ಶೋಷಿತರ ಆರ್ಥಿಕ ಸಬಲೀಕರಣಕ್ಕೆ ಬದ್ಧ: ಸಿಎಂ ಯಡಿಯೂರಪ್ಪ

By Kannadaprabha NewsFirst Published Mar 24, 2021, 7:38 AM IST
Highlights

ದಲಿತರಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ನನ್ನನ್ನು ಸಂಪರ್ಕಿಸಿ| ಶೋಷಿತ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಕಟಿಬದ್ಧ| ಬಜೆಟಲ್ಲಿ ಸವಲತ್ತು ನೀಡಿದ್ದಕ್ಕೆ ದಲಿತ ಉದ್ದಿಮೆದಾರರಿಂದ ಬಿಎಸ್‌ವೈಗೆ ಅಭಿನಂದನೆ| 

ಬೆಂಗಳೂರು(ಮಾ.24): ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಎಸ್‌ಸಿಪಿ/ಟಿಎಸ್‌ಪಿ, ಕೆಐಎಡಿಬಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೀಡುವ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಮತ್ತಷ್ಟು ಜನರಿಗೆ ಉದ್ಯೋಗ ಕಲ್ಪಿಸಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು.

ಶೋಷಿತ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಕಟಿಬದ್ಧವಾಗಿದೆ. ಸಮ ಸಮಾಜ ನಿರ್ಮಾಣ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಒದಗಿಸುವುದು ಸರ್ಕಾರದ ಗುರಿ. ದಲಿತರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಯಾವುದೇ ಸಂದರ್ಭದಲ್ಲಿಯೂ ನನ್ನನ್ನು ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ದಲಿತ ಉದ್ಯಮಕ್ಕಾಗಿ ಬಜೆಟ್‌ನಲ್ಲಿ ಆರ್ಥಿಕ ಸವಲತ್ತು ನೀಡಿ ಪ್ರೋತ್ಸಾಹಿಸಿದ್ದಕ್ಕಾಗಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘವು ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

'ಯತ್ನಾಳ್ ಬಾಯಿಗೆ ಬೀಗ ಹಾಕಿ'  ಸಿಎಂ ಮನೆಗೆ ಶಾಸಕರ ತಂಡ.. ಸಚಿವರ ಮೇಲೂ ದೂರು

ದಲಿತರ ಭೂಮಿ ಖರೀದಿಗಾಗಿ ಶೇ.75ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಉದ್ಯಮದಾರರಿಗೆ ಶೇ.90ರಷ್ಟುರಿಯಾಯಿತಿ ನೀಡಲಾಗುತ್ತಿದೆ. ರಾಜ್ಯದ ಕೈಗಾರಿಕಾ ರಂಗದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗಾಗಿ ಉದ್ಯಮಶೀಲತೆ, ಕೌಶಲ್ಯ, ಸಾಮರ್ಥ್ಯ, ಸಾಲ ಸೌಲಭ್ಯ, ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರತಿ ಹಂತದಲ್ಲಿ ಸಹಾಯಹಸ್ತ ನೀಡಲು ಎಸ್‌ಸಿಪಿ/ಟಿಎಸ್‌ಪಿ ಕಾರ್ಯಕ್ರಮ, ಕೈಗಾರಿಕಾ ನೀತಿ-2020-25ರಲ್ಲಿಯೂ ವಿಶೇಷ ರಿಯಾಯಿತಿ ನೀಡಲಾಗಿದೆ. ಕೌಶಲ್ಯಾಭಿವೃದ್ಧಿ, ಬಂದರು, ಸಣ್ಣ ಕೈಗಾರಿಕಾ ನಿಗಮದಲ್ಲಿ ಯುವಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಮಾತನಾಡಿ, ಕೆಐಎಡಿಬಿ ವತಿಯಿಂದ ಮಂಜೂರಾದ ಭೂಮಿ ಖರೀದಿಸಲು ಕೆಎಸ್‌ಎಫ್‌ಸಿ ಅನುದಾನ ನೀಡುವುದಕ್ಕೆ ಹಿಂದೇಟು ಹಾಕುತ್ತಿದೆ. ಮುಖ್ಯಮಂತ್ರಿಗಳು ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವರಾದ ಜಗದೀಶ್‌ ಶೆಟ್ಟರ್‌, ಸಿ.ಸಿ.ಪಾಟೀಲ್‌, ಶಾಸಕರಾದ ಎನ್‌.ಮಹೇಶ್‌, ಚಂದ್ರಪ್ಪ, ಎಚ್‌.ಕೆ.ಕುಮಾರಸ್ವಾಮಿ, ಸಂಘದ ಕಾರ್ಯದರ್ಶಿ ಶ್ರೀನಿವಾಸ್‌ ಉಪಸ್ಥಿತರಿದ್ದರು.

4835 ಎಕರೆ ಖರೀದಿಗೆ ಪ್ರೋತ್ಸಾಹ: ಕಾರಜೋಳ

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಕೊರೋನಾ ಸಂದರ್ಭದಲ್ಲಿಯೂ ದೇಶದ ಯಾವುದೇ ರಾಜ್ಯ ನೀಡದ ಕೊಡುಗೆ ನೀಡಲಾಗಿದೆ. ಹಣ್ಣು-ತರಕಾರಿ ಮಾರುವವರು, ಮೀನು ಮಾರಾಟಗಾರರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ 1.42 ಲಕ್ಷ ಫಲಾನುಭವಿಗಳಿಗೆ 803 ಕೋಟಿಗಳನ್ನು ತಲಾ 25 ಸಾವಿರ ಸಬ್ಸಿಡಿ ಮತ್ತು 25 ಸಾವಿರ ಸಾಲದ ರೂಪದಲ್ಲಿ 50 ಸಾವಿರ ನೀಡಲಾಗಿದೆ ಎಂದರು.

ದಲಿತರ ಭೂಮಿ ಖರೀದಿಗೆ ಸರ್ಕಾರ ಪ್ರೋತ್ಸಾಹ ನೀಡಿದ್ದು, ಒಟ್ಟಾರೆ 4835 ಎಕರೆ ಜಾಗವನ್ನು ದಲಿತರು ಖರೀದಿ ಮಾಡಲು ಪ್ರೋತ್ಸಾಹ ಧನ ನೀಡಿದೆ. ಇಲ್ಲಿಯವರೆಗೂ ಯಾವುದೇ ಸರ್ಕಾರದ ಅವಧಿಯಲ್ಲಿ ಈ ಪ್ರಮಾಣದಲ್ಲಿ ಅವಕಾಶ ಕಲ್ಪಿಸಿರಲಿಲ್ಲ ಎಂದು ಹೇಳಿದರು.

ಕರ್ನಾಟಕ ದಲಿತ ಉದ್ದಿಮೆದಾರರ ಸಂಘವು ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಜಗದೀಶ್‌ ಶೆಟ್ಟರ್‌, ಸಿ.ಸಿ.ಪಾಟೀಲ್‌, ಶಾಸಕರಾದ ಎನ್‌.ಮಹೇಶ್‌, ಚಂದ್ರಪ್ಪ, ಸಂಘದ ಅಧ್ಯಕ್ಷ ಎಲ್‌.ಹನುಮಂತಯ್ಯ ಉಪಸ್ಥಿತರಿದ್ದರು.
 

click me!