಸಿರಲಿಲ್ಲ.
‘ದಿನವಿಡಿ ಕುಡಿಯುವ ನೀರು’ ಕಾಮಗಾರಿ ಶೀಘ್ರ ಆರಂಭ.
ಇದೀಗ ಮಾರುಕಟ್ಟೆಗೆ ಬರುವ ಈರುಳ್ಳಿ ಪ್ರಮಾಣ ಏರಿಕೆಯಾಗಿದ್ದರಿಂದ ಸ್ವಲ್ಪ ಮಟ್ಟಿಗೆ ಬೆಲೆ ಇಳಿಕೆಯಾಗಿದೆ. ಕೇಂದ್ರ ಮಾರುಕಟ್ಟೆವ್ಯಾಪಾರಿಗಳ ಪ್ರಕಾರ ಬೆಲೆ ಇನ್ನೂ ಸ್ವಲ್ಪ ಇಳಿಯಬಹುದು. ಮಂಗಳೂರಿಗೆ ಈಗ ಮಹಾರಾಷ್ಟ್ರದಿಂದ ಈರುಳ್ಳಿ ಬರುತ್ತಿದೆ. ಹೊಸ ಈರುಳ್ಳಿಯ ಆಮದಿನೊಂದಿಗೆ ದರ ಇಳಿಕೆಯಾಗುತ್ತಿದೆ.
ಕೆಲ ದಿನಗಳ ಹಿಂದೆ ಈರುಳ್ಳಿಯ ಅಭಾವ ಕಾಡುತ್ತಿದ್ದಂತೆ ಟರ್ಕಿ ಹಾಗೂ ಈಜಿಪ್ಟ್‌ನಿಂದ ಈರುಳ್ಳಿಯನ್ನು ಆಮದು ಮಾಡಲಾಗಿತ್ತು. ಅಲ್ಲಿಂದ ಬಂದ ಸರಕೆಲ್ಲವೂ ಖಾಲಿಯಾಗಿದೆ. ಈಗ ದೇಸಿ ಈರುಳ್ಳಿ ಪ್ರಮಾಣ ಹೆಚ್ಚಿದ್ದರಿಂದ ಆಮದು ಮಾಡುವುದು ನಿಂತಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಆಕಾಶದಿಂದ ಪಾತಾಳಕ್ಕೆ: ಈರುಳ್ಳಿ ಬೆಲೆ 25 ರೂ. ಕೆಜಿಗೆ!